ಬೆಳಮಗಿ, ಸಾಗರ್, ತಿಪ್ಪಣ್ಣ ನಾಮಪತ್ರ
ಗುಲ್ಬರ್ಗ: ಗುಲ್ಬರ್ಗ ಮೀಸಲು ಲೋಕಸಭೆ (ಎಸ್ಸಿ) ಕ್ಷೇತ್ರದಿಂದ ಸ್ಪರ್ಧೆ ಬಯಸಿ ಸೋಮವಾರ ಬಿಜೆಪಿಯಿಂದ ರೇವು ನಾಯಕ ಬೆಳಮಗಿ, ಜೆಡಿಎಸ್ನಿಂದ ಡಿಜಿ ಸಾಗರ್, ಜೆಡಿಯುನಿಂದ ತಿಪ್ಪಣ್ಣ ಭೀಮಶಾ ನಾಮಪತ್ರ ಸಲ್ಲಿಸಿದ್ದಾರೆ.
ಈಗಾಗಲೇ ನಾಮಪತ್ರ ಸಲ್ಲಿಸಿರುವ ಎಸ್ಯುಸಿಐ ಅಭ್ಯರ್ಥಿ ಶರಣಪ್ಪ ಮಲಕಾಜಪ್ಪ ಶರ್ಮಾ ಮತ್ತೆ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಸೋಮವಾರ ನಾಲ್ವರು ಅಭ್ಯರ್ಥಿಗಳು ಒಟ್ಟು 7 ನಾಮಪತ್ರ ಸಲ್ಲಿಸಿದಂತಾಗಿದೆ.
ಮೆರವಣಿಗೆಯಲ್ಲಿ ಬಂದ ಬೆಳಮಗಿ- ಸಾಗರ್: ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಜಗತ್ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದರು. ಅಪಾರ ಬೆಂಬಲಿಗರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರೊಂದಿಗೆ 1 ಗಂಟೆಗೂ ಹೆಚ್ಚುಕಾಲ ಮೆರವಣಿಗೆ ನಡೆಯಿತು. ನಂತರ ವಿಕಾಸ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಬೆಳಮಗಿ ನಾಮಪತ್ರ ಸಲ್ಲಿಸಿದರು. ಎಂಎಲ್ಸಿ ಕೆಬಿ ಶಾಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ತೇಲ್ಕೂರ್, ಶಾಸಕ ದತ್ತು ಪಾಟೀಲ್ ಜೊತೆಗಿದ್ದರು.
ಜೆಡಿಎಸ್ನ ಅಭ್ಯರ್ಥಿ ಡಿಜಿ ಸಾಗರ್ ಅವರೂ ಜಗತ್ ವೃತ್ತದಿಂದಲೇ ರ್ಯಾಲಿ ಆರಂಭಿಸಿ ಮುಖ್ಯರಸ್ತೆಗುಂಟ ನಡೆದು ಜಿಲ್ಲಾಧಿಕಾರಿ ಕಚೇರಿ ಸೇರಿದರು. ಡೇವಿಡ್ ಸಿಮಯೋನ್, ಕೇದಾರಲಿಂಗಯ್ಯ ಹಿರೇಮಠ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್ ಇದ್ದರು.
ನಾಮಪತ್ರ ಸಲ್ಲಿಕೆಯ ರ್ಯಾಲಿಗಳಿಗೆ ಮುಖ್ಯ ರಸ್ತೆಯೇ ಬಳಕೆಯಾಗಿದ್ದರಿಂದ ಸತತ 2 ಗಂಟೆಗೂ ಅಧಿಕ ಕಾಲ ಈ ರಸ್ತೆಯಲ್ಲಿನ ಸಂಚಾರಕ್ಕೆ ಸಂಚಕಾರ ಬಂದೊದಗಿತ್ತು. ಸಂಚಾರಿ ಪೊಲೀಸರು ಜಗತ್ ವೃತ್ತದಿಂದಲೇ ಕೆರೆ ಅಂಚಿನ ನಸ್ತೆ ಬಳಸಿ ವಾಹನಗಳಿಗೆ ಸಂಚಾರಕ್ಕೆ ಸೂಚಿಸಿದ್ದರು. ಸಂಚಾರ ನಿಯಂತ್ರಿಸುವಲ್ಲಿ ಪೊಲೀಸರಿಗೆ ಸಾಕುಸಾಕಾಯಿತು. ಹೊರಗಡೆಯಿಂದಲೂ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಆಗಮಿಸಿದ್ದರಿಂದ ಕೆರೆ ಅಂಚಿನ ರಸ್ತೆಯಲ್ಲಿ ವಾಹನಗಳ ನಿಲುಗಡೆಯಿಂದಲೇ ದಟ್ಟಣೆಯಾಗಿತ್ತು.