ವೃತ್ತಿ, ಹವ್ಯಾಸಿ ರಂಗಭೂಮಿ ತಳಹದಿ ಒಂದೇ: ಶೇಖ್
ಗುಲ್ಬರ್ಗ: ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿ ಒಂದೇ ರಂಗಭೂಮಿ ತಳಹದಿಯಾಗಿದ್ದು, ಹೀಗಾಗಿ ರಾಜ್ಯದಲ್ಲಿ ರಂಗಭೂಮಿ ಒಂದೇ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ಟರ್ ಅಭಿಪ್ರಾಯಪಟ್ಟರು.
ನಗರದ ವಿ.ಜಿ. ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಬಿಜಾಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ ಕನ್ನಡ ವಿಭಾಗ, ರಾಜ್ಯ ಮಹಿಳಾ ಸಂಘ ವಿಶ್ವವಿದ್ಯಾಲಯ ಕಾಲೇಜು ಕನ್ನಡ ಶಿಕ್ಷಕರ ಸಂಘ ಮತ್ತು ವಿ.ಜಿ. ಮಹಿಳಾ ಪದವಿ ಕಾಲೇಜು ಕನ್ನಡ ಸಾಹಿತ್ಯ ವಿಭಾಗ ಮತ್ತು ಕನ್ನಡ ಸಂಯುಕ್ತಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಂಗಭೂಮಿ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ವೃತ್ತಿ ನಾಟಕಗಳಲ್ಲಿ ಬಿತ್ತರವಾಗುವ ಧ್ವಂಧಾರ್ಥ ಪದಗಳು ಕಲಾವಿದರ ಬದುಕನ್ನು ಕಟ್ಟಿಕೊಡುತ್ತದೆ ಎಂಬ ವಾಸ್ತವ ಸಂಗತಿಯಿಂದ ತಿಳಿದುಕೊಳ್ಳಬಹುದಾಗಿದೆ. ಆದರೆ ಪಾವಿತ್ರತೆ ಕಳೆದುಕೊಳ್ಳುತ್ತದೆ ಎಂದರ್ಥವಲ್ಲ ಎಂದು ರಂಗಭೂಮಿಯ ಕಳಕಳಿಯನ್ನು ವ್ಯಕ್ತಪಡಿಸಿದರು.
ಪ್ರಶಸ್ತಿ ಸಮಾರಂಭ ಬಯಕೆ: ಮೂರು ವರ್ಷದ ಅಕಾಡೆಮಿ ಅಧ್ಯಕ್ಷರಾವಧಿಯಲ್ಲಿ ಸಾಗರದಷ್ಟು ನಾಟಕ ಪ್ರಗತಿಯತ್ತ ಹೆಜ್ಜೆ ಇಟ್ಟು ಕೆಲಸ ಮಾಡಬಹುದಾಗಿದೆ. ನನ್ನ ಅಧಿಕಾರವಧಿಯಲ್ಲಿ ಗುಲ್ಬರ್ಗದಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಸಮಾರಂಭ ಏರ್ಪಡಿಸುವ ಉತ್ಕಟ ಬಯಕೆ ಹೊಂದಿದ್ದೇನೆ ಎಂದರು.
ಮೈಸೂರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಪದ್ಮಶ್ರೀ ಬಿ.ವಿ. ಕಾರಂತ ಅಧ್ಯಯನ ಪೀಠ ನಿರ್ದೇಶಕ ಸಿ.ಬಸವಲಿಂಗ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಬಿಜಾಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ ಹಣಕಾಸು ಅಧಿಕಾರಿ ಡಾ. ಎಸ್.ಬಿ. ಕಾಮಶೆಟ್ಟಿ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಎಲ್ .ಆರ್. ಅಂಗಡಿ ಮಾತನಾಡಿದರು.
ವಿ.ಜಿ. ಮಹಿಳಾ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಪ್ರೊ. ಎಸ್.ವಿ. ಧೂಳಗುಂಡಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವಿಜಯದೇವಿ ಸ್ವಾಗತಿಸಿದರು, ಕಾಲೇಜು ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಈಶ್ವರಯ್ಯ ಮಠ ಪ್ರಾಸ್ತಾವಿಕ ಮಾತನಾಡಿದರು. ಡಾ. ಶಾಂತಾ ಮಠ ಅತಿಥಿಗಳ ಪರಿಚಯ ಮಾಡಿದರು. ಕನ್ನಡ ಸಂಘದ ಅಧ್ಯಕ್ಷ ಡಾ. ನಾಗೇಂದ್ರ ಮಸೂತಿ ನಿರೂಪಿಸಿದರು. ನಂತರ ನಡೆದ ಬೆಂಗಳೂರಿನ ಗುಡ್ಡಿಹಳ್ಳಿ ನಾಗರಾಜ ಅಧ್ಯಕ್ಷತೆ ಗೋಷ್ಠಿಯಲ್ಲಿ ರಂಗಭೂಮಿಯ ಸ್ವರೂಪ ಮತ್ತು ಪರಂಪರೆ ಕುರಿತು ಪ್ರೊ. ಹೇಮಂತ ಕೊಲ್ಹಾಪುರ ಮಾತನಾಡಿದರು.
ಪ್ರೊ. ರಾಜಪ್ಪ ದಳವಾಯಿ, ಡಾ. ಅಶೋಕ ಜೀವಣಗಿ, ಡಾ. ಸ್ವಾಮಿರಾವ ಕುಲ್ಕರ್ಣಿ, ಪ್ರೊ. ಪ್ರಭಾಕರ ಸಾತಖೇಡ, ಶಂಕ್ರಯ್ಯಾ ಘಂಟಿ ಸೇರಿದಂತೆ ಅನೇಕ ರಂಗಕರ್ಮಿಗಳು ಉಪಸ್ಥಿತರಿದ್ದರು.