ಹಣ ಗಳಿಕೆಗಾಗಿ ಸಂಶೋಧನೆ ಬೇಡ
ಆಳಂದ: ಕೇವಲ ಹಣ ಗಳಿಕೆಯ ಉದ್ದೇಶದಿಂದ ಸಂಶೋಧನೆ ಕೈಗೊಳ್ಳದೆ ಪ್ರಸ್ತುತ ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಸ್ಥಳೀಯ ಸಂಪನ್ಮೂಲಗಳ ಮೇಲೆ ಸಂಶೋಧನೆ ಕೈಗೊಂಡು ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಹಿರಿಯ ಬಂಡಾಯ ಸಾಹಿತಿ ಡಾ. ಪ್ರಭು ಖಾನಾಪುರೆ ಯುವ ಸಂಶೋಧಕರಿಗೆ ಕರೆ ನೀಡಿದರು.
ಪಟ್ಟಣದ ಸಮತಾಲೋಕ ಶಿಕ್ಷಣ ಸಂಸ್ಥೆಯ ಸಂಬುದ್ಧ ಪದವಿ ಮಹಾವಿದ್ಯಾಲಯದಲ್ಲಿ ಎ.ವಿ. ಪಾಟೀಲ ಪದವಿ ಮಹಾವಿದ್ಯಾಲಯದ ಪಿಎಚ್ಡಿ ಪುರಸ್ಕೃತ ಸಸ್ಯಶಾಸ್ತ್ರದ ಪ್ರಾಧ್ಯಾಪಕ ರಾಜಶೇಖರ ಶಿವಶರಣಪ್ಪಾ ಬಬನೂರ್ ಅವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜಕ್ಕೆ ಉಪಯುಕ್ತ: ರಾಸಾಯನಿಕ ಮುಕ್ತವಾಗಿ ಕೇವಲ ಹತ್ತರಕಿ ಪಲ್ಯದ ಮೇಲೆ ಸಂಶೋಧನೆ ಕೈಗೊಂಡು ಆರೋಗ್ಯಕ್ಕೆ ಅದರ ಉಪಯುಕ್ತತೆ ಕುರಿತು ರಾಜಶೇಖರ ನೀಡಿದ ಸಂಶೋಧನೆ ಸಮಾಜಕ್ಕೆ ಉಪಯುಕ್ತವಾಗಿದೆ ಎಂದರು.
ಹೊಸ ಸಂಶೋಧನೆ ಅಗತ್ಯ: ದೊಡ್ಡ ವಸ್ತುಗಳ ಮೇಲೆ ರಾಸಾಯನಿಕ, ಅಪಾರ ಖರ್ಚಿನ ಸಂಶೋಧನೆಗಿಂತ ಸಣ್ಣ ಪ್ರಮಾಣದ ಜನ ಸಾಮಾನ್ಯರಿಗೂ ಅನುಕೂಲವಾಗುವ ರೀತಿಯಲ್ಲಿ ಹೊಸ ಸಂಶೋಧನೆ ಅಗತ್ಯ ಎಂದರು. ಸನ್ಮಾನ ಸ್ವೀಕರಿಸಿದ ಡಾ. ರಾಜಶೇಖರ ಬಬನೂರ್ ಮಾತನಾಡಿ, ಹತ್ತರಕಿ ಪಲ್ಯದ ಮೇಲೆ ಸತತ ಏಳು ವರ್ಷಗಳ ಸಂಶೋಧನೆ ಹಾಗೂ ವಿವಿಧ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದ ಮೇಲೆ ಅದರ ಮಹತ್ವ ಬಿಚ್ಚಿಡಲು ಸಾಧ್ಯವಾಗಿದೆ.
ಮನುಷ್ಯನು ಪ್ರಯತ್ನದಲ್ಲಿದ್ದರೆ ಅಸಾಧ್ಯವೆಂಬುದು ಮತ್ತೊಂದಿಲ್ಲ ಎಂದು ಹೇಳಿದರು.
ಸಂಸ್ಥೆಯ ಆಡಳಿತಾಧಿಕಾರಿ ಮಲ್ಲಿನಾಥ ಯಲಶೆಟ್ಟಿ, ಪ್ರಾಚಾರ್ಯ ಅಶೋಕ ರೆಡ್ಡಿ, ಪ್ರಾಧ್ಯಾಪಕ ಶಿವುಕುಮಾರ ದಾನಾಯಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಸಂಸ್ಥೆಯ ಶಾಲಾ ಕಾಲೇಜುಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿನಿ ಶಿಲ್ಪಾ ಸದಲಾಪುರೆ ಕಾರ್ಯಕ್ರಮ ನಿರೂಪಿಸಿ, ಶಿವಶರಣಪ್ಪಾ ಶೆಳಕೆ ಸ್ವಾಗತಿಸಿದರು. ದಾನಮ್ಮಾ ಅವರು ಕಾರ್ಯಕ್ರಮದಲ್ಲಿ ವಂದಿಸಿದರು.