ಕಡ್ಡಾಯವಾಗಿ ಮತದಾನ ಮಾಡಿ: ಸಿದ್ದಲಿಂಗ ಬಾಳಿ
ಶಹಾಬಾದ್: ಮತದಾನ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ನಮ್ಮ ಒಂದು ಮತ, ನಮ್ಮ ಹಾಗೂ ದೇಶದ ಭವಿಷ್ಯವನ್ನು ಬದಲಿಸುತ್ತದೆ ಎಂದು ವಚನ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸಿದ್ದಲಿಂಗ ಬಾಳಿ ಹೇಳಿದರು. ಅವರು ರಾವೂರ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಸಚ್ಚಿದಾನಂದ ಪ್ರೌಢಶಾಲೆಯಲ್ಲಿ ಚಿತ್ತಾಪುರ ತಾಲೂಕು ವಚನ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಮತದಾನ ನಮ್ಮ ಹಕ್ಕಾಗಿದ್ದು, ಆಸೆ, ಆಮಿಷಗಳಿಗೆ ಬಲಿಯಾಗದೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು. ಶಿಕ್ಷಕರಾದ ರಾಜಶೇಖರ ಕಡಗಲ್. ಬಸವರಾಜ ಬಳವಾಟ, ಶಿವಕುಮಾರ ಊಟಗಿ, ಕೈಲಾಸ, ಸಂತೋಷ ಕಳತೆ ಇದ್ದರು.
ರೈಲಿಗೆ ಸಿಲುಕಿ ಇಬ್ಬರ ಸಾವು
ಗುಲ್ಬರ್ಗ: ಪ್ರತ್ಯೇಕ ಘಟನೆಗಳಲ್ಲಿ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ನಗರದ ಹೀರಾಪುರ ರೇಲ್ವೆಗೇಟ್ ಹಾಗೂ ಕೆಸರಟಗಿ ರೈಲು ಹಳಿಯ ಬಳಿ ಎರಡು ಶವಗಳು ಪತ್ತೆಯಾಗಿವೆ. ಹೀರಾಪುರ ರೇಲ್ವೆ ಗೇಟ್ ಬಳಿ ದೊರೆತಿರುವ ಶವ ಆಳಂದ ತಾಲೂಕಿನ ಹೊದಲೂರು ಗ್ರಾಮದ ದೇವೀಂದ್ರಪ್ಪ ಅಣ್ಣಾರಾವ್ ಪಾಟೀಲ್ (65) ಎಂದು ಗುರುತಿಸಲಾಗಿದೆ. ಕೆಸರಟಗಿ ಬಳಿಯ ಶವದ ಗುರುತು ಪತ್ತೇಯಾಗಿಲ್ಲ. ಘಟನಾ ಸ್ಥಳಕ್ಕೆ ವಾಡಿ ರೇಲ್ವೆ ಪೊಲೀಸ್ ಠಾಣೆಯ ಎಂಎಸ್‌ಐ ಸದಾಶಿವ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆದಿದೆ.
ಬೆಂಕಿ: 60 ಸಾವಿರ ಮೌಲ್ಯದ ಕಣಕಿ ಭಸ್ಮ
ಚಿತ್ತಾಪುರ: ತಾಲೂಕಿನ ತೆಂಗಳಿ ಗ್ರಾಮದ ಹೊಲವೊಂದರಲ್ಲಿ ಆಕಸ್ಮಿಕವಾಗಿ ಕಣಕಿ ಬಣವೆಗೆ ಬೆಂಕಿ ತಗುಲಿ ಸುಮಾರು 60,000 ಕಣಕಿ ಹಾನಿಯಾದ ಘಟನೆ ಸಂಭವಿಸಿದೆ.
ಸರ್ವೆ ನಂ. 131ರ ಪಂಡಿತರಾವ್ ಮೈಲ್ ಎಂಬುವವರಿಗೆ ಸೇರಿದ 7 ಎಕರೆ ವಿಸ್ತೀರ್ಣದಲ್ಲಿ 20 ಬಂಡಿ ಬೆಳೆಯಲಾದ ಕಣಕಿ ಬೆಂಕಿಯ ಕೆನ್ನಾಲಿಗೆಗೆ ಆಹಾರವಾಗಿದೆ. ಚಿತ್ತಾಪುರ ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕಣಕಿ ಕಳೆದುಕೊಂಡು ಕಂಗಾಲಾದ ಪಂಡಿತರಾವ್ ಮೈಲ್ ಸರ್ಕಾರಕ್ಕೆ ಪರಿಹಾರ ಕೋರಿದ್ದಾರೆ.
ಪದಾಧಿಕಾರಿಗಳು
ಗುಲ್ಬರ್ಗ: ದಲಿತ ರಕ್ಷಣಾ ಹೋರಾಟ ಸಮಿತಿಯಡಿ ಶನಿವಾರ ದಂದು ಗುಡ್‌ಲಕ್ ಹೋಟೆಲ್‌ನಲ್ಲಿ ರಾಜ್ಯ ಸಮಿತಿ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೃತ ಬಿ.ಸಾಗರ ಅಧ್ಯಕ್ಷತೆಯಲ್ಲಿ ತಾಲೂಕು ಅಧ್ಯಕ್ಷರಾಗಿ ಹಣಮಂತ ಎಸ್.ಅಂಕಲಗಿಕರ, ಚಿಂಚೋಳಿ ತಾಲೂಕು ಅಧ್ಯಕ್ಷರಾಗಿ ರಾಜಶೇಖರ ಹೊಸಮನಿ, ನಗರ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಎನ್. ನಾಗನಟಗಿಕರರನ್ನು ನೂತನ ಪದಾಧಿಕಾರಿಗಳಾಗಿ ನೇಮಕ ಮಾಡಲಾಯಿತು. ಸಿದ್ದು ಬಿಲವಾಡ್, ಉದಯಕುಮಾರ ಕಟ್ಟಿಮನಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಎಂದು ಅಮೃತ ಬಿ.ಸಾಗರ ತಿಳಿಸಿದ್ದಾರೆ.
ಪೂಜಾರಿ ಹೇಳಿಕೆಗೆ ಕುಲಕರ್ಣಿ ಖಂಡನೆ
ಗುಲ್ಬರ್ಗ: ಬ್ರಾಹ್ಮಣರಿಗೆ ಮೀಸಲಾತಿ ಕೊಡಿಸುವುದಕ್ಕೆ ಪ್ರಯತ್ನಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಹೇಳಿಕೆ ಜಿಲ್ಲಾ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಗುರುರಾಜ ಕುಲ್ಕರ್ಣಿ ರೇವೂರ ತೀವ್ರವಾಗಿ ಖಂಡಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಪೂಜಾರಿರಿಗೆ ಬ್ರಾಹ್ಮಣರ ನೆನೆಪಾಗುತ್ತದೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ ಬಜೆಟ್ ಮಂಡನೆ ಕಾಲಕ್ಕೆ ಜನಾರ್ಧನ ಪೂಜಾರಿಯ ಈ ಮಾತು ಯಾಕೆ ಆಡಲಿಲ್ಲ ಎಂದು ಕುಲ್ಕರ್ಣಿ ಕೇಳಿದ್ದಾರೆ. ರಾಜ್ಯ ಸರ್ಕಾರ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾಶ್ರೀ ಯೋಜನೆಯಿಂದ ವಂಚಿತವನ್ನಾಗಿ ಮಾಡಿದೆ. ರಾಜಕೀಯಕ್ಕಾಗಿ ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ.
ದಿವ್ಯಾಗೆ ಪಿಎಚ್.ಡಿ
ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗದಲ್ಲಿನ ಸಂಶೋಧನೆಗಾಗಿ ದಿವ್ಯಾ ಬಿರಾದಾರ ಅವರಿಗೆ ಡಾಕ್ಟರೇಟ್ ಲಭಿಸಿದೆ. ಡಾ. ಕೆ. ಲಿಂಗಪ್ಪ ಮಾರ್ಗದರ್ಶನದಲ್ಲಿ ದಿವ್ಯಾ ಮಂಡಿಸಿದ ಸಿಂಥೆಸಿಸ್ ಆಫ್ ಗೋಲ್ಡ್ ನ್ಯಾನೋ ಪ್ರಾಕ್ಟಿಕಲ್ಸ್ ಬೈಕಿಲಸ್ ಸ್ಟಡೀಸ್ ಎಂಬ ಮಹಾಪ್ರಬಂಧಕ್ಕೆ ಈ ಡಾಕ್ಟರೇಟ್ ನೀಡಲಾಗಿದೆ.
ಅಮಾನತಿಗೆ ಮನವಿ
ಗುಲ್ಬರ್ಗ: ರಾಜ್ಯ ಬಹುಜನ ಸಂಘರ್ಷ ಸಮಿತಿಯಡಿ ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿರುವ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಂ. ರಮೇಶರನ್ನು ಅಮಾನತುಗೊಳಿಸುವಂತೆ ಸಮಿತಿ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಮಾಡಿತು. ಗುಲ್ಬರ್ಗ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನಿರ್ದೇಶಕ ಎಂ. ರಮೇಶ 2013- 14ನೇ ಪ್ರವಾಸಿ ಟ್ಯಾಕ್ಸಿ ಫಲಾನುಭವಿಗಳ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಫಲಾನುಭವಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಲಕ್ಷಗಟ್ಟಲೇ ಹಣ ವಸೂಲಿ ಮಾಡುತ್ತಿದ್ದಾರೆ. ಆದ್ದರಿಂದ ಇವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಒಂದು ವೇಳೆ ಮಾಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಲಾಗುವುದೆಂದು ರಾಜ್ಯಾಧ್ಯಕ್ಷ ಅಯ್ಯಪ್ಪ ಹಾಲುಭಾವಿ ಎಚ್ಚರಿಸಿದ್ದಾರೆ.