ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

20 ನಿಮಿಷ 20 ಸುದ್ದಿ

Srinivasa Murthy VN
Updated On : 23 Mar 2014, 10:24 am

ಗುಲ್ಬರ್ಗ: ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಕುರಿತ 'ಬಿಚ್ಚು ಮನಸ್ಸಿನ ದಿಟ್ಟ ಸಮಾಜವಾದಿ' ಮೆಗಾ ಸಾಕ್ಷ್ಯಚಿತ್ರ ಹಾಗೂ ಸಾಟಿಯಿಲ್ಲದ ಪಟೇಲ್ ಹಾಡುಗಳ ಕ್ಯಾಸೆಟ್ ಬಿಡುಗಡೆ ಸಮಾರಂಭವನ್ನು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಮಾ.24ರಂದು ಸಂಜೆ  ಹಮ್ಮಿಕೊಳ್ಳಲಾಗಿದೆ ಎಂದು ಸಾಕ್ಷ್ಯಚಿತ್ರದ ನಿರ್ಮಾಪಕ, ನಿರ್ದೇಶಕರಾದ ಹಿರಿಯ ಪತ್ರಕರ್ತ ಕೆ.ಎನ್. ರೆಡ್ಡಿ ತಿಳಿಸಿದರು. ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸಾಕ್ಷ್ಯಚಿತ್ರವನ್ನು, ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶಕುಮಾರ ಪುಸ್ತಕವನ್ನು, ಶಾಸಕ ಎಂ.ಸಿ ನಾಣಯ್ಯ ಕ್ಯಾಸೆಟನ್ನು ಬಿಡುಗಡೆ ಮಾಡುವರು. ಅತಿಥಿಯಾಗಿ ಶ್ರೀಹರಿ ಖೋಡೆ, ಬಸವರಾಜ ಹೊರಟ್ಟಿ, ಎಂ.ಪಿ. ನಾಡಗೌಡ, ಹುಣಸವಾಡಿ ರಾಜನ್, ಮಹಿಮಾ ಪಟೇಲ್ ಆಗಮಿಸುವರು ಎಂದು ಹೇಳಿದರು. ಎರಡೂವರೆ ವರ್ಷಗಳ ಕಾಲ ಸಮಯದಲ್ಲಿ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದ್ದು ಅದು 9 ಗಂಟೆಯದಾಗಿದೆ. ಇದರಲ್ಲಿ ರಾಜಕೀಯ, ಸಾಹಿತ್ಯ, ಸಿನಿಮಾ, ರಂಗಕಲಾವಿದರು, ಪಟೇಲರಿಗೆ 22 ವರ್ಷಗಳ ಕಾಲ ಗನ್ ಮ್ಯಾನ್ ಆಗಿ ಕಾರ್ಯನಿರ್ವಹಿಸಿದ ತಿಮ್ಮೇಗೌಡ ಸೇರಿದಂತೆ 25 ಜನರ ಸಂದರ್ಶನವಿದೆ.

ಸಹಕಾರ ಸಂಘಗಳ ರದ್ದತಿ: ಆಕ್ಷೇಪಣೆ ಸಲ್ಲಿಕೆ
ಗುಲ್ಬರ್ಗ: ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1956 ನಿಯಮ 1960ರ ಅಡಿಯಲ್ಲಿ ನೋಂದಣಿಯಾಗಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುವ ಗುಲ್ಬರ್ಗ ಜಿಲ್ಲೆಯ ಒಟ್ಟು 27 ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು ಹಾಗೂ ಕಾರ್ಯದರ್ಶಿಗಳು ಕಲಂ 72(1)  ಅನ್ವಯ ಈ ಸಂಘಗಳ ಬಗ್ಗೆ ಸಮಾಪನೆಗೊಳಿಸಿ ಸಲ್ಲಿಸಿದ ರದ್ದತಿ ಪ್ರಸ್ತಾವನೆಗಳ ಬಗ್ಗೆ ಲಿಖಿತ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಒಂದು ವಾರದೊಳಗೆ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಗೆ ಸಲ್ಲಿಸುವಂತೆ ಕೋರಲಾಗಿದೆ.  ಗುಲ್ಬರ್ಗ ಮತ್ತು ಸೇಡಂ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸ್ಥಗಿತಗೊಂಡಿರುವ ಈ ಸಹಕಾರಿ ಸಂಘಗಳನ್ನು ಸಮಾಪನೆಗೊಳಿಸುವ ರದ್ದತಿ ಪ್ರಸ್ತಾವನೆಗಳ ಬಗ್ಗೆ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಗೆ ಸಲ್ಲಿಸಿದ್ದಾರೆ. ಸದರಿ 27 ಸಹಕಾರ ಸಂಘಗಳ ಪಟ್ಟಿಯನ್ನು ಸಹಕಾರ ಸಂಘಗಳ ಉಪ ನಿಬಂಧಕರ ಹಾಗೂ ಗುಲ್ಬರ್ಗ ಮತ್ತು ಸೇಡಂ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಗಳಿಂದ ಪಡೆಯಬಹುದು.

ನಗರದಲ್ಲಿ ಉದ್ಯೋಗ ಮೇಳ 25ರಂದು
ಗುಲ್ಬರ್ಗ: ಗುಲ್ಬರ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮಾ.25ರಂದು ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಆರ್ಗನೈಸೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸುಮಾರು 1,200 ಹುದ್ದೆಗಳಿಗೆ ಕ್ಯಾಂಪಸ್ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಬೆಂಗಳೂರು ಸೇರಿದಂತೆ ಇನ್ನಿತರ ಕಡೆಗಳಿಂದ ಪ್ರತಿಷ್ಠಿತ 5ಕ್ಕೂ ಹೆಚ್ಚಿನ ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದು, ಈ ಕಂಪನಿಗಳಲ್ಲಿ ಎಸ್‌ಎಸ್‌ಎಲ್‌ಸಿ ಫೇಲ್, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಡಿಪ್ಲೊಮಾ, ಕಂಪ್ಯೂಟರ್ ಕೌಶಲ್ಯ, ಐಟಿಐ ಮಾಡಿದ ಮತ್ತು ತರಬೇತಿ ಪಡೆದುಕೊಂಡವರು ಹಾಗೂ ವಿಶೇಷವಾಗಿ ಬೆಂಗಳೂರಿನಲ್ಲಿ ಉದ್ಯೋಗ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಎಲ್ಲರೂ ಈ ಉದ್ಯೋಗ ಮೇಳದ ಸೌಲಭ್ಯ ಪಡೆಯಬೇಕೆಂದು ಗುಲ್ಬರ್ಗ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರೇವಣಸಿದ್ದಯ್ಯ ಎಸ್.ನೀಲಾ- 9945496784, 9620369964 ಸಂಪರ್ಕಿಸಬಹುದು.

ಶರಣಬಸವೇಶ್ವರ ರಥೋತ್ಸವ
ಚಿಂಚೋಳಿ ತಾಲೂಕಿನ ಖಾನಾಪುರ ಗ್ರಾಮದ ಮಹಾದಾಸೋಹಿ ಶರಣಬಸವೇಶ್ವರ ರಥೋತ್ಸವ ಅದ್ದೂರಿಯಾಗಿ ಜರುಗಿತು.

ಭಕ್ತಿ, ಭಾವದ ನಡುವೆ ಶರಣಬಸವೇಶ್ವರ ರಥೋತ್ಸವ
ಚಿಂಚೋಳಿ:ತಾಲೂಕಿನ ಗಡಿಭಾಗದ ಖಾನಾಪೂರ ಗ್ರಾಮದ ಮಹಾದಾಸೋಹಿ ಶರಣಬಸವೇಶ್ವರ 54ನೇ ರಥೋತ್ಸವ ಸಾವಿರಾರು ಭಕ್ತ ಸಮೂಹದ ಜೈಕಾರದೊಂದಿಗೆ ಶ್ರದ್ಧೆ, ಭಕ್ತಿ, ಸಂಭ್ರಮದಿಂದ ನಡೆಯಿತು. ರಥೋತ್ಸವದ ಅಂಗವಾಗಿ ಸುತ್ತಲಿನ ಕೊಟಗಾ, ಐನಾಪೂರ, ಚಂದನಕೇರಾ, ಭೂಯ್ಯಾರ (ಬಿ) ಸೇರಿದಂತೆ ಅನೇಕ ತಾಂಡಾದ ಭಕ್ತರು ದರ್ಶನ ಪಡೆದು ಭಕ್ತಿಯನ್ನು ಸಮರ್ಪಿಸಿದರು. ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಗೌಡಗಾಂವದ ಡಾ. ಜಡೆಸಿದ್ದೇಶ್ವರ ಶಿವಾಚಾರ್ಯರು,  ಶಿವಬಸವ ಶಿವಾಚಾರ್ಯರ್ಯರ ಕಾಡ ಮುಗಳಿ, ಚೆನ್ನಮಲ್ಲೇಶ್ವರ ತ್ಯಾಗಿ, ಸಿದ್ಧಾನಂದ ಶಿವಯೋಗಿ, ಶಾಸಕ ಡಾ.ಉಮೇಶ ಜಾಧವ್, ಹಿರಿಯ ಕಾಂಗ್ರೆಸ್ ಮುಖಂಡ ಈಶ್ವರ ನಾಯಕ ಮುಂತಾದವರು ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ವಿವಿಧ ಗ್ರಾಮ ಮತ್ತು ತಾಂಡಾಗಳಿಂದ ಆಗಮಿಸಿದ್ದ ಭಕ್ತರು ಹರಕೆಯನ್ನು ಅರ್ಪಿಸಿದರು. ರಾಮಲಿಂಗ ಕುಲ್ಕರ್ಣಿ, ದೇವೇಂದ್ರಪ್ಪಾ ಕುಲ್ಕರ್ಣಿ, ಅಪ್ಪಾರಾವ ಪಾಟೀಲ್, ನೀಲಕಂಠ ಪಾಟೀಲ್, ಮೋನಪ್ಪಾ ಸುತಾರ ಮುಂತಾದವರು ನೇತೃತ್ವ ವಹಿಸಿದ್ದರು.

ಭಿನ್ನಮತವಿಲ್ಲ, ಕ್ಷೇತ್ರಾದ್ಯಂತ ಪ್ರಚಾರ ಮಾಡುವೆ
ಯಾದಗಿರಿ: ರಾಯಚೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಶಿವನಗೌಡ ಮತ್ತು ನನ್ನ ಮಧ್ಯೆ ಯಾವುದೇ ಭಿನ್ನಮತವಿಲ್ಲ. ನಾನು ಲೋಕಸಭೆ ಟಿಕೆಚ್ ಆಕಾಂಕ್ಷಿಯಲ್ಲ. ಶೀಘ್ರದಲ್ಲೆ ಕ್ಷೇತ್ರಾದ್ಯಂತ ಪ್ರಚಾರ ಕೈಗೊಳ್ಳುವೆ ಎಂದು ಮಾಜಿ ಸಚಿವ ರಾಜುಗೌಡ(ನರಸಿಂಹನಾಯಕ) ತಿಳಿಸಿದರು. ರೈತರ ಸಮಸ್ಯೆ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಸಂಧರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಯಾವುದೇ ಕಾರಣಕ್ಕೂ ಲೋಕಸಭೆಗೆ ಸ್ಪರ್ಧಿಸುವ ಬಗ್ಗೆ ವಿಚಾರ ಮಾಡಿಲ್ಲ. ನನಗೆ ವರಿಷ್ಠರು ಕೇಳಿದಾಗ ಶಿವನಗೌಡರ ಹೆಸರು ಸೂಚಿಸಿದ್ದೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲವೆಂದು ಹೇಳಿದರು. ಶಿವನಗೌಡ ನನ್ನ ಆತ್ಮಿಯ ಸ್ನೇಹಿತ. ಅವರಿಗೆ ಕೇವಲ ಬೆಂಬಲಿಸುವುದಲ್ಲ,  ಅವರ ಪರವಾಗಿ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯಕೈಗೊಳ್ಳುತ್ತಿದ್ದೇನೆ ಎಂದು ತಿಳಿಸಿದರು. ನಾನು ದೆಹಲಿಗೆ ಹೋಗಿದ್ದು ನಿಜ. ಆದರೆ ಅಲ್ಲಿ ವರಿಷ್ಠರನ್ನು ಭೇಟಿಯಾಗಿದ್ದು ನನಗೋಸ್ಕರವಲ್ಲ. ನನ್ನ ಕೆಲವು ಆತ್ಮಿಯ ಗೆಳೆಯರಿಗೊಸ್ಕರ ಹೋಗಿದ್ದೇ. ವರಿಷ್ಠರಲ್ಲಿ ನಾನು ಯಾವುದೇ ರೀತಿಯ ಬೇಡಿಕೆ ಇಟ್ಟಿಲ್ಲ. ಮೇಲಾಗಿ ನನಗೆ ಲೋಕಸಭೆಗೆ ಹೋಗುವುದು ಇಷ್ಟವಿಲ್ಲ. ರಾಜ್ಯದಲ್ಲೆ ಇದ್ದು, ಕ್ಷೇತ್ರದ ಅಭಿನೃದ್ಧಿಗೆ ಸ್ಪಂದಿಸುತ್ತೇನೆ ಎಂದು ಹೇಳಿದರು.

ರಾಯಚೂರು ಕ್ಷೇತ್ರವನ್ನು ಮಾದರಿಯಾಗಿ ಮಾಡುವೆ
ಹುಣಸಗಿ: ನನಗೆ ಅಧಿಕಾರ ನೀಡಿದಲ್ಲಿ ಒಂದೇ ವರ್ಷದಲ್ಲಿ ರಾಯಚೂರ ಲೋಕಸಭಾ ಮತಕ್ಷೇತ್ರವನ್ನು ದೇಶದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ರಾಯಚೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಹೇಳಿದರು. ಪಟ್ಟಣದ ನಾಗಣ್ಣ ದಂಡಿನ್ ಅವರ ಮನೆಯಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಕಳೆದ ಬಾರಿ ಶಾಸಕನಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮೋದಿ ಅಲೆಯಲ್ಲಿ ಈ ಬಾರಿ ಬಿಜೆಪಿ ಪೂರ್ಣ ಪ್ರಮಾಣದ ಸರ್ಕಾರ ರಚನೆಯಾಗಲಿದೆ ಎಂದು ತಿಳಿಸಿದರು. ಮಾಜಿ ಸಚಿವ ರಾಜುಗೌಡ ಮಾತನಾಡಿ, ಈ ಹಿಂದೆ ಸುರಪುರದಿಂದ ನಾರಾಯಣಪುರದವರೆಗೆ ಪಾದಯಾತ್ರೆ ನಡೆಸಿ ರೈತರಿಗೆ ಮಾರ್ಚ್ ಅಂತ್ಯದವರೆಗೆ ನೀರು ಹರಿಸಬೇಕೆಂದು ಆಗ್ರಹಿಸಿದ ನಾಯಕರು ಈಗೇನು ಮಾಡುತ್ತಿದ್ದಾರೆ. ನೀರಿನಲ್ಲಿ ರಾಜಕೀಯ ಮಾಡಿ ಅಧಿಕಾರಕ್ಕೆ ಬಂದು ಈಗ ರೈತರಿಗೆ ಮೋಸ ಮಾಡುವುದು ಸರಿಯೇ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.

ಸ್ವಚ್ಛತೆಯಿಂದ ಆರೋಗ್ಯ ಭಾಗ್ಯ: ಕುಲಕರ್ಣಿ
ಚಿಂಚೋಳಿ: ಜನರು ತಮ್ಮ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ನಿಮ್ಮ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಲು ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಕುಮಾರ ಕುಲ್ಕರ್ಣಿ ಹೇಳಿದರು. ತಾಲೂಕಿನ ಚೆಟ್ಟಿನಾಡ ಸಿಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಕಲ್ಲೂರ ವತಿಯಿಂದ ಕಲ್ಲೂರ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ನಮ್ಮ ಸುತ್ತಲಿನ ಪರಿಸರದಲ್ಲಿ ಮಾಲಿನ್ಯವಾಗದಂತೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದರು. ಕಂಪನಿಯ ಸಿಬ್ಬಂದಿ ಅಣ್ಣಾಜಿರಾವ್ ಮಾತನಾಡಿ, ಕಂಪನಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕೈಕೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಡಾ. ಜಗದೀಶಚಂದ್ರ ಬುಳ್ಳಾ, ಡಾ. ಶಿವನಾಗಪ್ಪಾ ಪಾಟೀಲ್, ಡಾ.ಖುಸ್ರೋ ಅನ್ಸಾರಿ, ಡಾ. ತಹನಿಯತ ಬೇಗಂ, ಡಾ. ಫಹೀಮ ಪಟೇಲ್, ಡಾ. ಸುರೇಶ, ಡಾ. ವಿಶ್ವನಾಥ, ಡಾ. ಪ್ರಕಾಶ ಮುಂತಾದ ವೈದ್ಯರು ರೋಗಿಗಳ ತಪಾಸಣೆ ನಡೆಸಿದರು. ಜಯಪ್ರಕಾಶರೆಡ್ಡಿ ತಾಜಲಾಪುರ, ಸ್ವಾಗತಿಸಿದರು. ಶಿಬಿರದಲ್ಲಿ 500 ರೋಗಿಗಳಿಗೆ ತಪಾಸಣೆ ನಡೆಸಿ, ಉಚಿತ ಮಾತ್ರೆ, ಔಷಧ ನೀಡಲಾಯಿತು.

ಕಬ್ಬಿಗೆ 3,150 ಬೆಂಬಲ ಬೆಲೆ ನೀಡಿ: ರೈತ ಸಂಘ
ಯಾದಗಿರಿ: ಸರ್ಕಾರ ನಿಗದಿ ಮಾಡಿದ ಕಬ್ಬಿನ ಬೆಲೆ 2,650 ಅನ್ನು ಸಕ್ಕರೆ ಕಾರ್ಖಾನೆಯವರು ನೀಡುತ್ತಿಲ್ಲ. ಆದ್ದರಿಂದ ರೈತರಿಗೆ ನ್ಯಾಯಯುತ ಬೆಲೆ ಕೊಡಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತಸಂಘ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು. ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲಾ ಸಂಚಾಲಕ ಎಸ್.ಎಮ್. ಸಾಗರ ಮಾತನಾಡಿ, ಸರ್ಕಾರ ಪ್ರತಿ ಟನ್ ಕಬ್ಬಿಗೆ 2,650 ನೀಡುವಂತೆ ಎಲ್ಲ ಸಕ್ಕರೆ ಕಾರ್ಖಾನೆಗೆ ಸೂಚಿಸಿದೆ. ಆದರೆ ಜಿಲ್ಲೆಯ ವಡಗೇರಾ ಹತ್ತಿರದ ಸಕ್ಕರೆ ಕಾರ್ಖಾನೆ ಮಾತ್ರ ಪ್ರತಿ ಟನ್ನಿಗೆ 1,800 ಮಾತ್ರ ನೀಡುತ್ತಿದೆ. ಇದರಿಂದ ರೈತರು ತೀವ್ರ ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದರು. ಪ್ರತಿ ಎಕರೆ ಕಬ್ಬು ಬಿತ್ತನೆಗೆ ಸುಮಾರು 15ರಿಂದ 20 ಸಾವಿರ ವೆಚ್ಚ ಮಾಡಲಾಗುತ್ತದೆ. ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಸರ್ಕಾರದ ಅದೇಶವನ್ನು ಕಾರ್ಖಾನೆಗಳು ಉಲ್ಲಂಘನೆ ಮಾಡುತ್ತಿವೆ. ಅದಕ್ಕಾಗಿ ಇಂತವರ ವಿರುದ್ದ ಕ್ರಮ ಜರುಗಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ಶರಣಗೌಡ ಟಿ.ವಡಗೇರಾ, ಬಸವರಾಜ, ಅಬ್ದುಲ್, ಚಂದ್ರಶೇಖರ ಮ್ಯಾಗೇರಿ, ಮಲ್ಲಿಕಾರ್ಜುನ ಇದ್ದರು.

ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಇಂದಿನಿಂದ
ಗುಲ್ಬರ್ಗ: ಶರಣಬಸವೇಶ್ವರ ವಿಜ್ಞಾನ ಕಾಲೇಜು ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ  ಮಾ. 23ರಿಂದ 29ರವರೆಗೆ ರಾಮನಗರ ಬಡಾವಣೆ ಮತ್ತು ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಡಾ. ಶರಣಬಸವಪ್ಪ ಅಪ್ಪ ದಿವ್ಯ ಸಾನ್ನಿಧ್ಯ ವಹಿಸುವರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ. ಸಿ.ಎಸ್. ಉಗಾಜಿ ಕಾರ್ಯಕ್ರಮ ಉದ್ಘಾಟಿಸುವರು. ಡಾ. ಜಿ. ಶ್ರೀರಾಮುಲು ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರಾಂಶುಪಾಲ ಪ್ರೊ. ಎಸ್.ಎ. ಉಡಚಣ ಅಧ್ಯಕ್ಷತೆ ವಹಿಸುವರು. ಮಾ.24ರಂದು ಹೈ-ಕ ಪ್ರದೇಶದ ಜನರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕುರಿತು ಪ್ರೊ. ಭಾಗ್ಯಮ್ಮ ಟಿ. ಉಪನ್ಯಾಸ ನೀಡಲಿದ್ದಾರೆ. ಮಾ. 25ರಂದು ಮಹಿಳೆಯ ಹಕ್ಕುಗಳು ಕುರಿತು ಡಾ. ಪಾಳೇಕರ, ಮಾ.26ರಂದು ಪ್ರಾಥಮಿಕ ಆರೋಗ್ಯ ರಕ್ಷಣೆ ಕುರಿತು ಡಾ. ಅಲ್ಲಂಪ್ರಭು ಸಿ. ಗುಡ್ಡಾ, ಮಾ.27ರಂದು ಭ್ರಷ್ಟಾಚಾರ ಸಮಾಜದ ಒಂದು ಸವಾಲು ಕುರಿತು ಪ್ರೊ. ಬಿ.ಎಸ್. ಬಿರಾದಾರ, ಮಾ.28ರಂದು ವ್ಯಕ್ತಿತ್ವ ನಿರ್ಮಾಣ ಮತ್ತು ನಾಯಕತ್ವ ಲಕ್ಷಣಗಳು ಕುರಿತು ಪ್ರೊ. ಶಿವದತ್ತ ಹೊನ್ನಳ್ಳಿ ಉಪನ್ಯಾಸ ನೀಡಲಿದ್ದಾರೆ.

ಬಿಜೆಪಿ ಸೇರೋಲ್ಲ, ಆದರೆ ನಾಯಕಗೆ ಬೆಂಬಲ: ಗುರು
ಶಹಾಪುರ: ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನೆಯವರೆಗು ಬಂದವರಿಗೆ ಮನ್ನಣೆ ನೀಡುವುದು ಧರ್ಮ. ಇದು ಬಹುತೇಕ ಕಾರ್ಯಕರ್ತರ ಆಶಯವು ಆಗಿದ್ದುದರ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶಿವನಗೌಡ ನಾಯಕರಿಗೆ ಪ್ರಸ್ತುತ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಶಾಸಕ ಗುರುಪಾಟೀಲ ಶಿರವಾಳ ತಿಳಿಸಿದರು. ಪಟ್ಟಣದಲ್ಲಿ ಆಯೋಜಿಸಿದ್ದ ಅಭಿಮಾನಿಗಳ, ಕಾರ್ಯಕರ್ತರ, ಹಿರಿಯ ಮುಖಂಡರ ಸಭೆಯಲ್ಲಿ ಅಭಿಪ್ರಾಯ, ಸಲಹೆ ಪಡೆದು ಮಾತನಾಡಿದ ಅವರು ಎಲ್ಲರ ಅಭಿಪ್ರಾಯದ ಮೇರೆಗೆ ಶಿವನಗೌಡನಾಯಕರಿಗೆ ಬೆಂಬಲ ನೀಡುವ ನಿರ್ಣಯವನ್ನು ತೆಗೆದುಕೊಂಡಿರುವದಾಗಿ ತಿಳಿಸಿದರು. ಕೆಂಭಾವಿ ಮುಖಂಡರಾದ ತಾಹೇರಪಾಶಾ ಮಾತನಾಡಿದರು. ಮುಖಂಡರಾದ ಮಲ್ಲಣ್ಣಮಡ್ಡಿ ಭೀಮಯ್ಯಗೌಡ ಕಟ್ಟಿಮನಿ, , ಡಾ.ಚಂದ್ರಶೇಖರ ಸುಬೇದಾರ, ರಾಮಚಂದ್ರ ಕಾಶೀರಾಜ, ಮಾಜಿ ಎಮ್‌ಎಲ್‌ಸಿ ಅಮಾತೆಪ್ಪ ಕಂದಕೂರ, ಮಾನಪ್ಪ ಹೊಸ್ಮನಿ ಈಶ್ವರ ಬಡಿಗೇರ ಸೇರಿದಂತೆ ಪುರಸಭೆಯ ಸದಸ್ಯರು, ತಾ.ಪಂ. ಸದಸ್ಯರು, ಗ್ರಾಮಪಂಚಾಯತ ಪ್ರಮುಖರು ಹಾಜರಿದ್ದರು.

ಬಿಜೆಪಿಗೆ ತಕ್ಕಪಾಠ ಕಲಿಸಿ: ಬಿ.ವಿ. ನಾಯಕ್
ಕೆಂಭಾವಿ:  ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತ, ಗುಡಿ, ಮಂದಿರ ಕಟ್ಟುತ್ತೇವೆ ಎಂದು ಹೇಳುವ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ರಾಯಚೂರು ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ ನಾಯಕ್ ಹೇಳಿದರು. ಪಟ್ಟಣದ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ, ಜಾತಿ ಹೆಸರಿನಲ್ಲಿ ದೇಶವನ್ನು ವಿಭಜನೆ ಮಾಡುತ್ತಾ ಬಿಜೆಪಿ ರಾಜಕೀಯ ಮಾಡುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತವನ್ನು ಜನ ನೋಡಿದ್ದಾರೆ. ಬಿಜೆಪಿ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ ಎಂದರು. ಬಿಜೆಪಿ ಅಭ್ಯರ್ಥಿ ಪಕ್ಷಾಂತರಿಯಾಗಿದ್ದು, ಸಚಿವರಾಗಿದ್ದಾಗ ರಾಯಚೂರು ಜಿಲ್ಲೆಗೆ ಬಂದ ಸಾವಿರಾರು ಕೋಟಿ ರುಪಾಯಿ ಹಣ ಕೊಳ್ಳೆ ಹೊಡೆದಿದ್ದಾರೆ, ಸದ್ಯ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಭ್ರಷ್ಟಾಚಾರ ನಡೆಸಿದ್ದು, ಇದಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಹಜರತ್ ಖಾಜಾ ಸೈಫನ್‌ಮುಲ್ಕರ ಬಂಡಿ ಜಾತ್ರೆ
ಕರಜಗಿ: ಇಲ್ಲಿ ಆಚರಿಸುವ ಹಬ್ಬಗಳು, ಜಾತ್ರೆಗಳು ತಮ್ಮದೇ ಆದ ಪರಂಪರೆಯನ್ನು ಬಿಂಬಿಸುತ್ತವೆ. ವೇಷ ಬೇರೆ, ಭಾಷೆ ಬೇರೆ ದೇಶವೊಂದೆ ಭಾರತ ಎಂಬುದನ್ನು ಸಾರಿ ಸಾರಿ ಹೇಳುತ್ತಿವೆ ಈ ಆಚರಣೆಗಳು. ಭವ್ಯ ಭಾರತ ಇತಿಹಾಸ-ಚರಿತ್ರೆ ಸಾರುವ ಈ ಆಚರಣೆಗಳಿಗೆ ಗತವೈಭವವಿದೆ. ಇಂತಹ ಭಾವೈಕ್ಯತೆಗೆ ಹೆಸರುವಾಸಿಯಾಗಿರುವ ಬಂಡಿ ಜಾತ್ರೆ ಅಫಜಲ್ಪುರ ತಾಲೂಕಿನ ಕುಬೇರ ಕರಜಗಿಯಲ್ಲಿ ಆಚರಣೆಯಲ್ಲಿದೆ. ಈ ವರ್ಷದ 880ನೇ ಜಾತ್ರಾ ಮಹೋತ್ಸವವು ಮಾ.26ರಿಂದ 28ರವರೆಗೆ ನಡೆಯಲಿದೆ.  ಮಾ. 26ರಂದು ಗೀ ಗೀ ಪದಗಳು, ರಾತ್ರಿ 10 ಗಂಟೆಗೆ ಕರಜಗಿ ಗ್ರಾಮದ ಪೊಲೀಸ್ ಪಾಟೀಲರವರ ಮನೆಯಿಂದ ರೈತರ ಬಂಡಿಯಲ್ಲಿ ಗಂಧ ತೆಗೆದುಕೊಂಡು ಹೈದ್ರಾ ಗ್ರಾಮಕ್ಕೆ ಹೋಗಿ ಗಂಧ ಏರಿಸುವ ಕಾರ್ಯಕ್ರಮವಿರುತ್ತದೆ. ಮಾ. 27ರಂದು ಹೈದ್ರಾ ಗ್ರಾಮದಿಂದ ಹೊರಟು ಕರಜಗಿಗೆ ಬರುವುದು, ಸಂಜೆ 7 ಗಂಟೆಗೆ ದೀಪ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಎಣ್ಣೆ ಕೊಡಗಳೊಂದಿಗೆ ಹೈದ್ರಾಕ್ಕೆ ಹೋಗುವುದು. ರಾತ್ರಿ 10.30 ಗಂಟೆಗೆ  ಕಲಿತ ರೈತನ ಕಣ್ಣೀರು  ಅರ್ಥಾರ್ಥ್  ಬರಿದಾದ ಬಾಳು  ಎಂಬ ನಾಟಕ ಏರ್ಪಡಿಸಲಾಗಿದೆ. ಮಾ.28ರಂದು ಜಿಯಾರತ್ ನೆರವೇರಿಸಲಾಗುವುದು.

ಪಲ್ಲಕ್ಕಿ ಮೆರವಣಿಗೆ
ಕೆಂಭಾವಿಯಲ್ಲಿ ಗುರುವಾರ ಶರಣ ಬಸವೇಶ್ವರ ಪುರಾಣ ಮಂಗಳ ಮಹೋತ್ಸವದ ನಿಮಿತ್ತ ಪಲ್ಲಕ್ಕಿ ಮೆರವಣಿಗೆ ನಡೆಯಿತು.

'ಮಹಿಳೆಯರ ರಕ್ಷಣೆಗೆ ಅನೇಕ ಕಾನೂನುಗಳು'
ಸುರಪುರ: ಸಮಾಜದಲ್ಲಿ ಮಹಿಳೆಯರು ಗೌರವಯುತವಾಗಿ ಬದುಕು ನಡೆಸಲು ಸರ್ಕಾರ ಮತ್ತು ನ್ಯಾಯಾಲಯಗಳು ಅನೇಕ ಕಾನೂನುಗಳನ್ನು ರೂಪಿಸಿವೆ ಎಂದು ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ಎಚ್. ದೇವರಾಜ ಹೇಳಿದರು. ಇಲ್ಲಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಶು ಅಭಿವೃದ್ಧಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಎಲ್ಲಾ ರಂಗಗಳಲ್ಲೂ ಮಹಿಳೆಗೆ ಮೀಸಲಾತಿ ನೀಡುವ ಮೂಲಕ ಸಮಾನತೆಯನ್ನು ಕಲ್ಪಿಸಿ ಕೊಡುತ್ತಿರುವಾಗ ಮಹಿಳೆಯರು ಇದರ ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು. ಕಿರಿಯ ಶ್ರೇಣಿ ನ್ಯಾಯಾಧೀಶ ಎಂ.ಶಶಿಧರಗೌಡ ಮಾತನಾಡಿದರು. ಸಿಡಿಪಿಒ ಧೇನುಸಿಂಗ ಚವಾಣ, ವಕೀಲರಾದ ನಿಂಗಣ್ಣ ಚಿಂಚೋಡಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಉದಯಕುಮಾರ, ಉಪಾಧ್ಯಕ್ಷೆ ಲಕ್ಷ್ಮೀ ಕವಲಿ, ದೇವಿಂದ್ರಪ್ಪ ಬೇವಿನಕಟ್ಟಿ, ತಮ್ಮಣ್ಣ ಇದ್ದರು.

ರಂಗಶೃಂಗದ ಸಹಮಿಲನ ಕಾರ್ಯಕ್ರಮ 28ರಂದು
ಗುಲ್ಬರ್ಗ:ವಿಶ್ವಜ್ಯೋತಿ ಪ್ರತಿಷ್ಠಾನವು ಮಾ.28ರಂದು ವರ್ಷ ಪೂರೈಸಿದ ಸಂಭ್ರಮದಲ್ಲಿ 'ರಂಗಶೃಂಗದ ಸಹಮಿಲನ' ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ. ಬೆಳಗ್ಗೆ ನಗರದ ನೂತನ ವಿದ್ಯಾಲಯ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಸಹಯೋಗದೊಂದಿಗೆ ಅನಂತರಾವ ದೇಶಮುಖ ಸಭಾಂಗಣದಲ್ಲಿ  ನಡೆಯಲಿರುವ ಸಮಾರಂಭದಲ್ಲಿ ಕವಿ, ನಾಟಕಕಾರ ಶಿವಕವಿ ಹಿರೇಮಠ ಜೋಗೂರರವರ ಕುರಿತು ಪರಿಚಯ ಜತೆಗೆ, ಈ ಭಾಗದ ಲೇಖಕರು ಪ್ರಕಟಿಸಿದ ನಾಟಕ-ರೂಪಕದ ಕೃತಿಗಳ ಪ್ರದರ್ಶನ  ಏರ್ಪಡಿಸಲಾಗಿದೆ.  ಲೇಖಕರು ತಮ್ಮ ಕೃತಿಯ ಒಂದೊಂದು ಪ್ರತಿಯನ್ನು ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ಕೇರಾಫ್ ವಿಲಾಸ ಕುಲಕರ್ಣಿ, ಪ್ಲಾಟ್ ಸಂ. 47, ಎಸ್‌ಬಿಎಚ್ ಬ್ಯಾಂಕ್ ಕಾಲೋನಿ, ಕರುಣೇಶ್ವರ ನಗರ, ಗುಲ್ಬರ್ಗ ಅಥವಾ ಮೊ. 9886560869ಗೆ ಸಂಪರ್ಕಿಸಬಹುದು.

ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ನಾಯಕ ಸಂಘದ ವಿರೋಧ
ಯಾದಗಿರಿ:ಹಿಂದುಳಿದ ವರ್ಗಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಯಾದಗಿರಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘವು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿ ಅವರಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ಸುಭಾಶ್ಚಂದ್ರ ವೃತ್ತದಿಂದ ನೂರಾರು ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿಯವರಿಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು. ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ ಮಾತನಾಡಿ, ರಾಜ್ಯ ಸರ್ಕಾರ ಕಬ್ಬಲಿಗ, ಕುರುಬ, ಬೆಸ್ತ ಗಂಗಾಮತ ಸೇರಿದಂತೆ ಇತರ ಹಿಂದುಳಿದ ವರ್ಗಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ. ರಾಜ್ಯ ಸರ್ಕಾರ ರಾಜಕೀಯ ಸ್ವಾರ್ಥಕ್ಕಾಗಿ, ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಜನರಿಗೆ ಅನ್ಯಾಯ ಮಾಡುತ್ತಿದೆ. ಇದನ್ನು ತಮ್ಮ ಸಂಘವು ಉಗ್ರವಾಗಿ ವಿರೋಧಿಸುತ್ತಿದೆ. ಇಂತಹ ಪ್ರಮಾಣಪತ್ರಗಳು ಗುಲ್ಬರ್ಗ ಮತ್ತು ಬೀದರ ಜಿಲ್ಲೆಗಳಲ್ಲಿ ನೀಡುತ್ತಿರುವುದು ಕಂಡು ಬಂದಿದೆ. ಇವುಗಳನ್ನು ಕೂಡಲೆ ನಿಲ್ಲಿಸಬೇಕು. ಇಲ್ಲವಾದಲ್ಲಿ ಆಯಾ ಜಿಲ್ಲಾಧಿಕಾರಿಗಳನ್ನು ಹೊಣೆ ಮಾಡಿ ಅವರ ಮೇಲೆ ಕ್ರಮ ಜರುಗಿಸಬೇಕು  ಎಂದು ಆಗ್ರಹಿಸಿದರು.

ಮಠಗಳಿಂದಲೇ ಸಂಸ್ಕೃತಿ ಸಂರಕ್ಷಣೆ: ಜಾಧವ್
ಚಿಂಚೋಳಿ: ಕಲ್ಯಾಣ ನಾಡಿನ ಮಠಗಳಿಂದ ಶಾಂತಿ ಮತ್ತು ಸಮಾಧಾನ ಸಿಗುತ್ತಿದೆ. ಸಂಸ್ಕ ೃತಿ ಮತ್ತು ಧಾರ್ಮಿಕ ಜಾಗೃತಿಯನ್ನುಂಟು ಮಾಡುತ್ತಿರುವ ಮಠಗಳಿಂದಲೇ ನಮ್ಮ ಸಂಸ್ಕೃತಿ ಉಳಿದಿವೆ ಎಂದು ಶಾಸಕ ಡಾ. ಉಮೇಶ ಜಾಧವ್ ಹೇಳಿದರು. ತಾಲೂಕಿನ ಖಾನಾಪುರದಲ್ಲಿ ಶನಿವಾರ ದಾಸೋಹಿ ಶರಣಬಸವೇಶ್ವರ 54ನೇ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಹಾರಾಷ್ಟ್ರದ ಅಕ್ಕಲಕೋಟ ಗೌಡಗಾಂವ ಮಠದ ಡಾ. ಜಡೇಸಿದ್ದೇಶ್ವರ ಶಿವಾಚಾರ್ಯರವರು ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಿವಬಸವ ಶಿವಾಚಾರ್ಯರು ಕಾಳಗಿ, ಕುಮಾರದೇವರು ವೀರುಪಾಕ್ಷೇಶ್ವರ ಮಠ ಕಾಡಮುಗಳಿ, ಚೆನ್ನಮಲ್ಲೇಶ್ವರ ತ್ಯಾಗಿಗಳು ಇಟಗಾ, ಸಿದ್ದಾನಂದ ಶ್ರೀ ಮುದ್ನಾಳ, ರಾಚಯ್ಯ ಸ್ವಾಮಿ ಕರಕನಳ್ಳಿ ಆಶೀರ್ವಚನ ಭಕ್ತರಿಗೆ ನೀಡಿದರು. ವಿಶ್ವನಾಥ ಮತ್ತು ಶಿವಕುಮಾರ ಸ್ವಾಮಿ ಸಂಗೀತ ಮತ್ತು ಪ್ರವಚನ ನಡೆಸಿಕೊಟ್ಟರು. ರಾಚಯ್ಯ ಸ್ವಾಮಿ ಖಾನಾಪುರ ಮತ್ತು ಸಂಗಡಿಗರಿಂದ ಹಾಸ್ಯ ರಸಮಂಜರಿ ಮತ್ತು ಜಾದೂ ಕಾರ್ಯಕ್ರಮ ನಡೆಸಿಕೊಟ್ಟರು.

ಶಿಕ್ಷಣದಿಂದ ಗೌರವ ಹೆಚ್ಚಳ: ಗುಳಬಾಳ ಶ್ರೀಗಳು
ಹುಣಸಗಿ: ಶಿಕ್ಷಣವು ಮನುಷ್ಯನ ಗೌರವವನ್ನು ಹೆಚ್ಚಿಸುತ್ತದೆ. ಆದ್ದರಿಂದ ಯಾರೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಗುಳಬಾಳದ ರಾಮಲಿಂಗೇಶ್ವರ ಮಠದ ಮರಿ ಹುಚ್ಚೇಶ್ವರಸ್ವಾಮಿಜಿಗಳು ಹೇಳಿದ್ದಾರೆ. ಕಲ್ಲದೇವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳಸಿಕೊಳ್ಳಬೇಕು. ಆದರ್ಶ ವ್ಯಕ್ತಿಗಳಾಗಬೇಕಾದರೆ ಶಿಕ್ಷಕರ ಮಾರ್ಗದರ್ಶನ ಪಡೆದುಕೊಳ್ಳಬೇಕು. ಅದೇ ರೀತಿ ಪಾಲಕರು ಮಕ್ಕಳಿಗೆ ಆಸ್ತಿ ಮಾಡುವುದರ ಬದಲು, ಮಕ್ಕಳನ್ನೆ ದೇಶದ ಅಮೂಲ್ಯ ಆಸ್ತಿಯನ್ನಾಗಿ ಮಾಡಲು ಪ್ರತಿಯೊಬ್ಬ ಪಾಲಕರೂ ಶ್ರಮಿಸಬೇಕು ಎಂದು ಆಶೀರ್ವಚನ ನೀಡಿದರು. ನಂತರ ಶಾಲೆಗೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement