ಜಾತ್ರೆಗಳಿಂದ ಭಕ್ತಿ ಭಾವ ಹೆಚ್ಚಳ: ಗಂಗಾಧರ ಶ್ರೀ
ಯಾದಗಿರಿ: ಮಹಾತ್ಮರ ಮತ್ತು ಪುಣ್ಯಪುರುಷರ ಸ್ಮರಣೆ ನಿಮಿತ್ತ ಜಾತ್ರೆಗಳು ಜರುಗುತ್ತವೆ. ಈ ಜಾತ್ರೆಗಳಲ್ಲಿ ಭಾಗಿಯಾಗುವುದರಿಂದ ಜನರಲ್ಲಿ ಭಕ್ತಿ-ಭಾವಗಳು ಇಮ್ಮಡಿಗೊಳ್ಳುತ್ತವೆ ಎಂದು ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ನುಡಿದರು.
ಯಾದಗಿರಿ ಸಮೀಪದ ತಂಗಡಗಿ ಗ್ರಾಮದ ಆನಂದ ಆಶ್ರಮದಲ್ಲಿ ವಿಶ್ವಾರಾಧ್ಯರ ರಥೋತ್ಸವದ ನಂತರ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಾತ್ರೆಗಳಲ್ಲಿ ಜಾತಿ, ಮತ, ಬೇಧ, ಪಂಥವನ್ನು ಮರೆತು ಏಕೋಭಾವದಿಂದ ಜನತೆ ಭಾಗಿಯಾಗುತ್ತಾರೆ. ಶ್ರದ್ಧೆ ಮತ್ತು ನಿಷ್ಠೆಯಿಂದ ಆರಾಧ್ಯ ದೈವನಿಗೆ ನೆರವೇರಿಸುವ ಉಪವಾಸ ವ್ರತ ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲ, ಅಂತರಂಗ ಶುದ್ಧಿಯಾಗಿ ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಎಂದು ಹೇಳಿದರು.
ಭಕ್ತಿಯ ಬೆಳಕು: ದೋರನಹಳ್ಳಿಯ ವೀರಮಹಾಂತ ಶಿವಾಚಾರ್ಯ ಮಾತನಾಡಿ, ವಿಶ್ವಾರಾಧ್ಯರು ಈ ನಾಡು ಕಂಡ ಅಪರೂಪದ ಮಹಾತ್ಮರಾಗಿದ್ದಾರೆ. ತಮ್ಮ ತಪೋಬಲದಿಂದ ಅಧ್ಯಾತ್ಮದ ಮೇರುಗಿರಿಯನ್ನೇರಿದ ಮಹಾತ್ಮರಾಗಿದ್ದಾರೆ. ಅಂತವರ ನಾಮಸ್ಮರಣೆಯಿಂದ ಜನರ ಚಿಂತೆ ದೂರಾಗಿ, ಬಾಳಿನಲ್ಲಿ ಭಕ್ತಿಯ ಬೆಳಕು ಮೂಡುತ್ತದೆ ಎಂದರು.
ವೇದಿಕೆ ಮೇಲೆ ಹಲಕರಟಿಯ ಮುನೀಂದ್ರ ಶಿವಾಚಾರ್ಯರು, ದಂಡಗುಂಡ ಶ್ರೀಗಳು, ಆನಂದ ಆಶ್ರಮದ ಮಲ್ಲಣ್ಣಪ್ಪ ಶರಣರು, ಚನ್ನಪ್ಪಗೌಡ ಮೋಸಂಬಿ, ಡಾ. ಸುಭಾಷಚಂದ್ರ ಕೌಲಗಿ ಮತ್ತು ಹಣಮಂತರಾವ್ ಹೆಂದೆ ಸೇರಿದಂತೆ ಇತರರಿದ್ದರು. ಜಾತ್ರಾ ಮಹೋತ್ಸವದ ಸೇವಾರ್ಥಿಗಳಾದ ಶಿವಯ್ಯುಸ್ವಾಮಿ ಗಂವ್ಹಾರ, ಸಾಬಣ್ಣ ದೋರನಹಳ್ಳಿ, ಶಿವರಾಜಪ್ಪಗೌಡ ಠಾಣಾಗುಂದಿ, ಮಲ್ಲೇಶಪ್ಪ ತಳವಾರ್, ಸಿದ್ದಿಲಿಂಗರೆಡ್ಡೆಪ್ಪ ಗೋಗಿ, ಜಲಾಲ್‌ಸಾವ್ ಅಂಗಡಿ, ಬಸವರಾಜಪ್ಪಗೌಡ ಬಿದರಾಣಿ, ಶರಣಪ್ಪ ದೋರನಹಳ್ಳಿ ಅವರನ್ನು ಸತ್ಕರಿಸಲಾಯಿತು.
ಸಂಗೀತ, ನಾಟಕ: ನಂತರ ಗವಾಯಿಗಳಾದ ಬಂದೇನವಾಜ್ ರಾಜಶೇಖರ್ ಹಿರೇಮಠ ಅವರಿಂದ ಸುಗಮ ಸಂಗೀತ ಹಾಗೂ ಗ್ರಾಮದ ವಿಶ್ವರಾಧ್ಯ ನವತರುಣ ನಾಟ್ಯ ಸಂಘದ ವತಿಯಿಂದ ನಡೆದ ಕೆರಳಿದ ಗಂಡು ಹುಲಿ ನಾಟಕ ಜನಮನ ಸೂರೆಗೊಂಡಿತು.
ಬೆಳಿಗ್ಗೆ ಆನಂದಾಶ್ರಮದಲ್ಲಿನ ವಿಶ್ವಾರಾಧ್ಯರ ಕತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ ನಡೆಯಿತು. ನಂತರ ಮಂಗಲ ವಾದ್ಯಗಳು ಸುಮಂಗಲಿಯರ ಕಳಸ, ಪುರುವಂತರ ಸೇವೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು. ಸಂಜೆ ವಿಶ್ವಾರಾಧ್ಯರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.