ದೇಶದ ರಕ್ಷಣೆಗೆ ಬಿಜೆಪಿಗೆ ಮತ ಹಾಕಿ
ಕೆಂಭಾವಿ: ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ದೇಶವನ್ನು ಭ್ರಷ್ಟಾಚಾರದಿಂದ ರಕ್ಷಣೆ ಮಾಡಬೇಕಾದರೆ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ಮೂಲಕ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಮಾಜಿ ಸಚಿವ ರಾಜುಗೌಡ ಹೇಳಿದರು.
ಸಮೀಪದ ಮುದನೂರ ಗ್ರಾಮದಲ್ಲಿ ಭಾನುವಾರ ರಾಯಚೂರು ಮತಕ್ಷೇತ್ರದ ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ್ ಪರ ಮತ ಯಾಚಿಸಿದರು. ಕಾಂಗ್ರೆಸ್ ಅಭ್ಯರ್ಥಿ ಬಿ.ವಿ ನಾಯಕ ಎಂಥವರು ಎಂದು ಎಲ್ಲರಿಗೂ ಗೊತ್ತಿದೆ, ಶಿವನಗೌಡ ನಾಯಕ ವಿರುದ್ಧ ನೂರಾರು ಕೋಟಿ ಹಗರಣದ ಲೋಕಾಯುಕ್ತ ತನಿಖೆ ನಡೆದಿದೆ ಎಂದು ಹೇಳಿಕೆ ನೀಡಿರುವ ಅವರು ಆಧಾರವಿದ್ದರೆ ಬಹಿರಂಗ ಪಡಿಸಲಿ. ಶಿವನಗೌಡರ ವಿರುದ್ಧ ಯಾವುದೇ ತನಿಖೆ ನಡೆಯುತ್ತಿಲ್ಲ. ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಆರೋಪವನ್ನು ಅಲ್ಲಗಳೆದರು.
ಮೋದಿ ಪ್ರಧಾನಿಯಾಗಲಿ: ರಾಯಚೂರು ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಮಾತನಾಡಿ, ಇಂದು ದೇಶದ ರಕ್ಷಣೆಯಾಗಬೇಕಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ನರೇಂದ್ರ ಮೋದಿಯವರು ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ದಾರೆ. ನಾವೆಲ್ಲ ಸೇರಿ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಸಮಯ ಕೂಡಿಬಂದಿದೆ ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರನಗೌಡ ಮಲ್ಲಾಬಾದಿ, ಜಿಪಂ ಸದಸ್ಯ ಎಚ್.ಸಿ ಪಾಟೀಲ, ಹನುಮಪ್ಪ ನಾಯಕ್, ಸಂಗನಗೌಡ ವಜ್ಜಲ, ವೇಣುಮಾಧವ ನಾಯಕ್, ಸಿದ್ರಾಮರಡ್ಡಿ ಯಡಳ್ಳಿ, ಸುರೇಶ ಧಣಿ, ನಾಗರಡ್ಡೆಪ್ಪ ಚೌದ್ರಿ, ಸುಬ್ಬಣ್ಣ ಚೌದ್ರಿ, ಬಾಬುಗೌಡ ಅಗತೀರ್ಥ, ಯಲ್ಲಯ್ಯ ನಾಯಕ್, ರಾಮನಗೌಡ ನಾಯಕ್, ಸಿದ್ರಾಮರೆಡ್ಡಿ ಚೌದ್ರಿ, ರಮೇಶ ಕೊಳ್ಳಿ, ಸಂಜೀವ ದೊರಿ, ಶಾಂತು ನಾಟಿಕರ, ಗೋಪಾಲ ರೆಡ್ಡಿ ಹೊಸಮನಿ, ಹಣಮಯ್ಯ ಗುತ್ತೆದಾರ, ರವಿ ಎಸ್ಟಿಡಿ, ಬಾಪುಗೌಡ ಕೂಡಲಗಿ ಉಪಸ್ಥಿತರಿದ್ದರು. ಶಾಂತರಡ್ಡಿ ಚೌದ್ರಿ ಸ್ವಾಗತಿಸಿದರು.
ಬಿಜೆಪಿಗೆ ಸೇರ್ಫಡೆ: ಕಾಂಗ್ರೆಸ್ ತೊರೆದು ಸಿದ್ರಾಮರಡ್ಡಿ ಯಡಳ್ಳಿ, ಶಿವರಡ್ಡಿ ಯಡಳ್ಳಿ, ಚಂದ್ರಶೇಖರ ದೇಸಾಯಿ ಅಪಾರ ಬೆಂಬಲಿಗರೊಂದಿಗೆ ರಾಜುಗೌಡರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಬಿ.ವಿ. ನಾಯಕ ರಾಸಲೀಲೆಗಳ ದಾಖಲೆ ನನ್ನ ಬಳಿ ಇವೆ: ಶಿವನಗೌಡ
ಸುರಪುರ: ರಾಯಚೂರು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕರು ಮಹಿಳೆಯೊಂದಿಗೆ ನಡೆಸಿರುವ ರಾಸಲೀಲೆಗಳು ಇಡೀ ರಾಜ್ಯದ ಜನತೆ ವೀಕ್ಷಿಸಿದ್ದಾರೆ. ಇನ್ನು ಬೇರೆ ಬೇರೆ ರಾಸಲೀಲೆಗಳ 10 ಸಿಡಿಗಳು ನನ್ನ ಬಳಿ ಇವೆ ಎಂದು ಬಿಜೆಪಿ ಅಭ್ಯರ್ಥಿ ಶಿವನಗೌಡನಾಯಕ ಹೇಳಿದರು.
ಶನಿವಾರ ಸಂಜೆ ಬಿಜೆಪಿ ಕಚೇರಿ ಆವರಣದಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ದೇವದುರ್ಗ ತಾಲೂಕಿನ ಬಡವರಿಗಾಗಿ 55 ಸಾವಿರ ಮನೆಗಳು ಹಾಗೂ ರು. 3 ಸಾವಿರ ಕೋಟಿ ರೂಪಾಯಿ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಪಡಿಸಿದ ತೃಪ್ತಿ ನನಗಿದೆ ಎಂದರು.
50 ವರ್ಷ ರಾಜಕೀಯ ಮಾಡಿರುವ ಖರ್ಗೆ-ಧರ್ಮಸಿಂಗ್ ಅವರು ತಂದಿರುವ ಅನುದಾನಕ್ಕಿಂತಲೂ ಹೆಚ್ಚಾಗಿ, ನಾನು ಕೇವಲ ಮೂರು ವರ್ಷದಲ್ಲಿ ಮೂರು ಸಾವಿರ ಕೋಟಿ ಅನುದಾನ ತಂದಿದ್ದೇನೆ. ನನ್ನ ಬಗ್ಗೆ ಅಪಪ್ರಚಾರ ಮಾಡುವುದನ್ನು ಬಿಟ್ಟು ದಾಖಲೆಗಳು ತಂದು ನೇರವಾಗಿ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ ಎಂದು ಬಿ.ವಿ. ನಾಯಕ್ಗೆ ಸವಾಲು ಹಾಕಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ರಾಜೂಗೌಡ ಮಾತನಾಡಿ, ಶಿವನಗೌಡರ ಗೆಲವಿಗೆ ನಾವೆಲ್ಲರೂ ಸಹಕರಿಸುತ್ತೇವೆ. ಈ ಚುನಾವಣೆಯಲ್ಲಿ ನನ್ನ ತಾಲೂಕಿನಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರ ಇರುವಂತೆ ನೋಡಿಕೊಳ್ಳುವುದಾಗಿ ಹೇಳಿದರು.
ಜಿಲ್ಲಾ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ, ಎಚ್.ಸಿ. ಪಾಟೀಲ್, ಯಲ್ಲಪ್ಪ ಕುರುಕುಂದಿ, ಚಂದ್ರಶೇಖರ ಜಡಿಮರಳ, ನಾಗಣ್ಣ ದಂಡಿನ್, ಅಪ್ಪಾಸಾಹೇಬ ಪಾಟೀಲ್, ನಿಂಗಣ್ಣ ಬಾದ್ಯಾಪುರ, ವೇಣುಮಾಧವನಾಯಕ, ಪಾರಪ್ಪ ಗುತ್ತೇದಾರ್, ಜಯರಾಮ ನಾಯಕ, ಭೀಮಾಶಂಕರ ಬಿಲ್ಲವ್, ಪ್ರಕಾಶ ಗುತ್ತೇದಾರ್ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.