ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾವಲುಗಾರನ ಕೊಂದು ದರೋಡೆ

Srinivasa Murthy VN
Updated On : 26 Mar 2014, 12:24 pm

ಕ.ಪ್ರ. ವಾರ್ತೆ ಗುಲ್ಬರ್ಗ ಮಾ.25
ಇಲ್ಲಿನ ಗಂಜ್ ಪ್ರದೇಶದ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಕಾಲೋನಿಯಲ್ಲಿರುವ ನಿಮ್ರಾ ಮಂಜಿಲ್ ಮನೆಯ ಕಾವಲುಗಾರರನ್ನು ಕೊಲೆ ಮಾಡಿ ಲಕ್ಷಾಂತರ ರುಪಾಯಿ ಮೌಲ್ಯದ ನಗ- ನಾಣ್ಯ ದೋಚಿಕೊಂಡು ಹೋಗಿರುವ ಘಟನೆ ಮಂಗಳವಾರ ನಸುಕಿನಲ್ಲಿ ಸಂಭವಿಸಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಸೈಯ್ಯದ್ ಜಾವೇದ್ ನೂಮಾನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಈ ದರೋಡೆ ಸಂಭವಿಸಿದೆ. ಮನೆಯ ಕಾವಲುಗಾರ ಎಂಎಸ್ಕೆ ಮಿಲ್ ನಿವಾಸಿ ಅಬ್ದುಲ್ ನಬಿ ಅಲ್ಲಾವುದ್ದೀನ್ ಸಾಬ್ (55) ಕೊಲೆಯಾದವರು. ಇವರ ಕತ್ತು ಕುಯ್ದು ಕೊಲೆ ಮಾಡಲಾಗಿದ್ದು ಸಾಕ್ಷಿ ನಾಶಕ್ಕಾಗಿ ಶವ ಸುಡುವ ಪ್ರಯತ್ನಗಳೂ ನಡೆದಿವೆ.
ದಾಖಲೆ ಪತ್ರಗಳಿಗೆ ಬೆಂಕಿ: ಮನೆಯಲ್ಲಿನ ಸೂಟ್‌ಕೇಸ್‌ನಲ್ಲಿನ ದಾಖಲೆ ಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿ ಅವುಗಳಿಗೆ ಬೆಂಕಿ ಇಡಲಾಗಿದೆ. ಅಲ್ಮೇರಾ ಒಡೆದು ಅಲ್ಲಿಂದ ಚಿನ್ನಾಭರಣ, ಹಣ ಸೇರಿದಂತೆ ಲಕ್ಷಾಂತರ ರುಪಾಯಿ ಮೌಲ್ಯದ ನಗದು, ಒಡವೆ ಅಪರಿಸಿರುವ ಶಂಕೆಗಳಿವೆ.
ಮನೆಯೊಡೆಯ ಸೈಯ್ಯದ್ ನೂಮಾನ್ ಕುಟುಂಬ ಸದಸ್ಯರ ಸಮೇತ ದೆಹಲಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಅವರು ದೆಹಲಿಯಿಂದ ಮರಳಿ ಬಂದ ಮೇಲಷ್ಟೇ ಈ ಘಟನೆಯಲ್ಲಿ ಏನೆಲ್ಲಾ ಕಳವಾಗಿದೆ ಎಂಬುದರ ಮಾಹಿತಿ ದೊರಕಲಿದೆ.
ಭೀತಿಯಲ್ಲಿ ಜನತೆ: ಈ ಪ್ರಕರಣ ಎಸ್ಬಿಎಚ್ ಬಡಾವಣೆಯಲ್ಲಿ ಭಯದ ಅಲೆ ಹುಟ್ಟುಹಾಕಿದೆ. ಬಡಾವಣೆಯ ಜನತೆ ತಮ್ಮ ಸುತ್ತಲೇ ಇಂತಹ ಘೋರ ಕುಕೃತ್ಯ ನಡೆದಿದೆಯಲ್ಲ ಎಂದು ಭೀತಿಗೊಳಗಾಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಿಸಿ ದರೋಡೆಕೋರರ ಜಾಡು ಹಿಡಿಯುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಐಜಿಪಿ ಸುರೇಶ ಮೊಹ್ಮದ್, ಎಸ್ಪಿ ಅಮೀತ್ ಸಿಂಗ್, ಎಎಸ್ಪಿ ಕಾಶೀನಾಥ ತಳಕೇರಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಣಿ ಕಳ್ಳತನ
ಯಡ್ರಾಮಿ: ಕಳೆದ ಸೋಮವಾರ ರಾತ್ರಿ ಯಡ್ರಾಮಿ ಪಟ್ಟಣದ ಹೃದಯ ಭಾಗದಲ್ಲಿ ಕಿರಾಣಿ ಅಂಗಡಿಗಳ ಸರಣಿ ಕಳ್ಳತನ ನಡೆದಿದೆ. ವೀರೇಶ ಕಿರಾಣಾ ಸ್ಟೋರ್‌ನಿಂದ 25 ಸಾವಿರ ನಗದು, ರಾಜಾರಾಮ ಕಿರಾಣಿ ಸ್ಟೋರ್‌ನಿಂದ 20 ಸಾವಿರ, ಶ್ರೀದೇವಿ ಕಿರಾಣಿ ಸ್ಟೋರ್‌ನಿಂದ 5 ಸಾವಿರ ಕಳ್ಳತನವಾಗಿರುವ ಘಟನೆ ನಡೆದಿದೆ. ಲಕ್ಷ್ಮೀ ವೈನ್ಸ್, ಮೊಬೈಲ್ ಅಂಗಡಿಯ ಬೀಗ ಮುರಿಯಲಾಗಿದೆಯಾದರು, ಯಾವುದೇ ಹಣ ಕಳ್ಳತನವಾಗಿಲ್ಲವೆಂದು ತಿಳಿದುಬಂದಿದೆ. ಪೊಲೀಸ್ ಠಾಣೆಯ ಸಮೀಪದಲ್ಲಿಯೇ ಅಂಗಡಿಗಳ ಕಳ್ಳತನವಾಗಿದ್ದು, ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ 2009 ರಿಂದ ಇಲ್ಲಿಯವರೆಗೆ ಪಟ್ಟಣದಲ್ಲಿ ಅನೇಕ ಬಾರಿ ಕಳ್ಳತನವಾಗುತ್ತಿದ್ದರೂ ಸ್ಥಳೀಯ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿದ್ದಾರೆಂದು ನಾಗರಿಕರು ದೂರಿದ್ದಾರೆ. ಯಡ್ರಾಮಿ ಪಟ್ಟಣದ ನಾಗರಿಕರು ಕಳ್ಳತನ ಮಾಡುವವರು ಸ್ಥಳೀಯರೇ ಇರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಕಳ್ಳತನ ಮಾಡುತ್ತಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ವರ್ತಕರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement