ನಾಟಕಕಾರರ ರಂಗಶೃಂಗದ ಸಹಮಿಲನ 28ರಂದು
ಗುಲ್ಬರ್ಗ: ನೂತನ ವಿದ್ಯಾಲಯ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಸಹಯೋಗದೊಂದಿಗೆ ಎನ್.ವಿ. ಕಾಲೇಜಿನ ಅನಂತರಾವ ದೇಶಮುಖ ಸಭಾಂಗಣದಲ್ಲಿ ಮಾ.28ರಂದು ಬೆಳಗ್ಗೆ 11.30ಕ್ಕೆ ರಂಗಶೃಂಗದ ಸಹಮಿಲನ ಎಂಬ ನಾಟಕಕಾರರ ಸಮಾವೇಶ ಏರ್ಪಡಿಸಲಾಗಿದೆ. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ತರ ಸಮಾವೇಶ ಉದ್ಘಾಟಿಸಲಿದ್ದಾರೆ. ಕವಿ, ನಾಟಕಕಾರ ಶಿವಕವಿ ಹಿರೇಮಠ ಜೋಗೂರ ರವರ ಕುರಿತು ಜೇವರ್ಗಿಯ ಸಾಹಿತಿ ಪಂಡಿತ ನೆಲ್ಲಗಿ ಮಾತನಾಡಲಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ಮಹಾದೇವಪ್ಪಾ ಎಸ್.ಶಿಲ್ಪಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲ್ಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಈ ಭಾಗದ ಲೇಖಕರು ಪ್ರಕಟಿಸಿದ ನಾಟಕ- ರೂಪಕದ ಕೃತಿಗಳ ಪ್ರದರ್ಶನವೂ ಏರ್ಪಡಿಸಲಾಗಿದೆ. ರಂಗಭೂಮಿಗೆ ಅಪಾರ ಸೇವೆ ಸಲ್ಲಿಸಿದ ಹಿರಿಯ ಕಲಾವಿದ ಅಮೃತೇಶ ಮಾಸ್ಟರ್ ಕಲಶೆಟ್ಟಿ, ಸೀತಾ ಅಲ್ಲಾಬಾದಿ, ಮಲ್ಲಿನಾಥ ಅಲೇಗಾಂವ ಮಾಶ್ಯಾಳ, ಜಗನ್ನಾಥ ಮಾಸ್ಟರ್ ನಾಗೂರ, ರಾಮಲಿಂಗ ವಡ್ಡಣಕೇರಿ ಕಮಲಾಪುರ, ವಿಶ್ವನಾಥ ಗೋಡಕೆ ನಿರಗುಡಿ, ಶಂಕರ ಹಿಪ್ಪರಗಿ, ಹಣಮಂತ ಸಂಕನೂರ, ಲಕ್ಷ್ಮೀ ಕುಲ್ಕರ್ಣಿ, ಪ್ರಶಾಂತ ರಾಜಾಪುರ ಕೊಡದೂರ ಅವರನ್ನು ಸತ್ಕರಿಸಲಾಗುವುದು ಎಂದು ಕುಲ್ಕರ್ಣಿ ತಿಳಿಸಿದ್ದಾರೆ.
29ರಂದು ಸಿನೆಮಾ-ಸಂವಾದ
ಶಹಾಬಾದ್: ಪಟ್ಟಣದಲ್ಲಿ ಮಾ.29 ರಂದು ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರ ಭಗತ್ಸಿಂಗ್ರ 83ನೇ ಹುತಾತ್ಮ ದಿನದ ಅಂಗವಾಗಿ ಸಿನೆಮಾ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವನ್ನು ಉರ್ಸ್ ಮಹಲ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಎಐಡಿವೈಒ ಮುಖಂಡ ರಾಜು ಒಡೆಯರಾಜ ತಿಳಿಸಿದ್ದಾರೆ. ಸ್ಥಳೀಯ ಎಐಡಿವೈಒ, ಎಐಡಿಎಸ್ಒ ಸಂಯುಕ್ತ ಆಶ್ರಯದಲ್ಲಿ ಮಧ್ಯಾಹ್ನ 3ಕ್ಕೆ ಭಗತಸಿಂಗ್ರವರ ಜೀವನಾಧಾರಿತ ದಿ.ಲೆಜೆಂಡ್ ಆಫ್ ಭಗತ್ ಸಿಂಗ್ ಎಂಬ ಚಿತ್ರ ಪ್ರದರ್ಶನ ಹಾಗೂ ಸಂವಾದ ಆಯೋಜಿಸಲಾಗಿದೆ. ಎಸಿಸಿ ಕಾರ್ಖಾನೆಯ ಸಿಎಸ್ಆರ್ ವಿಭಾಗದ ಮುಖ್ಯಸ್ಥ ನಿತೇಶ್ವರಕುಮಾರ ಕಾರ್ಯಕ್ರಮ ಉದ್ಘಾಟಿಸುವರು. ಎಐಡಿವೈಒ ಉಪಾಧ್ಯಕ್ಷ ಸಿದ್ದರಾಜ ಮಲ್ಕಂಡಿ ಅಧ್ಯಕ್ಷತೆ ವಹಿಸುವರು.
ಶಾಲಾ ವಾರ್ಷಿಕೋತ್ಸವ
ಗುಲ್ಬರ್ಗ: ವಿಶ್ವಕರ್ಮ ಶಿಕ್ಷಣ ಹಾಗೂ ಅಭಿವೃದ್ಧಿ ಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವ ನಡೆಯಿತು. ಸಮಾರಂಭ ಉದ್ಘಾಟಿಸಿದ ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ವಾಸುದೇವ ಸೇಡಂ ವಿಶ್ವಕರ್ಮ ಸಂಸ್ಥೆ ಗ್ರಾಮಾಂತರ ಪ್ರದೇಶಗಳಲ್ಲಿ 10 ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಜನಾಂಗದ ಅನೇಕರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು. ಸಂಸ್ಥೆಯ ಅಧ್ಯಕ್ಷ ವೀರೇಂದ್ರ ಇನಾಮದಾರ ಮಾತನಾಡಿದರು. ಪತ್ರಕರ್ತ ನಾಗರಾಜ ಹೊವಿನಳ್ಳಿ, ಪಾಲಿಕೆ ಸದಸ್ಯ ಈರಣ್ಣಾ ಹೊನ್ನಳ್ಳಿ, ಡಾ. ಕಣ್ಣಿ, ಶಿವ ಪಾಟೀಲ್, ಎಸ್.ಕೆ. ಸುಭೇದಾರ, ರವಿ ಹೊನ್ನಳ್ಳಿ, ಎಂ. ಬಸವರಾಜ ರಾವೂರ, ಪ್ರತಿಕ್ಷಾ ಶಟಗಾರ ಇದ್ದರು.
ಜೂಜುಕೋರರ ಸೆರೆ
ಆಳಂದ: ತಾಲ್ಲೂಕಿನ ಜವಳಿ (ಡಿ) ಗ್ರಾಮದ ಹನುಮಾನ್ ದೇವರ ಗುಡಿಯ ಕಟ್ಟೆಯ ಮೇಲೆ ಜೂಜಾಟವಾಡುತ್ತಿದ್ದ ಐವರನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ಸಿದ್ರಾಮಯ್ಯ, ಮಲ್ಲಪ್ಪ, ಸುರೇಶ್, ಶ್ರೀಶೈಲ, ಗುರುಶರಣ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 2,331ಹಾಗೂ ಇಸ್ಟೇಟ್ ಎಲೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ನಿಂಬರ್ಗಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದಡೆ ದೇವಂತಗಿ ಗ್ರಾಮದ ಗುಂಡೇರಾವ್ ಪೋಲಿಸ್ ಪಾಟೀಲ್ ಅವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಜೂಜಾಟದಲ್ಲಿ ತೊಡಗಿದ್ದ ಗುಂಡೇರಾವ್ ಪೋಲಿಸ್ ಪಾಟೀಲ್, ಪರಮೇಶ್ವರ್ ಮಾಲಿಪಾಟೀಲ್, ಗುಂಡೇರಾವ್ ಮೂಲಗೆ, ಬೀರಪ್ಪ ಅಂಕಲಗಿ ಎಂಬ ನಾಲ್ವರು ಆರೋಪಿಗಳನ್ನು ಪೋಲಿಸರು ಬಂಧಿಸಿದರು. ಬಂಧಿತರಿಂದ 15,110 ಹಾಗೂ ಇಸ್ಟೆಟ್ ಎಲೆಗಳನ್ನು ವಶಪಡಿಸಿಕೊಂಡರು. ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈರಮ್ಮ ನಿಧನ
ವಾಡಿ: ಪಟ್ಟಣದ ಈರಮ್ಮ ಕೆ.ಶೆಳ್ಳಗಿ (63) ಮಂಗಳವಾರ ನಿಧನರಾದರು. ಪತಿ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಲ್ಯಾಣರಾವ ಶೆಳ್ಳಗಿ, ನಾಲ್ವರು ಪುತ್ರರು, ಒರ್ವ ಪುತ್ರಿ, ಅಪಾರ ಬಳಗವನ್ನು ಅಗಲಿದ್ದಾರೆ.