ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಖರ್ಗೆಗೆ ಬೆಳಮಗಿ ನೇರ ಸವಾಲ್

Srinivasa Murthy VN
Updated On : 22 Mar 2014, 9:29 am

ಕ.ಪ್ರ. ವಾರ್ತೆ ಗುಲ್ಬರ್ಗ ಮಾ.21
ಖರ್ಗೆ ಕೆಲ್ಸಾ ಮಾಡ್ಯಾರ ಅಂತಾರ.  ಹಾಗಿದ್ರ ಚುನಾವಣೆಯೊಳ್ಗ ಪ್ರಚಾರ ಮಾಡೋದೇ ಬ್ಯಾಡ. ನಾನೂ ಮಾಡಲ್ಲ, ಅವರು (ಖರ್ಗೆ) ಮಾಡೋದು ಬ್ಯಾಡ. ಹೊರರಾಜ್ಯಕ್ಕೋ, ದೂರ ಎಲ್ಲಾದರೂ ಹೋಗಿ ಇರೋಣ. ಮತದಾರರು ಅದ್ಯಾವ ತೀರ್ಪು ಕೊಡ್ತಾರೋ ಕೊಡ್ಲಿ. ಯಾರು ಕೆಲಸವಂತರು, ಯಾರಿಲ್ಲ ಅನ್ನೋದನ್ನ ಮತದಾರರೇ ಅಲ್ಲವೇ ಕೊನೆಗೆ ತೀರ್ಮಾನಿಸೋದು..!
ಹೀಗೆಂದು ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆಗೆ, ಮತ್ತವರನ್ನು ಬೆಂಬಲಿಸುವ ಎಲ್ಲರಿಗೂ ನೇರವಾಗಿ ಸವಾಲು ಹಾಕಿದವರು ಮಾಜಿ ಸಚಿವ, ಗುಲ್ಬರ್ಗ(ಎಸ್ಸಿ ಮೀಸಲು) ಲೋಕಸಭೆ ಕ್ಷೇತ್ರದ ಬಿಜೆಪಿ ಹುರಿಯಾಳು ರೇವು ನಾಯಕ ಬೆಳಮಗಿ.
ಶುಕ್ರವಾರ ಇಲ್ಲಿ  ಚುನಾವಣಾ ಕಚೇರಿ ಉದ್ಘಾಟನೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಳಮಗಿ, ಮೋದಿ ಗಾಳಿ, ಬಿಜೆಪಿ ಅಲೆ ಗುಲ್ಬರ್ಗದಾಗ ಹೆಚ್ಚಾಗಿರೋದು ಕಂಡೇ ಖರ್ಗೆ ಬೆಂಬಲಿಗರು ಒಳಗೊಳಗೇ ಗೂಂಡಾಗರ್ದಿ ಮಾಡ್ಲಿಕತ್ತಾರ. ಇದೆಲ್ಲ ನಡೆಯೋದಿಲ್ಲ ಅನ್ನೋದನ್ನ ಅವರೆಲ್ಲರೂ ಚೆನ್ನಾಗಿ ಮನಗಾಣಬೇಕು. ಬರುವ ದಿನಗಳಲ್ಲಿ ಬಿಜೆಪಿ ಅಲೆ ಇದೆಯೇ ಹೊರ್ತು ಗೂಂಡಾಗರ್ದಿ ಮಾಡೋರಿಗೆ ಕಾಲವಿಲ್ಲ ಎಂದು ಮಾತಿನಿಂದ ತಿವಿದರು.
ಸುದ್ದಿಗೋಷ್ಠಿಯುದ್ದಕ್ಕೂ ಖರ್ಗೆ ಮತ್ತವರ ಬೆಂಬಲಿಗರ ವಿರುದ್ಧ ವಾಗ್ದಾಳಿ ಮಾಡಿದ ಬೆಳಮಗಿ, ಹಳೆ ಕೆಲಸಗಳೆಲ್ಲದಕ್ಕೂ ತಾವೇ ಮಾಡಿದ್ದು ಅಂತ ಹೇಳುತ್ತ ಪುಕ್ಕಟೆ ಪ್ರಚಾರ ಪಡೆದರೆ ಅದು ಗಟ್ಟಿಯಾಗಿ ಉಳಿಯೋದಿಲ್ಲ. ಗಾಳಿಯಲ್ಲೇ ಕರಗಿ ಹೋಗ್ತದೆ ಎಂದರಲ್ಲದೆ ವಾಜಪೇಯಿ ಸರ್ಕಾರದಲ್ಲೇ ಅನೇಕ ರೈಲು ಯೋಜನೆಗಳು ಮಂಜೂರಿಯಾಗಿದ್ದವು. ಅವುಗಳಿಗೇ ಗುದ್ದಲಿ ಪೂಜೆ, ಕಾಮಗಾರಿ ಆರಂಭ ಅಂತ ಪ್ರಚಾರ ಪಡೆದದ್ದೇ ಖರ್ಗೆ ರೈಲು ಮಂತ್ರಿಯಾಗಿ ಮಾಡಿದ ಸಾಧನೆ ಎಂದು ಟೀಕಿಸಿದರು.
ತಾವು ಶಾಸಕರಾಗಿ, 9 ವರ್ಷ ಪಶುಸಂಗೋಪನೆ ಸಚಿವರಾಗಿ ಮಾಡಿರುವ ಸಾಧನೆಗಳ ಪಟ್ಟಿ ಮಾಡಿದ ಬೆಳಮಗಿ, ಡೈರಿ ಕಾಲೇಜು ಮಹಾಗಾಂವಕ್ಕೆ ಕೊಟ್ಟೆ, ರಾಜ್ಯದಲ್ಲಿನ ಪಶುವೈದ್ಯರ ಬರ ನೀಗಿಸಲು ಶ್ರಮಪಟ್ಟೆ ಎಂದರು. ಪಶುಪಾಲನೆ ಸಚಿವರಾಗಿದ್ದು ತಾವು ಮಾಡಿದ ಕೆಲಸಗಳನ್ನು ವಿವರಿಸಿದರಲ್ಲದೆ ಸಿಕ್ಕ ಅವಕಾಶದಲ್ಲಿ ಜನೋಪಯೋಗಿ ಕೆಲಸಗಳನ್ನು ಮಾಡಿದ್ದಾಗಿ ಹೇಳಿದರು. ಕಳೆದ 4 ದಶಕಗಳಿಂದ ರಾಜಕೀಯದಲ್ಲಿರುವ ಹಿರಿಯರಾದ ಖರ್ಗೆ ಅವರು ಮಾಡಿರುವ ಕೆಲಸಗಳನ್ನು ಅಳೆದು ತೂಗಿ ಮತದಾರ ನೋಡುತ್ತಾನೆ ಎಂದರು.
ಖರ್ಗೆ ಬೆಂಬಲಿಗರಿಂದ ಗೂಂಡಾಗಿರಿ: ವಿಕೆ ಸಲಗರ, ಅಫಜಲ್ಪುರ ಸೇರಿದಂತೆ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಬಿಜೆಪಿ ಅಲೆ ಸ್ಪಷ್ಟವಾಗಿದೆ. ನಮೋ ಗಾಳಿ ಬೀಸುತ್ತಿರುವುದರಿಂದ ಕಾಂಗ್ರೆಸ್ಸಿಗರು ದಂಗಾಗಿದ್ದಾರೆ. ಹಳ್ಳಿಗಳಲ್ಲಿ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಕಚೇರಿ ತೆರೆಯಲು ಮುಂದಾದರೆ ಅಧಿಕಾರಿಗಳು ಅನುಮತಿಸುತ್ತಿಲ್ಲ, ಸತಾಯಿಸುತ್ತಿದ್ದಾರೆ ಎಂದು ದೂರಿದ ಬೆಳಮಗಿ ಚಿತ್ತಾಪುರದಲ್ಲಿ ವಿಶೇಷ ಹೂಡಿಕೆ ವಲಯ ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿಗಳಿಂದ ಪತ್ರಿಕಾ ಹೇಳಿಕೆ ಹೊರಬಿದ್ದಿರುವುದನ್ನೂ ತೀವ್ರವಾಗಿ ಆಕ್ಷೇಪಿಸಿದರು.
ಜಿಲ್ಲಾಧಿಕಾರಿಗಳೇ ಜಿಲ್ಲೆಯ ಚುನಾವಣಾಧಿಕಾರಿಗಳು. ನೀತಿ ಸಂಹಿತೆ ಜಾರಿಯಲ್ಲಿರುವ ಈ ದಿನಗಳಲ್ಲಿ ಇವರೇ ಹೊಸ ಹೂಡಿಕೆ ವಲಯದ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ನೋಡಿದರೆ ಜಿಲ್ಲಾಡಳಿತವೇ ಖರ್ಗೆ ಪರ ನಿಂತಂತಿದೆ ಎಂದು ಬೆಳಮಗಿ ದೂರಿದರು. ಇಂತಹದ್ದನ್ನೆಲ್ಲ ಸಹಿಸಲಾಗದು. ಅಭ್ಯರ್ಥಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ವಿರುದ್ಧ ದೂರು ನೀಡಬೇಕಾಗುತ್ತದೆ ಎಂದರು.
ನೈತಿಕತೆ ಆಧಾರದಲ್ಲಿ ಚುನಾವಣೆ ನಡೆಯಲಿ. ಹಣ, ತೋಳ್ಬಲದಿಂದ ಚುನಾವಣೆ ಬೇಡ. ನೈತಿಕ ಬಲದಿಂದ ಎಲ್ಲರೂ ಚುನಾವಣೆಯಲ್ಲಿ ಭಾಗವಹಿಸಬೇಕು ಎಂದ ಬೆಳಮಗಿ ಈ ಬಾರಿ ಬಿಜೆಪಿ ಅಲೆ ಕಂಡು ಕಂಗಾಲಾಗಿರುವ ಕಾಂಗ್ರೆಸ್ಸಿಗರು, ಖರ್ಗೆ ಬೆಂಬಲಿಗರು ಹಳ್ಳಿಗಳಲ್ಲಿ ಬಿಜೆಪಿಯವರೊಂದಿಗೆ ಕಾಲುಕೆದರಿ ಜಗಳ ಕಾಯುವ ಪ್ರವೃತ್ತಿ ತೋರುತ್ತಿದ್ದಾರೆ. ಇದನ್ನು ತಪ್ಪಿಸಬೇಕು ಎಂದು ಜಿಲ್ಲಾಡಳಿತಕ್ಕೆ ತಾವು ಆಗ್ರಹಿಸುವುದಾಗಿ ಹೇಳಿದರು.
ಮುಸ್ಲಿಂ ಮತಗಳೂ ಬಿಜೆಪಿಗೆ ಬರುತ್ತವೆ: ಚುನಾವಣಾ ಕಚೇರಿ ಉದ್ಘಾಟನೆಯ ಸಮಾರಂಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬೆಳಮಗಿ ಈ ಬಾರಿ ನಮೋ ಗಾಳಿ ವೇಗವಾಗಿ ಬೀಸುತ್ತಿದೆ ಎಂದರಲ್ಲದೆ ಯಾರು ಬಿಜೆಪಿ ಅಂದರೆ ಬೇಡವೆಂಬ ಧೋರಣೆಯಲ್ಲಿದ್ದರೋ ಅಂತಹ ಅಲ್ಪಸಂಖ್ಯಾತರ ಸಮುದಾಯದ ಶೇ. 5ರಿಂದ ಶೇ. 10ರಷ್ಟು ಮತಗಳು ಗುಲ್ಬರ್ಗದಲ್ಲಿ ಬಿಜೆಪಿಗೆ ಸಿಗಲಿವೆ ಎಂದರು.
ಲೋಕಸಭೆ ಚುನಾವಣೆಯನ್ನು ಮಹಾಯುದ್ಧ ಎಂದು ಬಣ್ಣಿಸಿದ ಅವರು ಕಾರ್ಯಕರ್ತರೊಂದಿಗೆ ತಾವು ಅದಾಗಲೇ 3 ತಿಂಗಳ ಹಿಂದಿನಿಂದಲೇ ಪ್ರವಾಸ ನಡೆಸುತ್ತ ಜಿಲ್ಲೆಯಲ್ಲಿ ಜನರ ಆಶಿರ್ವಾದ ಕೋರುತ್ತಿರುವುದಾಗಿ ಹೇಳಿದರು. ಶಾಸಕ ದತ್ತಾತ್ರೇಯ ಪಾಟೀಲ್, ಅಮರನಾಥ ಪಾಟೀಲ್, ಮುಖಂಡರಾದ ಶಿವಾನಂದ ಕಲ್ಲೂರ, ರಘುನಾಥ ಮಲ್ಕಾಪುರ, ಶಶಿಕಲಾ ತೇಂಗಳಿ, ಡಾ. ಇಂದಿರಾ ಶಕ್ತಿ, ಶರಣಪ್ಪ ತಳವಾರ, ಬಿಜೆಪಿ ನಗರಾಧ್ಯಕ್ಷ ವಿದ್ಯಾಸಾಗರ ಶಾಬಾದಿ, ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ್, ಮಾಜಿ ಶಾಸಕ ಎಂವೈ ಪಾಟೀಲ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ವಿದ್ಯಾಸಾಗರ ಕುಲ್ಕರ್ಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement