ಆಮಿಷ ವಸ್ತು ಮೇಲೆ ಕಟ್ಟೆಚ್ಚರ
ಚಿಂಚೋಳಿ: ಬೀದರ್ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಚಿಂಚೋಳಿ ಮೀಸಲು ಮತಕ್ಷೇತ್ರದಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ, ಮತದಾರರಿಗೆ ಆಮಿಷ ಒಡ್ಡಲು ಮದ್ಯ ಸಾಗಾಟ, ಹಣ, ಚುನಾವಣಾ ಸಾಮಗ್ರಿಗಳ ಬಗ್ಗೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕೆಂದು ಚಿಂಚೋಳಿ ಮೀಸಲು ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಿ. ಮಂಜುನಾಥ ಸೂಚಿಸಿದರು.
ಚಂದಾಪುರ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಸೋಮವಾರ ಜರುಗಿದ ಚೆಕ್‌ಪೋಸ್ಟ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಚುನಾವಣೆ ಸಮಯದಲ್ಲಿ ಮತದಾರರಿಗೆ ಹಂಚಲು ಸಾಗಿಸುವ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಚುನಾವಣೆ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆಂಬ ಆರೋಪ ಬಾರದಂತೆ ಅಧಿಕಾರಿಗಳಿಗೆ ತಿಳಿಸಿದರು.
ದಾಖಲೆಗಳ ಪರಿಶೀಲಿಸಿ: 10 ಸಾವಿರ ರು. ಗಿಂತಲು ಹೆಚ್ಚಿನ ಮೌಲ್ಯದ ಸಾಮಗ್ರಿ ಸರಬರಾಜು ಆಗುತ್ತಿದ್ದರೆ, ಅಗತ್ಯ ದಾಖಲೆಗಳನ್ನು ಪರಿಶೀಲನೆ ಮಾಡಬೇಕು, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಬಟ್ಟೆ, ಸೀರೆ, ಗಡಿಯಾರ, ಲಿಕ್ಕರ್ 4.6 ಲೀಟರ್‌ಗಿಂತ ಹೆಚ್ಚಿಗೆ ಇದ್ದರೆ ಜಪ್ತಿ ಮಾಡಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. 50 ಸಾವಿರಕ್ಕಿಂತ ಹೆಚ್ಚಿನ ಹಣ ಇದ್ದರೆ ಕೂಡಲೇ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಬೇಕು.
ಬೆಳಗ್ಗೆಯಿಂದ ಸಂಜೆವರೆಗೆ ಮಿರಿಯಾಣ, ಕುಂಚಾವರಂ, ತುಮಕುಂಟಾ, ಕುಸರಂಪಳ್ಳಿ, ಕುಂಚಾವರಂ ಕ್ರಾಸ್, ಚೆಕ್‌ಪೋಸ್ಟ್‌ನಲ್ಲಿ ಮಾಡಿದ ತಪಾಸಣೆಯ ಸಂಪೂರ್ಣ ವೀಡಿಯೋಗ್ರಾಫ್ ಮತ್ತು ಧ್ವನಿ ಮುದ್ರಣ ಮಾಡಬೇಕು. ಯಾವುದೇ ಅಕ್ರಮ ಸಾಗಾಟದ ಬಗ್ಗೆ ಕಟ್ಟೆಚ್ಚರ ವಹಿಸಬೇಕೆಂದು ಚಿಂಚೋಳಿ ಮೀಸಲು ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಿ. ಮಂಜುನಾಥ ಚುನಾವಣೆಯ ಮಾಹಿತಿ ವಿವರಿಸಿದರು. ತಹಸೀಲ್ದಾರ್ ಮೋಹನ ಜೋಶಿ, ಡಾ. ಧನರಾಜ ಬೊಮ್ಮ, ಎಇಇ ರೇವಣಸಿದ್ದಪ್ಪಾ ಹಾಗರಗಿ, ಮಲ್ಲಿಕಾರ್ಜುನ ಪಾಲಾಮೂರ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಭೀಮಸೇನ ಚವ್ಹಾಣ, ಬಿಸಿಎಂ ಅಧಿಕಾರಿ ವಿಠ್ಠಲ ಇದ್ದರು.