27ರಿಂದ ಮೂರು ದಿನ ರಂಗೋತ್ಸವ
ಗುಲ್ಬರ್ಗ: ವಿಶ್ವ ರಂಗಭೂಮಿ ದಿನಾಚರಣೆ ಹಿನ್ನೆಲೆಯಲ್ಲಿ ಮಾ.27 ರಿಂದ 29 ರವರೆಗೆ ಮೂರು ದಿನಗಳ ರಂಗೋತ್ಸವವನ್ನು ಕನ್ನಡ ಭವನ ಆವರಣದಲ್ಲಿರುವ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಂಭ್ರಮ ಕಲಾ ಕುಟೀರ, ಗುಲ್ಬರ್ಗ ವಿಶ್ವವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕನ್ನಡ ಭವನದಲ್ಲಿ ಮಾ.27 ರಂದು ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತವಾಗಿ ಮೂರು ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಸುರೇಶ ಬಡಿಗೇರ, ಬಿ.ಎಚ್. ನಿರಗುಡಿ ಮತ್ತು ಸಂಭ್ರಮ ಕಲಾ ಕುಟೀರ ಕಾರ್ಯದರ್ಶಿ ಸುನೀಲ ಮಾನ್ಪಡೆ ಜಂಟಿಯಾಗಿ ತಿಳಿಸಿದ್ದಾರೆ. ಮಾ.27ರಂದು ಸಂಜೆ 6.30ಕ್ಕೆ ನಡೆಯಲಿರುವ ಸಮಾರಂಭವನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಶೇಖ್ ಮಾಸ್ಟರ್ ಉದ್ಘಾಟಿಸುವರು. ಗುಲ್ಬರ್ಗ ವಿವಿ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಮುಖ್ಯ ಅತಿಥಿಗಳಾಗಿರುವರು. ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಅಧ್ಯಕ್ಷತೆ ವಹಿಸುವರು.
ರಂಗಭೂಮಿ ಚಿಂತಕ ಗವೀಶ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ, ಮಾಜಿ ಸಿಂಡಿಕೇಟ್ ಸದಸ್ಯ ಸುಭಾಷ್ ರಾಠೋಡ, ಕಾಯಕ ಫೌಂಡೇಷನ್ ಸಂಸ್ಥಾಪಕ ಶಿವರಾಜ ಪಾಟೀಲ, ಕರ್ನಾಟಕ ಕುರುಬರ ಸಂಘದ ಕಾರ್ಯದರ್ಶಿ ಎಸ್.ಎಸ್. ಪೂಜಾರಿ, ಉದ್ಯಮಿ ಬಸವರಾಜ ಮತ್ತಿಮೂಡ ಅತಿಥಿಗಳಾಗಿರುವರು. ನಂತರ ಮೊದಲ ನಾಟಕ ರಾಮಧ್ಯಾನ ಪ್ರದ ರ್ಶನಗೊಳ್ಳಲಿದೆ. ಬೆಂಗಳೂರಿನ ರೂಪಾಂತರ ತಂಡದವರು ನಡೆಸಿಕೊಡುವ ಈ ನಾಟಕವನ್ನು ಡಾ. ರಾಮಕೃಷ್ಣ ಮರಾಠೆ ರಚಿಸಿದ್ದು, ಕೆಎಸ್ಡಿಎಲ್ ಚಂದ್ರು ನಿರ್ದೇಶಿಸಿದ್ದಾರೆ.
ಮಾ.28 ರಂದು ಸಂಜೆ 6.30ಕ್ಕೆ ನಡೆಯಲಿರುವ ಎರಡನೇ ನಾಟಕ ಪ್ರದರ್ಶನ ಸಮಾರಂಭದಲ್ಲಿ ಗುಲ್ಬರ್ಗ ವಿವಿ ವಿತ್ತಾಧಿಕಾರಿ ಪ್ರೊ. ಬಿ.ಎಂ. ಕನ್ನಳ್ಳಿ ಮುಖ್ಯ ಅತಿಥಿಗಳಾಗಿರುವರು. ಗುಲ್ಬರ್ಗ ವಿವಿ ಸಾಂಸ್ಕೃತಿಕ ಸಂಯೋಜಕ ಪ್ರೊ. ಕೆ. ಲಿಂಗಪ್ಪ ಅಧ್ಯಕ್ಷತೆ ವಹಿಸುವರು.