'ಜಾಹೀರಾತು ಪ್ರಸಾರಕ್ಕೆ ಅನುಮತಿ ಅಗತ್ಯ'
ಗುಲ್ಬರ್ಗ: ಸ್ಥಳೀಯ ಕೇಬಲ್ ವಾಹಿನಿಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಜಾಹೀರಾತುಗಳ ಪ್ರಸಾರಕ್ಕೆ ಜಿಲ್ಲಾ ಮಟ್ಟದಲ್ಲಿರುವ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ(ಎಂಸಿಎಂಸಿ)ಯ ಪೂರ್ವಾನುಮತಿ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್ ತಿಳಿಸಿದ್ದಾರೆ.
ದೃಶ್ಯ ಮಾಧ್ಯಮಗಳ ಮೂಲಕ ಚುನಾವಣಾ ಸ್ವರೂಪದ ಜಾಹೀರಾತನ್ನು ಪ್ರಸಾರ ಮಾಡುವ ಮೊದಲು ಎಂಸಿಎಂಸಿ ಸಮಿತಿಯಿಂದ ಅನುಮತಿ ಪಡೆದಿರಬೇಕು. ನೋಂದಾಯಿತ ರಾಜಕೀಯ ಪಕ್ಷಗಳ ಅಥವಾ ಅಭ್ಯರ್ಥಿಗಳು ದೃಶ್ಯ ಮಾಧ್ಯಮದಲ್ಲಿ ಜಾಹೀರಾತು ಪ್ರಸಾರ ಮಾಡುವ ಮೂರು ದಿನಗಳ ಮುಂಚಿತವಾಗಿ ಹಾಗೂ ನೋಂದಾಯಿತವಲ್ಲದ ಪಕ್ಷಗಳ ಮತ್ತು ಅಭ್ಯರ್ಥಿಗಳ ಜಾಹೀರಾತು ಪ್ರಸಾರ ಮಾಡುವ ಏಳು ದಿನಗಳ ಮೊದಲು ಅನುಮತಿ ಪಡೆಯಬೇಕು. ಪ್ರಸಾರವಾಗುವ ಜಾಹೀರಾತು ವಿವರಗಳನ್ನು ದೃಢೀಕರಿಸಿ ದ್ವಿಪ್ರತಿಯಲ್ಲಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಗೆ ನಮೂನೆ-ಎ ರಲ್ಲಿ ನಿಗದಿತ ದಾಖಲೆಗಳೊಂದಿಗೆ ಸಲ್ಲಿಸಬೇಕು.
ಸೂಚಿಸುವ ಅಧಿಕಾರ: ಮಾಹಿತಿಯನ್ನು ಸಮಿತಿಯು ಪರಿಶೀಲನೆ ನಡೆಸಿ, ಕಾನೂನು ಮತ್ತು ಸುಪ್ರೀಂಕೋರ್ಟ್ ನಿರ್ದೇಶನಗಳ ಅನ್ವಯ ಪ್ರಸಾರವನ್ನು ರದ್ದುಪಡಿಸಲು ಅಥವಾ ಕೆಲವು ಬದಲಾವಣೆಗಳೊಂದಿಗೆ ಪ್ರಸಾರ ಮಾಡುವಂತೆ ಸೂಚಿಸುವ ಅಧಿಕಾರ ಹೊಂದಿದೆ. ಪಕ್ಷ ಅಥವಾ ಅಭ್ಯರ್ಥಿಗಳಲ್ಲದೆ ಇತರ ವ್ಯಕ್ತಿಗಳು ಜಾಹೀರಾತು ಪ್ರಕಟಣೆ ನೀಡಿದ್ದರೆ, ಆ ಪಕ್ಷದ ಅಥವಾ ಅಭ್ಯರ್ಥಿಯ ಅನುಮತಿ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಹೇಳಿದ್ದಾರೆ.
ಕಾಸಿಗಾಗಿ ಸುದ್ದಿ ಮೇಲೆ ನಿಗಾ: ರಾಜಕೀಯ ಪಕ್ಷಗಳ ಅಥವಾ ಅಭ್ಯರ್ಥಿಗಳ ಪರವಾಗಿ ಏಕಮುಖ ಸುದ್ದಿಗಳನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದರ ಮೇಲೆ ಸಮಿತಿಯು ನಿಗಾ ವಹಿಸಲಿದೆ. ಸ್ಥಳೀಯ ಕೇಬಲ್ಗಳಲ್ಲಿ ಇಂತಹ ಕಾಸಿಗಾಗಿ ಸುದ್ದಿ ಮೇಲೆ ನಿಗಾ ವಹಿಸಲು ತಾಲೂಕು ಮಟ್ಟದಲ್ಲಿ ವೀಕ್ಷಣಾ ಸಮಿತಿಗಳನ್ನು ರಚಿಸಲಾಗಿದೆ. ಇದೇ ರೀತಿ ಪತ್ರಿಕೆಗಳಲ್ಲಿ ಪ್ರಕಟವಾಗುವ ರಾಜಕೀಯ ಸುದ್ದಿಗಳ ಮೇಲೆ ನಿಗಾ ವಹಿಸಲಾಗುವುದು. ಜಾಹೀರಾತುಗಳಿಗೆ ತಗಲುವ ವೆಚ್ಚ ಪ್ರತಿದಿನ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.