ವಿಪತ್ತುಗಳ ಬಗ್ಗೆ ಜಾಗೃತಿ ಅವಶ್ಯ
ಯಾದಗಿರಿ: ಪದೇ ಪದೆ ರಾಷ್ಟ್ರೀಯ ವಿಪತ್ತುಗಳು ಸಂಭವಿಸುತ್ತಿರುವುದರಿಂದ ಜನರಲ್ಲಿ ವಿಪತ್ತು ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ರೆಡ್ಕ್ರಾಸ್ ಸಂಸ್ಥೆಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಡಾ.ವಿ.ಎಸ್. ಕುಮಾರ ಹೇಳಿದರು.
ನಗರದ ಲಿಂಗೇರಿ ಕೋನಪ್ಪ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಯಾದಗಿರಿ, ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
18 ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾ ತಂಡಗಳ ರಚನೆ:ರಾಜ್ಯದಲ್ಲಿ ರೆಡ್ಕ್ರಾಸ್ ಸಂಸ್ಥೆಯಿಂದ 18 ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗುತ್ತಿದ್ದು, ಮಾನವೀಯ ಸೇವೆಗಳನ್ನು ನೀಡುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ವಿಪತ್ತು ಸಂಭವಿಸಿದ ಬಳಿಕ ಪರಿಹಾರ ಒದಗಿಸುವುದರ ಬದಲು ಜನರನ್ನು ವಿಪತ್ತುಗಳ ಪರಿಣಾಮವನ್ನು ಎದುರಿಸುವದು ಹೇಗೆ ಎಂಬ ಬಗ್ಗೆ ತಯಾರು ಮಾಡುವದಕ್ಕೆ ಈ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ತಕ್ಷಣ ಅಗ್ನಿಶಾಮಕ ಠಾಣೆಗೆ ತಿಳಿಸಿ:ರೆಡ್ಕ್ರಾಸ್ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ವಿ. ಎಂಚಿತ್ತಾರಿ ಅವರು ಮಾತನಾಡಿ, ನೆರೆ ಬಂದ ಸಮಯದಲ್ಲಿ ನೀರಿಗಿಳಿಯುವುದು, ಚಂಡಮಾರುತದ ಸಮಯದಲ್ಲಿ ವಾಯುವಿಹಾರ ಮಾಡುವುದು, ಹಳೆಯ ಮರಗಳ ಆಶ್ರಯ ಪಡೆಯುವುದು ಮಾಡಬೇಡಿ. ಬೆಂಕಿ ಅವಘಡ ಸಂಭವಿಸಿದಂತಹ ಸಂದರ್ಭದಲ್ಲಿ ಲಭ್ಯವಿರುವ ಅಗ್ನಿನಿವಾರಕದಿಂದ ಬೆಂಕಿಯನ್ನು ಎದುರಿಸಿ. ತಕ್ಷಣ ಅಗ್ನಿಶಾಮಕ ಠಾಣೆಗೆ ತಿಳಿಸಿ, ಇಂತಹ ಸಾಮಾನ್ಯಜ್ಞಾನವನ್ನು ಪಡೆದಿರಬೇಕಾದ್ದು ನಮ್ಮ ಕರ್ತವ್ಯ ಎಂದು ಹೇಳಿದರು. ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಸಮಿತಿಯ ರಘುನಾಥರಡ್ಡಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರೆಡ್ಕ್ರಾಸ್ ಕಾರ್ಯದರ್ಶಿ ಆನಂದ ಮಿಲ್ಟ್ರಿ, ಡಾ.ಪ್ರಕಾಶ ರಾಜಾಪುರ, ಅಗ್ನಿಶಾಮಕ ಠಾಣಾಧಿಕಾರಿ ಗುರುರಾಜ ಇದ್ದರು.
ಕಾಲೇಜು ರಂಗೋತ್ಸವ: ಅರ್ಜಿ ಆಹ್ವಾನ
ಯಾದಗಿರಿ: ನಾಡಿನ ಸಾಂಸ್ಕೃತಿಕ, ಪಾರಂಪರಿಕ ಕಲೆಗಳನ್ನು ಉಳಿಸಿ, ಬೆಳೆಸಲು, ವಿದ್ಯಾರ್ಥಿಗಳಿಗೆ ರಂಗಕಲೆಗಳ ಬಗ್ಗೆ ಅರಿವು ಮೂಡಿಸಲು ಯುವ ಕಾಲೇಜು ರಂಗೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರಗಳಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಪದವಿ ಮಟ್ಟದ ವಿದ್ಯಾರ್ಥಿಗಳಿಂದ ಅರ್ಜಿ ಕರೆಯಲಾಗಿದೆ.
ಸಂಬಂಧಪಟ್ಟ ವಿದ್ಯಾರ್ಥಿ ತಂಡಗಳ ಮುಖ್ಯಸ್ಥರ ಹೆಸರು, ಭಾಗವಹಿಸುವ ಕಲಾವಿದರ ಸಂಖ್ಯೆ, ಪ್ರದರ್ಶನ ಮಾಡಲಿರುವ ನಾಟಕದ ಹೆಸರು ಇತ್ಯಾದಿ ವಿವರಗಳುಳ್ಳ ಮಾಹಿತಿಯೊಂದಿಗೆ ತಮ್ಮ ಕಾಲೇಜಿನ ಪ್ರಾಚಾರ್ಯರಿಂದ ದೃಢೀಕರಿಸಿ ಈ ಕಚೇರಿಗೆ ಮಾ. 26ರ ಒಳಗಾಗಿ ಕಳುಹಿಸಿಕೊಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.