ಕಣಮಸ ಶಾಲೆ: ಉಪಹಾರ ಸೇವಿಸಿ 42 ಮಕ್ಕಳು ಅಸ್ವಸ್ಥ
ಗುಲ್ಬರ್ಗ: ಆಳಂದ ಅಕ್ಷರ ದಾಸೋಹದ ಉಪಹಾರ ಸೇವಿಸಿ ಸುಮಾರು 42 ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವ ಪ್ರಕರಣ ತಾಲೂಕಿನ ಕಣಮಸ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದೆ.
ಎಂದಿನಂತೆ ಮಧ್ಯಾಹ್ನ ಊಟದ ಮೊದಲು ಗೋಧಿ ಆಹಾರ ಧಾನ್ಯಗಳಿಂದ ತಯಾರಿಸಿದ ಉಪ್ಪಿಟ್ಟು ಹಾಗೂ ಮೊಸರು ಸೇವಿಸಿದ ಪರಿಣಾಮ 30 ಮಕ್ಕಳು ವಾಂತಿ ಮಾಡಿಕೊಂಡರು.
ನಂತರ 12 ಮಕ್ಕಳು ವಾಂತಿಮಾಡಿಕೊಂಡು ಅಸ್ವಸ್ಥರಾದರೆಂದು ಹೇಳಲಾಗಿದೆ. ಇವರಲ್ಲಿ ಮುಸ್ಕಾನ ಶಬ್ಬೀರ್, ಪಾರ್ವತಿ, ಗಣಪತಿ, ನಾಗಿಣಿ, ಸಿದ್ರಾಮಪ್ಪ, ಹಾಗೂ ಸಚಿನ ದತ್ತಾತ್ರೇಯ ಎಂಬ ಬಾಲಕರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಮುಸ್ಕಾನ ಶಬ್ಬಿರ, ನಾಗಿಣಿ, ಸಿದ್ರಾಮಪ್ಪರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುಲ್ಬರ್ಗ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಘಟನೆ ವಿವರ: ಬುಧವಾರ ಮಧ್ಯಾಹ್ನ ವೇಳೆಯಲ್ಲಿ ಹಾಲನ್ನು ಕಾಯಿಸಿ ನಂತರ ಮೊಸರು ಮಾಡಲು ಹೆಪ್ಪು ಹಾಕಲಾಗಿದೆ. ಅದೇ ಮೊಸರನ್ನು ಗುರುವಾರ ಬಿಸಿಯೂಟ ಹಾಕುವ ವೇಳೆಯಲ್ಲಿ ಉಪ್ಪಿಟ್ಟು ಜೊತೆ ಮಕ್ಕಳಿಗೆ ಸೇವಿಸಲು ಕೊಡಲಾಗಿದೆ. ಈ ಉಪ್ಪಿಟ್ಟು ಮೊಸರು ಸೇವಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
ಹೆಚ್ಚಿನ ಅನಾಹುತ ನಡೆದಿಲ್ಲ: ಅಸ್ವಸ್ಥಗೊಂಡ ಮಕ್ಕಳನ್ನು ಆಳಂದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಯಾವುದೇ ಹೆಚ್ಚಿನ ಅನಾಹುತ ನಡೆದಿಲ್ಲ. ತಾಲೂಕು ಆರೋಗ್ಯಾಧಿಕಾರಿ ಡಾ. ಸುಚಿತ್ರಾ ಬಿಲಗುಂದಿ, ವೈದ್ಯಾಧಿಕಾರಿ ಡಾ. ವಿ.ಕೆ. ಶೆಟ್ಟಿ ನೇತೃತ್ವದ ವೈದ್ಯಕೀಯ ತಂಡವು ಮಕ್ಕಳಿಗೆ ಔಷದೋಪಚಾರ ನೀಡಿ ಗುಣಪಡಿಸಿದರು. ರಾತ್ರಿ 11 ಗಂಟೆವರೆಗೂ ಚಿಕಿತ್ಸಾ ಕಾರ್ಯ ನೀಡಿ ಮಕ್ಕಳನ್ನು ವಾಹನಗಳ ಮೂಲಕ ಕಣಮಸ ಗ್ರಾಮಕ್ಕೆ ಕಳುಹಿಸಿ ಕೊಡಲಾಯಿತು. ಆಸ್ಪತ್ರೆಗೆ ತಹಸೀಲ್ದಾರ್ ಪರಮೇಶ್ವರ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯಾ ಇನಾಂದಾರ, ಅಕ್ಷರ ದಾಸೋಹ ಅಧಿಕಾರಿ ಸಿದ್ದರಾಮ ಚನ್ನಗೊಂಡ, ಮುಖ್ಯಗುರು ವಿಶ್ವನಾಥ ನಿಂಗಶೆಟ್ಟಿ ಹಾಗೂ ಶಿಕ್ಷಕರು ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಮಕ್ಕಳ ಪಾಲಕರು ಆಸ್ಪತ್ರೆಗೆ ದೌಡಾಯಿಸಿ ಮಕ್ಕಳ ಯೋಗಕ್ಷೇವು ನೋಡಿಕೊಂಡರು. ಘಟನೆಗೆ ಕಾರಣರಾದ ಅಡುಗೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ: ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೊಂಡು ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ವೆಂಕಯ್ಯಾ ಇನಾಮ್ದಾರ ತಿಳಿಸಿದ್ದಾರೆ.