ನಿರ್ಮಿತಿ ಕೇಂದ್ರದಲ್ಲಿ ಕೋಟ್ಯಂತರ ರು. ಅವ್ಯವಹಾರ: ಡಾ. ಕುಳಗೇರಿ
ಗುಲ್ಬರ್ಗ: ಸ್ಥಳೀಯ ನಿರ್ಮಿತಿ ಕೇಂದ್ರದಲ್ಲಿ ಕೋಟ್ಯಂತರ ರು. ಕಾಮಗಾರಿಕೆಗಳನ್ನು ನೀಡಿ ಅವ್ಯವಹಾರ ನಡೆದಿರುವ ಬಗ್ಗೆ ಲೋಕಾಯುಕ್ತ ಅಭಿಯಂತರರು ಅಭಿಪ್ರಾಯ ಪಟ್ಟಿದ್ದು, ಇದನ್ನೆ ಆಧಾರವಾಗಿಟ್ಟುಕೊಂಡು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಹೈ.ಕ. ಯುವ ಹೋರಾಟ ಸಮಿತಿ ಅಧ್ಯಕ್ಷ ಡಾ. ರಾಜು ಕುಳಗೇರಿ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2000 ರಿಂದ 2010ರವರೆಗೆ 160 ಕೋಟಿ ರೂಗಳ ಕಾಮಗಾರಿಗಳನ್ನು ಟೆಂಡರ್ ಕರೆಯದೆ ನೀಡಲಾಗಿದೆ. ಈ ಬಗ್ಗೆ ಸರ್ಕಾರ ತುರ್ತು ಕ್ರಮಕೈಗೊಳ್ಳಬೇಕು ಎಂದರು.
ನಿಗದಿಪಡಿಸಿದ ಸಂಸ್ಥೆಗಳಿಗೆ ಮಾತ್ರ: ನಿರ್ಮಿತಿ ಕೇಂದ್ರದ ನಿಯಮಾವಳಿ ಪ್ರಕಾರ ಕೆಲವು ತುರ್ತು ಕಾಮಗಾರಿಗಳನ್ನು ಟೆಂಡರ್ ಇಲ್ಲದೆ ನೇರವಾಗಿ ನಿಗದಿಪಡಿಸಿದ ಸಂಸ್ಥೆಗಳಿಗೆ ಮಾತ್ರ ನೀಡಬೇಕು. ಆಶ್ರಯ ಮನೆಗಳ ನಿರ್ಮಾಣ, ಮೂಲ ಸೌಕರ್ಯದ ಕಾಮಗಾರಿ, ಬಂಗಲೆಗಳ ಕಟ್ಟಡ ಕಾಮಗಾರಿ, ಒಳಚರಂಡಿ ಕಾಮಗಾರಿಗಳು, ಉದ್ಯಾನವನಗಳ ಸುಧಾರಣೆ ಕಡಿಮೆ ವೆಚ್ಚದಲ್ಲಿ ತುರ್ತಾಗಿ ಖರೀದಿಸಬೇಕಾದ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರಕ್ಕೆ ವಹಿಸಬಹುದಾಗಿದೆ. ಆದರೆ ತುರ್ತಾಗಿ ಇಲ್ಲದ ಕೊಟ್ಯಾಂತರ ರು. ಕಾಮಗಾರಿಯನ್ನು ನಿರ್ಮಿಸಿ ಕೇಂದ್ರದ ಅಧಿಕಾರಿಗಳು ನೇರವಾಗಿ ನೀಡಿದ್ದಾರೆಂದು ಆರೋಪಿಸಿದ್ದಾರೆ.
ಇವರ ಅಧಿಕಾರವಧಿಯಲ್ಲಿ: ಕೆಎಎಸ್, ಐಎಎಸ್ ಅಧಿಕಾರಿಗಳಾದ ಅನಿಲ್ ಲಕ್ಷ್ಮೀನಾರಾಯಣ, ಅಂಜುಂ ಫರ್ನಿಜ್, ಪಂಕಜಕುಮಾರ ಪಾಂಡೆ, ಸತ್ಯಮೂರ್ತಿ, ಡಾ. ವಿಶಾಲ್, ಡಾ. ಜಗದೀಶ, ಭರತಕುಮಾರ ಕೆ, ಮಹೇಶ್ವರರಾವ್, ಸುಬೋದ್ ಯಾಧವ್, ಸೈಯದ್ ಅಬ್ದುಲ್ ರಸ್, ಶ್ರೀಕರ್ ಎಂ.ಎನ್, ಡಾ.ಪಿ.ಸಿ ಜಾಫರ್, ವಸಂತ ಕುಲ್ಕರ್ಣಿ, ಎಸ್. ಶೇಖರ್, ಅನ್ಬುಕುಮಾರ, ರಜನೀಶ ಗೋಯಲ್ ಅಧಿಕಾರವಧಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿದರು. ನಿರ್ಮಿತಿ ಕೇಂದ್ರದಿಂದ ಸರ್ಕಾರಕ್ಕೆ ತೆರಿಗೆಯನ್ನು ಕಟ್ಟಿದ್ದಿಲ್ಲ. ಅದರ ಬಗ್ಗೆಯೂ ಲೋಕಾಯುಕ್ತರಿಗೆ ದೂರು ನೀಡಿದಾಗ 139 ಕಾಮಗಾರಿಗಳಿಂದ ಒಟ್ಟು 79 ಲಕ್ಷ ರು. ತೆರಿಗೆ ಸಮಯಕ್ಕೆ ಸರಿಯಾಗಿ ಹಣ ಕಟ್ಟದ ಪರಿಣಾಮ ದಂಡದ ಹಣವಾಗಿ 8.45 ಲಕ್ಷ ತುಂಬಲಾಗಿದೆ. ಒಟ್ಟಿನಲ್ಲಿ ನಿರ್ಮಿತಿ ಕೇಂದ್ರದಲ್ಲಿ ಸಾಕಷ್ಟು ಅವ್ಯವಹಾರ ಮಾಡಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ದೂರು ದಾಖಲಿಸಿಕೊಂಡು ಕ್ರಮಕೈಗೊಳ್ಳದಿದ್ದರೆ ತಾವೇ ಲೋಕಾಯುಕ್ತ ಕೋರ್ಟಿಗೆ ಹೋಗುವುದಾಗಿ ತಿಳಿಸಿದರು.
ಇಂದು- ನಾಳೆ ಅಧ್ಯಯನ ಶಿಬಿರ
ಗುಲ್ಬರ್ಗ: ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಮಾ.24, 25ರಂದು ದಾಲ್ ಮಿಲ್ಲರ್ಸ್ ಅಸೋಸಿಯೇಷನ್ ಗಂಜ್ ಸಭಾಂಗಣದಲ್ಲಿ ಸಂಘದ ಜಿಲ್ಲಾ ಕಾರ್ಯಕರ್ತರಿಗೆ ಅಧ್ಯಯನ ಶಿಬಿರ ಏರ್ಪಡಿಸಲಾಗಿದೆ.
ಶಿಬಿರವನ್ನುದ್ದೆಶಿಸಿ ಮಾತನಾಡಲು ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ಪ್ರಧಾನ ಕಾರ್ಯದರ್ಶಿ ಯು.ಬಸವರಾಜ, ಉಪಾಧ್ಯಕ್ಷ ಮಲ್ಲಯ್ಯ ಜಾಲಹಳ್ಳಿ, ಧಾರವಾಡ ಜಿಲ್ಲೆಯ ರೈತ ಸಂಘದ ಅಧ್ಯಕ್ಷ ಬಿ.ಎಸ್. ಸೊಪ್ಪಿನ ಗುಲ್ಬರ್ಗಕ್ಕೆ ಆಗಮಿಸಲಿದ್ದಾರೆ.
ಮಾ.24ರಂದು ನಡೆಯಲಿರುವ ವಿಚಾರ ಸಂಕಿರಣದಲ್ಲಿ ಬರಗಾಲ ಹಾಗೂ ಸ್ಥಳಗಳ ಬೆಳೆ ಬಗ್ಗೆ ಪ್ರಯೋಗ ನಡೆಸಲು, ಆಹಾರ ಧಾನ್ಯಗಳ ಮೇಲೆ ಪ್ರಯೋಗ ನಡೆಸಲು ಬಹುರಾಷ್ಟ್ರೀಯ ಕಂಪನಿಗಳಿಗೆ ಮುಖ್ಯ ಪರವಾನಗಿ ನೀಡುತ್ತಿರುವ ವಿಷಯ ಕುರಿತು ಮಾತನಾಡಲು ವಿಜ್ಞಾನಿ ಜೈ ಕುಮಾರ ಆಗಮಿಸಲಿದ್ದಾರೆ ಎಂದು ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.