ಶಶಿಕಾಂತ್ ಉಮ್ಮಾಪುರಗೆ ಡಾಕ್ಟರೇಟ್
ಗುಲ್ಬರ್ಗ: ಜ್ಞಾನಗಂಗೆ ಗುಲ್ಬರ್ಗ ವಿಶ್ವವಿದ್ಯಾಲಯದ ರಾಸಾಯನಿಕ ಶಾಸ್ತ್ರ ವಿಭಾಗದ ಡಾ. ಶಶಿಕಾಂತ ಬಾಬುರಾವ್ ಉಮ್ಮಾಪುರೆರಿಗೆ ಡಾಕ್ಟರೇಟ್ ಲಭಿಸಿದೆ. ಡಾ. ಎನ್.ಎಂ. ಗೌಡಗಾಂವ ಮಾರ್ಗದರ್ಶನದಲ್ಲಿ ಸಿಂಥೆಸಿಸ್, ಸ್ಪೆಕ್ಟ್ರಲ್ ಮತ್ತು ಬಯಾಲಾಜಿಕಲ್ ಸ್ಟಡೀಸ್ ಆಫ್ ಸಂ ನವೆಲ್ ಪಿರಿಮಿಡಿನ ಹಾಗೂ ಬೆಂಝಿಮಿಡ್ಯಾಝೆಲ ಅನಲೊಗಸ್ ಎಂಬ ಮಹಾಪ್ರಬಂಧಕ್ಕೆ ಈ ಡಾಕ್ಟರೇಟ್ ನೀಡಲಾಗಿದೆ.
ವೇದಿಕೆಗೆ ಅಶೋಕ ಕಣ್ಣಿ ನೇಮಕ
ಗುಲ್ಬರ್ಗ: ಕರ್ನಾಟಕ ಶುದ್ಧೀಕರಣ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕರಾಗಿ ಅಶೋಕ ಆರ್. ಕಣ್ಣಿ, ಜಿಲ್ಲಾ ಘಟಕದ ಅಧ್ಯಕ್ಷರಾಗಿ ರಮೇಶ ಎಂ. ಸರಡಗಿ ನೇಮಕಗೊಂಡಿದ್ದಾರೆ.
ಮಾನವೀಯತೆ ಮೆರೆದ ಶಾಸಕ ಡಾ. ಅಜಯಸಿಂಗ್
ಜೇವರ್ಗಿ: ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ತಾಲೂಕು ಕೇಂದ್ರದಿಂದ ಬಿಳವಾರ ಮಾರ್ಗವಾಗಿ ಮಲ್ಲಾಬಾದ್ ಗ್ರಾಮಕ್ಕೆ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದರು.
ತಾಲೂಕಿನ ಬಿಳವಾರ್ ಗ್ರಾಮದ ಶರಣಯ್ಯ ಎಂಬುವರು ಹೊಲಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಹಿಂದಿನಿಂದ ಬರುತ್ತಿದ್ದ ಕ್ರೂಜರ್ ಜೀಪ್ ಶರಣಯ್ಯ ಅವರಿಗೆ ಡಿಕ್ಕಿ ಹೊಡೆದು ಗಾಯಗೊಂಡರು. ಅದೇ ಮಾರ್ಗವಾಗಿ ಮಲ್ಲಾಬಾದ್ ಗ್ರಾಮಕ್ಕೆ ತೆರಳುತ್ತಿದ್ದ ಶಾಸಕರು ಅಪಘಾತ ನಡೆದ ಘಟನೆಯನ್ನು ಕಂಡು ತಕ್ಷಣ ತಮ್ಮ ವಾಹನದಲ್ಲಿ ಗಾಯಗೊಂಡ ರೈತ ಶರಣಯ್ಯ ಅವರನ್ನು ತಮ್ಮ ಸಹಾಯಕನೊಂದಿಗೆ ಜೇವರ್ಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದರು. ನಂತರ ಮಲ್ಲಾಬಾದ್ ಗ್ರಾಮಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನದಲ್ಲಿ ಮದುವೆ ಸಮಾರಂಭಕ್ಕೆ ತೆರಳಿದರು.
ಮೊರಾರ್ಜಿ ಶಾಲೆ ಪ್ರವೇಶ ಪರೀಕ್ಷೆ
ಯಾದಗಿರಿ:ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ)ರವರ ಅಧ್ಯಕ್ಷತೆಯಲ್ಲಿ ಜಿಲ್ಲೆಯಾದ್ಯಾಂತ ನಡೆದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ಪರೀಕ್ಷೆಗೆ ಒಟ್ಟು 3,637 ಅರ್ಜಿಗಳು ಬಂದಿದ್ದವು.
ಇದರಲ್ಲಿ 3,474 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯನ್ನು ಬರೆದಿದ್ದಾರೆ. 196 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ ಎಂದು ಸಮಾಜಕಲ್ಯಾಣ ಇಲಾಖೆ ಅಧಿಕಾರಿ ರಾಮನಗೌಡ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 14 ವಸತಿ ಶಾಲೆಗಳಿವೆ. ಇದರಲ್ಲಿ 3 ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳೂ ಸೇರಿವೆ. ಈ ಶಾಲೆಗಳಿಗಾಗಿ 700 ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಹೇಳಿದರು. ಶಹಾಪುರದಲ್ಲಿ 4, ಯಾದಗಿರಿಯಲ್ಲಿ 3 , ಸುರಪುರದಲ್ಲಿ 7, ಹೀಗೆ, ಜಿಲ್ಲೆಯಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ತಾಲೂಕಾವಾರು ಅರ್ಜಿಗಳನ್ನು ಪರಿಶೀಲಿಸಿದಾಗ ಜಿಲ್ಲೆಯ ಸುರಪುರ ತಾಲೂಕಿನಿಂದ ಅತಿ ಹೆಚ್ಚು 1,992 ಅರ್ಜಿಗಳು ಬಂದಿವೆ. ಯಾದಗಿರಿಯಿಂದ 695 ಅರ್ಜಿಗಳು, ಶಹಾಪುರದಿಂದ 650 ಅರ್ಜಿಗಳು ಬಂದಿವೆ. ಆರನೆಯ ತರಗತಿಗೆ ನಡೆದ ಪ್ರವೇಶ ಪರೀಕ್ಷೆಗೆ ಶೇ. 96 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯಾರ್ಥಿಗಳ ಮತ್ತು ಅರ್ಜಿ ಸಲ್ಲಿಕೆ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ.
ಅಧಿಕಾರ ಸ್ವೀಕಾರ
ಶಹಾಪುರ: ಸ್ಥಳೀಯ ಪುರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ರಾಯಪ್ಪ ಸಾಲಿಮನಿ ಹಾಗೂ ಉಪಾಧ್ಯಕ್ಷೆ ಮರಳಮ್ಮ ಮಲ್ಲಪ್ಪ ಕಟ್ಟಿಮನಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ಹಿರಿಯ ಮುಖಂಡರಾದ ಚಂದ್ರಶೇಖರ ಆರಬೋಳ, ಗುಂಡಪ್ಪ ತುಂಬಗಿ, ಕರವೇ ರಾಜ್ಯ ಸಂಚಾಲಕರಾದ ಬಸವರಾಜ ಪಡಕೊಟೆ, ಸಣ್ಣ ನಿಂಗಪ್ಪ ನಾಯ್ಕೊಡಿ, ಎಸ್.ಎನ್. ಖಾದ್ರಿ, ಪುರಸಭೆ ಸದಸ್ಯರಾದ ಡಾ. ಬಸವರಾಜ ಇಜೇರಿ, ಮಾನಪ್ಪ ಹಾದಿಮನಿ, ಸಂತೋಷ ಗುತ್ತೇದಾರ, ವಸಂತ ಸುರಪುರ, ಸಾವಿತ್ರಿ ಭಗವಂತ್ರಾಯ ಬಳೂಂಡಗಿ, ಶಾಂತಪ್ಪ ಕಟ್ಟಿಮನಿ ಇತರರಿದ್ದರು.
ಕೆಂಭಾವಿ: ಪಾಳು ಬಿದ್ದ ಗೋದಾಮು
ಕೆಂಭಾವಿ: ಸಮೀಪದ ಕೂಡಲಗಿ ಗ್ರಾಮದಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಸೇರಿದ ಬೃಹತ್ ಗೋದಾಮು ಪಾಳು ಬಿದ್ದು ಜನತೆಗೆ ಉಪಯೋಗವಾಗದೆ ಪುಂಡ ಪೋಕರಿಗಳ ತಾಣವಾಗುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿರುವ ಗೋದಾಮುಗಳಲ್ಲಿ ಇದು ದೊಡ್ಡ ಗೋದಾಮಾಗಿದ್ದು, ಇದರ ಸಮರ್ಪಕವಾಗಿ ಬಳಕೆಯಾಗದೆ ಸುತ್ತುಮುತ್ತ ಜಾಲಿಗಿಡಗಳು ಬೆಳೆದು ನಿರುಪಯುಕ್ತ ಸ್ಥಳವಾಗಿ ಮಾರ್ಪಟ್ಟಿದೆ ಎಂದು ಡಿಎಸ್ಎಸ್ನ ಜಿಲ್ಲಾ ಸಂಘಟನಾ ಸಂಚಾಲಕ ವಿರುಪಾಕ್ಷಿ ಕರಡಕಲ್ ತಿಳಿಸಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ಸಂರಕ್ಷಿಸಲು ಈ ಪ್ರದೇಶದಲ್ಲಿ ಗೋದಾಮುಗಳ ಕೊರತೆ ಇದ್ದು ಇದ್ದ ಒಂದು ಈ ಗೋದಾಮನ್ನು ಇಲಾಖೆಯವರು ಸರಿಯಾಗಿ ನಿಭಾಯಿಸದೆ ಇರುವುದರಿಂದ ಈ ಭಾಗದ ರೈತರಿಗೆ ತೊಂದರೆಯಾಗಿದೆ. ಸಂಬಂಧಿಸಿದ ಇಲಾಖೆಯವರು ಗಮನಹರಿಸಿ ಇದನ್ನು ಸರಿಪಡಿಸಿ ಉಪಯೋಗವಾಗುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಶರಣು ಬೊನೆ ನೇಮಕ
ಯಾದಗಿರಿ: ತಾಲೂಕು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕರನ್ನಾಗಿ ಶರಣು ಬೋನೆ, ಸಹಸಂಚಾಲಕರನ್ನಾಗಿ ವಿಶ್ವನಾಥ ಬಬಲಾದರವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಜಿಲ್ಲಾ ಘಟಕದ ಅಧ್ಯಕ್ಷ ವೀರಣ್ಣ ಮಲ್ಲಾಬಾದಿ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ಶಿವಶರಣಪ್ಪ ಸಾಹುಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ
ಸುರಪುರ: ಸ್ಥಳೀಯ ಕಾಂಗ್ರೆಸ್ ಪಕ್ಷ ಮುಖಂಡ ಗೋಪಾಲದಾಸ ಲಡ್ಡಾ ಅವರು ಬ್ಲಾಕ್ ಕಾಂಗ್ರೆಸ್(ಐ)ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಶಾಸಕ ರಾಜಾ ವೆಂಕಟಪ್ಪನಾಯಕ, ಮಾಜಿ ಸಂಸದ ರಾಜಾ ರಂಗಪ್ಪನಾಯಕ, ಬಸನಗೌಡ ಯಡಿಯಾಪುರ ಇನ್ನಿತರರಿದ್ದರು.