ಆಪ್ ಅಭ್ಯರ್ಥಿ ಲಲಿತಾನಾಯಕ್ ಆಸ್ತಿ 48.38 ಲಕ್ಷ
ಗುಲ್ಬರ್ಗ: ಆಮ್ ಆದ್ಮಿ ಪಾರ್ಟಿ (ಎಎಪಿ) ಅಭ್ಯರ್ಥಿಯಾಗಿ ಗುಲ್ಬರ್ಗ ಲೋಕಸಭೆ (ಪರಿಶಿಷ್ಟ ಜಾತಿ) ಮೀಸಲು ಕ್ಷೇತ್ರಕ್ಕೆ ಶನಿವಾರದಂದು ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವೆ ಬಿ.ಟಿ. ಲಲಿತನಾಯಕ ಅವರು ಚರ ಹಾಗೂ ಸ್ಥಿರ ಸೇರಿ ಒಟ್ಟು 48.38 ಲಕ್ಷ ಆಸ್ತಿ ಹೊಂದಿದ್ದಾರೆ. ಬೆಂಗಳೂರಿನ ಸಂಜಯನಗರದ ಜುಡಿಷಿಯಲ್ ಲೇಔಟ್ನಲ್ಲಿ ಮನೆ ಹೊಂದಿರುವ ಅವರು, 2012-13 ನೇ ಸಾಲಿನ ಆದಾಯ ರಿಟರ್ನಲ್ಲಿ 4 ಲಕ್ಷ ಆದಾಯ ತೋರಿಸಿದ್ದಾರೆ. ಒಟ್ಟು ಚರ ಆಸ್ತಿ 2323. 38 ಲಕ್ಷ ಇದ್ದು, ಅದರಲ್ಲಿ ನಗದು 1.5 ಲಕ್ಷ ಹೊಂದಿದ್ದರೆ, 2005 ರಲ್ಲಿ ಬ್ಯಾಂಕ್ನಲ್ಲಿ 2 ಲಕ್ಷ ಮುದ್ದತಿ ಠೇವಣಿ ಇಟ್ಟಿದ್ದಾರೆ. ಅಂಚೆ ಕಚೇರಿ ಮುದ್ದತಿ ಠೇವಣಿಯಲ್ಲಿ 6 ಲಕ್ಷ ತೊಡಗಿಸಿದ್ದಾರೆ. 3.28 ಲಕ್ಷ ಮೌಲ್ಯದ ಒಂದು ಸ್ಕೋಡಾ ಕಾರನ್ನು ಹೊಂದಿದ್ದಾರೆ. 60 ಸಾವಿರ ಮೌಲ್ಯದ ಒಂದು ಚಿನ್ನದ ಸರವಿದೆ ಎಂದು ಬಿ.ಟಿ. ಲಲಿತಾ ನಾಯಕ್ ಸಲ್ಲಿಸಿರುವ ಅಫಿಡ್ವಿಟ್ನಲ್ಲಿ ದಾಖಲಿಸಿದ್ದಾರೆ. ಬೆಂಗಳೂರಿನ ಸಂಜಯನಗರ ಜುಡಿಷಯಲ್ ಲೇಔಟ್ನಲ್ಲಿ ಸ್ವಂತ ಮನೆ ಹೊಂದಿದ್ದು, ಅದರ ಮೌಲ್ಯ 25 ಲಕ್ಷ ಆಗಿರುತ್ತದೆ ಎಂದು ಸ್ಥಿರ ಆಸ್ತಿ ವಿಭಾಗದಲ್ಲಿ ನಮೂದಿಸಿದ್ದಾರೆ. 68ರ ವರ್ಷ ವಯೋವಾನದ ಬಿ.ಟಿ. ಲಲಿತಾನಾಯಕ್ ಅವರು ಚಿತ್ರದುರ್ಗದ ಬಾಲಕಿಯರ ಪ್ರೌಢಶಾಲೆಯಲ್ಲಿ 6ನೇ ತರಗತಿ ಮುಗಿಸಿದ್ದಾರೆ.
ಅಲಬನೂರು; ಮತದಾನ ಜಾಗೃತಿ ಜಾಥಾ
ಸಿಂಧನೂರು: ತಾಲೂಕಿನ ಅಲಬನೂರು ಗ್ರಾಮದಲ್ಲಿ ವಳಬಳ್ಳಾರಿ ಚನ್ನಬಸವೇಶ್ವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನ ಕುರಿತು ಜಾಗೃತಿ ಮೂಡಿಸಿದರು. ಮುಖ್ಯಗುರು ಸುರೇಶ ಎಂ.ಕೆ. ಮತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಗಟ್ಟಿಕೊಳ್ಳಬೇಕಾದರೆ ಮುಂಬರುವ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಏಪ್ರಿಲ್ 17 ರಂದು ಮತದಾನ ನಡೆಯಲಿದೆ. ಶೇ.100 ರಷ್ಟು ಮತಗಳು ಚಲಾವಣೆಯಾಗುವಂತೆ ಮಾಡಬೇಕಿದೆ. ಈ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಜಾಗೃತಿ ಅಗತ್ಯ ಎಂದರು. ಶಿಕ್ಷಕರಾದ ನಾಗಪ್ಪ, ಎಂ.ಎನ್. ಚಕ್ಕಡಿ, ರಘು, ದಿನೇಶ, ಆನಂದ ಆಶ್ರೀತ್, ಮಲ್ಲಿಕಾರ್ಜುನ, ಅಮೃತ್ ಕುಮಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.