ಸೌಲಭ್ಯ ವಂಚಿತ ಸೇರಿಭಿಕನಳ್ಳಿ ತಾಂಡಾ
-ವಿಶೇಷ ವರದಿ
ಕ.ಪ್ರ. ವಾರ್ತೆ ಚಿಂಚೋಳಿ ಮಾ.25
ತಾಲೂಕಿನ ಗಡಿಭಾಗದ ಕುಂಚಾವರಂ ಅರಣ್ಯಪ್ರದೇಶದ ವ್ಯಾಪ್ತಿಯಲ್ಲಿ ಬರುವ ಸೇರಿಭಿಕನಳ್ಳಿ ತಾಂಡಾವು ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತಗೊಂಡಿದೆ.
ಸೇರಿಭಿಕನಳ್ಳಿ ತಾಂಡದಲ್ಲಿ 32 ಮನೆಗಳಿವೆ. 130 ಮತದಾರರಿದ್ದಾರೆ. ಒಟ್ಟು 250 ಜನಸಂಖ್ಯೆ ಹೊಂದಿರುವ ಪುಟ್ಟ ತಾಂಡಾ, ಹಲವು ವರ್ಷಗಳಿಂದ ಬಸ್ಸಿನ ಸೌಲಭ್ಯವಿಲ್ಲದ ಕಾರಣ ಜನರು ಪ್ರಯಾಣಕ್ಕೆ ಜೀಪ್ ಅನ್ನು ಅವಲಂಬಿಸಬೇಕಾಗಿದೆ.
ಸೇರಿಭಿಕನಳ್ಳಿ ತಾಂಡಾವು ಧರ್ಮಾಸಾಗರ ತಾಂಡಾದ ಹತ್ತಿರದಿಂದ 4 ಕಿಮಿ ದೂರದಲ್ಲಿದೆ. ಚಿಂಚೋಳಿ ಸಾರಿಗೆ ಬಸ್ ಘಟಕದಿಂದ ಕುಂಚಾವರಂ- ಧರ್ಮಸಾಗರ ಮಾರ್ಗದಲ್ಲಿ ಪ್ರತಿನಿತ್ಯ ಬಸ್ ಸಂಚಾರವಿದೆ, ಆದರೆ ಸೇರಿಭಿಕನಳ್ಳಿ ತಾಂಡಕ್ಕೆ ಮಾತ್ರ ಬಸ್ಸಿನ ಸೌಲಭ್ಯವಿಲ್ಲ. ಬಸ್ಸಿನ ಸೌಲಭ್ಯ ನೀಡುವಂತೆ ಅನೇಕ ಸಲ ಶಾಸಕರಿಗೆ ಮತ್ತು ಸಾರಿಗೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ದಟ್ಟ ಅರಣ್ಯಪ್ರದೇಶದಲ್ಲಿ ನಡೆದು ಹೋಗಲು ಕಾಡು ಪ್ರಾಣಿಗಳ ಕಾಟ ಬೇರೆ. ತಾಂಡಾದಲ್ಲಿ 1ರಿಂದ 5ನೇ ತರಗತಿವರೆಗೆ ಶಾಲೆಯಿದೆ. ಆದರೆ ಶಿಕ್ಷಕರು ವಾರಕ್ಕೊಮ್ಮೆ ಮಾತ್ರ ಹಾಜರಾಗುತ್ತಾರೆ. ಅಂಗನವಾಡಿ ಕೇಂದ್ರವಿದ್ದರೂ ಮಕ್ಕಳಿಗೆ ಪೌಷ್ಟಿಕ ಆಹಾರ ಸರಿಯಾಗಿ ಸಿಗುತ್ತಿಲ್ಲ. ವಿದ್ಯುತ್ ಸಂಪರ್ಕವಿಲ್ಲ. ಸೌರಶಕ್ತಿ ದೀಪಗಳೇ ಆಸರೆಯಾಗಿವೆ. ದುಡಿಯುವ ಕೈಗೆ ಕೆಲಸವಿಲ್ಲದೆ ನೆರೆಯ ಹೈದ್ರಾಬಾದ್, ಜಹೀರಾಬಾದ್ ಸಂಗಾರೆಡ್ಡಿ, ಪುಣೆ, ಮುಂಬಯಿ ಇನ್ನೀತರ ನಗರ ಪ್ರದೇಶಗಳಿಗೆ ವಲಸೆ ಹೋಗಬೇಕಾಗಿದೆ. ಉದ್ಯೋಗ ಖಾತ್ರಿ ಯೋಜನೆ ಇಲ್ಲಿ ನಡೆಯುತ್ತಿಲ್ಲ.
ಖ್ಯಾತ ಕ್ರಿಕೆಟ್ ಪಟು ಅನಿಲ್ ಕುಂಬ್ಳೆ 2011ರ ಏ. 14ರಂದು ಇಲ್ಲಿಗೆ ಭೇಟಿ ನೀಡಿ ತಾಂಡಾದ ಸಮಸ್ಯೆಗಳ ಬಗ್ಗೆ ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಆದರೆ ತಾಂಡಾಕ್ಕೆ ಒಂದೂ ಸೌಲಭ್ಯ ಇನ್ನುವರೆಗೆ ಸಿಕ್ಕಿಲ್ಲವೆಂದು ಇಲ್ಲಿನ ಜನರು ಹೇಳುತ್ತಾರೆ. ಚುನಾವಣೆ ಸಂದರ್ಭದಲ್ಲಿ ಕೆಲವು ಚುನಾಯಿತ ಜನಪ್ರತಿನಿಧಿಗಳು ಭೇಟಿ ನೀಡಿದ ನಂತರ ಇಲ್ಲಿಗೆ ಯಾರೂ ಭೇಟಿ ನೀಡುವುದಿಲ್ಲವೆಂದು ತಾಂಡಾದ ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕೊಲ್ಲೂರ ರಾಮಲಿಂಗೇಶ್ವರ ಮೂರ್ತಿ ಸ್ಥಾಪನೆ ಸಂಪನ್ನ
ಶಹಾಬಾದ್: ನಾಲವಾರ ವಲಯದಕ ಕೊಲ್ಲೂರ ಗ್ರಾಮದ ರಾಮಲಿಂಗೇಶ್ವರ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಪಲ್ಲಕ್ಕಿ ಉತ್ಸವ ಇತ್ತೀಚೆಗೆ ನಡೆಯಿತು.
ನೂತನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಭೀಮಾ ನದಿಗೆ ಗಂಗಾಸ್ನಾನಕ್ಕೆ ಒಯ್ಯಲಾಯಿತು. ಅಲ್ಲಿಂದ ಸುಮಂಗಲಿಯರ ಪೂರ್ಣಕುಂಭ, ವಾಧ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ವಿಧಿವಿಧಾನದೊಂದಿಗೆ ಮೂರ್ತಿಯನ್ನು ಸ್ಥಾಪಿಸಲಾಯಿತು.
ಗ್ರಾಮದ ಸಿದ್ದಯ್ಯ ಸ್ವಾಮಿ ಪತ್ರಿ, ಚಂದ್ರಶೇಖರ ಸ್ವಾಮಿ ಗಡ್ಡದ, ಪ್ರವೀಣಗೌಡ ತಿಪ್ಪರಡ್ಡಿ, ಕೃಷ್ಣಾರಡ್ಡಿಗೌಡ ಹಿರಡ್ಡಿ, ಶರಣಗೌಡ ಕರಡ್ಡಿ, ಶ್ರೀಕಾಂತ ಬಿರಾಳ, ಸುನೀಲ ಕುಮಾರ, ತಿಪ್ಪಣ್ಣ, ಮಡಿವಾಳ, ಶೇಖಮಹ್ಮದ್, ಇಬ್ರಾಹಿಂ, ಅರುಣಕುಮಾರ, ಬಸವರಾಜ ಪಾಲ್ಗೊಂಡಿದ್ದರು.