ಅಯಾಜುದ್ದೀನ್ ಛಾಯಾ ಚಮತ್ಕಾರ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.25
ಗುಲ್ಬರ್ಗದ ಕಲಾವಿದ, ಛಾಯಾಗ್ರಾಹಕ ಮೊಹ್ಮದ್ ಅಯಾಜುದ್ದೀನ್ ಪಟೇಲ್ ಇವರು ನವದೆಹಲಿಯಲ್ಲಿ ಲಲಿತ ಕಲಾ ಅಕಾಡೆಮಿ ಆಯೋಜಿಸಿದ್ದ ಸಮಾರಂಭದಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರತಿಷ್ಠಿತ 1 ಲಕ್ಷ ಮೌಲ್ಯದ ಛಾಯಾಗ್ರಹಣದ ವಾರ್ಷಿಕ ಪುರಸ್ಕಾರ ಪಡೆದುಕೊಂಡರು. ಅಕಾಡೆಮಿಯ ಕಾರ್ಯದರ್ಶಿ ರಾಮಕೃಷ್ಣ ವೇದಾಲಾ, ಅಧ್ಯಕ್ಷ ಕೆ.ಕೆ. ಚಕ್ರವರ್ತಿ ಪುರಸ್ಕಾರ ನೀಡಿ ಗೌರವಿಸಿದರು.
ಗುಲ್ಬರ್ಗ ಛಾಯಾಗ್ರಾಹಕ ಅಯಾಜುದ್ದೀನ್ ಪಟೇಲ್ ಅವರು ಕ್ಲಿಕ್ಕಿಸಿರುವ ಬಿಜಾಪುರದ ಗೋಲ ಗುಮ್ಮಟದ ಒಳ ಚಿತ್ರಕ್ಕೆ ಈ ಪ್ರತಿಷ್ಠಿತ ಪುರಸ್ಕಾರ ದೊರಕಿದೆ. 19 ವರ್ಷಗಳ ಸುದೀರ್ಘ ಅವಧಿ ನಂತರ ಛಾಯಾಚಿತ್ರ ರಂಗಕ್ಕೆ ಈ ಪ್ರತಿಷ್ಠಿತ ಪುರಸ್ಕಾರ ದೊರಕಿದೆ. ಗಮನಾರ್ಹ ಸಂಗತಿ ಎಂದರೆ ಅಯಾಜುದ್ದೀನ್ ಪಟೇಲ್ ಹೈ- ಕ ಭಾಗದಿಂದ ಇಂತಹ ಪುರಸ್ಕಾರ ಪಡೆದುಕೊಂಡ ಮೊದಲ ಕಲಾವಿದರು.
ಪ್ರದರ್ಶನಕ್ಕೆ ಆಯ್ಕೆ: ಈ ಪುರಸ್ಕಾರಕ್ಕಾಗಿ 6, 200 ಪ್ರವೇಶಗಳು ಬಂದಿದ್ದವು. 168 ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆಮಾಡಲಾಗಿತ್ತು. 10 ಕಲಾವಿದರ ತಂಡ ಅಕಾಡೆಮಿಯ ಪ್ರಥಮ ಪುರಸ್ಕಾರ ಆಯ್ಕೆ ಮಾಡಿದ್ದು, ಅದು ಅಯಾಜುದ್ದೀನ್ ಪಾಲಾಗಿದೆ. ಈ ಬಾರಿಯ ಪುರಸ್ಕಾರಕ್ಕೆ ಆಯ್ಕೆಯಾದ ಏಕೈಕ ಕಲಾವಿದ- ಛಾಯಾಗ್ರಾಹಕ ಅಯಾಜುದ್ದೀನ್ ಪಟೇಲ್ ಆಗಿದ್ದಾರೆ.
ಗೋಲಗುಮ್ಮಟದ ಒಳನೋಟ ರಮಣೀಯ: ಬಿಜಾಪುರ ಪರಂಪರೆ ಹೆಸರಿನ ಗೋಲಗುಂಬಜ್ ಒಳನೋಟ ಸೆರೆ ಹಿಡಿದಿರುವ ಗುಲ್ಬರ್ಗದ ಛಾಯಾಗ್ರಾಹಕ ಮೊಹ್ಮದ್ ಅಯಾಜುದ್ದೀನ್ ಪಟೇಲ್ ಅಲ್ಲಿ ತಮ್ಮ ಕೆಮೆರಾ ನೋಟದ ಸಾಮರ್ಥ್ಯ ಹಾಗೂ ನೆರಳು- ಬೆಳಕಿನ ಕೌಶಲ್ಯಗಳನ್ನು ಬಲು ಸಮರ್ಥವಾಗಿ ಬಳಸಿಕೊಂಡಿದ್ದಾರೆ.
ಗುಂಬಜದಲ್ಲಿರುವ ಸುಲ್ತಾನ ಮೊಹ್ಮದ್ ಅದಿಲಶಾಹ, ಆತನ ಹಿರಿಯ- ಕಿರಿಯ ಪತ್ನಿಯರಾದ ಔರಸ್ ಬೀಬಿ ಹಾಗೂ ಇತರರು, ಪುತ್ರ ಅಲಿ ಅದಿಲ್ ಶಾಹ 2, ಅದಿಲ್ ಶಾಹಿಯ ಪ್ರೀತಿಯ ಹಿಂದು ಪರಂಪರೆಯ ನೃತ್ಯನಾರಿ ರಂಭಾ, ಆಕೆಯ ಪುತ್ರಿಯರ ಸಮಾಧಿಗಳೆಲ್ಲವೂ ಫೋಟೋದಲ್ಲಿ ಸ್ಪಷ್ಟವಾಗಿವೆ. 2014 ರ ಛಾಯಾಚಿತ್ರ ಸ್ಪರ್ಧೆಯಲ್ಲಿ ರಾಷ್ಟ್ರೀಯ ಪುರಸ್ಕಾರಕ್ಕೆ ಗುಲ್ಬರ್ಗದ ಅಯಾಜುದ್ದೀನ್ ಪಟೇಲ್ ಒಬ್ಬರೇ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವುದು ವಿಶೇಷವಾಗಿದೆ.
ಅಯಾಜುದ್ದೀನ್ ಪಟೇಲ್ ಫೈನ್ಆರ್ಟ್ನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಈಗಾಗಲೇ ದೇಶ- ವಿದೇಶಗಳಲ್ಲಿ ಅನೇಕ ಏಕವ್ಯಕ್ತಿ ಕಲಾಪ್ರದರ್ಶನಗಳನ್ನು ನಡೆಸಿದ್ದಾರೆ. ಗ್ಲೋಬಲ್ ಫೌಂಡೇಷನ್ನಿಂದ ಭಾರತ ಗೌರವ ರತ್ನ ಪುರಸ್ಕಾರ ಸಹ ಪಡೆದಿರುವ ಅಯಾಜುದ್ದೀನ್ ಮಾ.19 ರಂದು ದೆಹಲಿಯ ರವೀಂದ್ರ ಭವನದಲ್ಲಿ ನಡೆದ ಲಲಿತ ಕಲಾ ಅಕಾಡೆಮಿ ಸಮಾರಂಭದಲ್ಲಿ ಪುರಸ್ಕಾರ ಪಡೆದರು.