ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎಲ್ಲ ಬಲ್ಲವರಿಂದಲೇ ದರೋಡೆ ಕೃತ್ಯ

Srinivasa Murthy VN
Updated On : 27 Mar 2014, 11:22 am

ಕ.ಪ್ರ. ವಾರ್ತೆ ಗುಲ್ಬರ್ಗ ಮಾ.26
ಕಾವಲುಗಾರನ ಬಲಿಯೊಂದಿಗೆ ದರೋಡೆ ನಡೆದಿರುವ ಇಲ್ಲಿನ ಗಂಜ್ ಕಾಲೋನಿಯ ಎಸ್ಬಿಎಚ್ ಬಡಾವಣೆಯ ನಿಮ್ರಾ ಮಂಜಿಲ್ ಪ್ರಕರಣ ಹಲವು ಶಂಕೆಗಳಿಗೆ ಎಡೆಮಾಡಿಕೊಟ್ಟಿದೆ. ಈ ಮನೆ ದೊಡ್ಡದು. 8 ಕೋಣೆಗಳಿದ್ದರೂ ದರೋಡೆಕೋರರು 1 ರೂಮನ್ನೇ ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿರುವುದು ಪೊಲೀಸರ ಗಮನ ಸೆಳೆದಿದೆ.
ಏಕೆಂದರೆ ಮನೆಯಲ್ಲಿದ್ದ ಯಾವ ಕೋಣೆಗಳಲ್ಲಿಯೂ ಖದೀಮರು ಹೋಗಿಲ್ಲ, ಕೇವಲ ಒಂದೇ ಕೋಣೆ ಹೊಕ್ಕು ದಾಂಧಲೆ ಮಾಡಿದ್ದಾರೆ. ಕಾವಲುಗಾರರನ್ನು ಕೊಂದು ಸಾಕ್ಷಿ ನಾಶಕ್ಕೂ ಪ್ರಯತ್ನಿಸಿದ್ದಾರೆ. ಘಟನೆಯ ನಂತರ ಪೊಲೀಸರು ಮನೆಯನ್ನೆಲ್ಲ ಜಾಲಾಡಿದ್ದಾರೆ. ನಿಖರ ಸುಳಿವು ದೊರಕಿಲ್ಲವಾದರೂ ಈ ಘಟನೆಯ ಹಿಂದೆ ಮಂಜಿಲ್‌ನ ಎಲ್ಲಾ ಮಗ್ಗುಲ ಬಲ್ಲವರ ಕೈಗಳೇ ಇರುವ ಬಲವಾದ ಶಂಕೆ ವ್ಯಕ್ತವಾಗಿದೆ.
ಒಂದೇ ಕೋಣೆಗೆ ಪ್ರವೇಶ: ಪ್ರಕರಣದ ತನಿಖೆಯ ಹೊಣೆ ಹೊತ್ತಿರುವ ಡಿಎಸ್ಪಿ ಬಿ ಡಿವಿಜನ್ ಉದಯ ಬೇವಿನಗಿಡದ ಅವರು 'ಕನ್ನಡಪ್ರಭ' ಜೊತೆ ಮಾತನಾಡುತ್ತ ಮಂಜಿಲ್‌ನ ಯಾವ ಕೋಣೆಗಳಲ್ಲಿಯೂ ಖದೀಮರು ಹೋಗಿಲ್ಲ, ಒಂದೇ ಒಂದು ಕೋಣೆ ಗುರಿಯಾಗಿಸಿಕೊಂಡೆ ಈ ಕೆಲಸ ಮಾಡಿದ್ದಾರೆ. ಈ ಪ್ರಕರಣ ಮನೆ ಹಾಗೂ ಮನೆ ಮಾಲೀಕರ ಚಲನವಲನ ಅರಿತವರೇ ಮಾಡಿರುವ ಶಂಕೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಲೋನಿಯಲ್ಲಿ ಭೀತಿ: ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೊಲೆ ಆರೋಪಿಗಳು, ದರೋಡೆ ಮಾಡಿದ ಖದೀಮರೆಲ್ಲರನ್ನು ಪತ್ತೆ ಹಚ್ಚಲಾಗುತ್ತದೆ ಎಂಬ ಆತ್ಮವಿಶ್ವಾಸ ಬೇವಿನಮರದ ವ್ಯಕ್ತಪಡಿಸಿದ್ದಾರೆ. ನಿಮ್ರಾ ಮಂಜಿಲ್ ಪ್ರಕರಣ ಎಸ್ಬಿಎಚ್ ಕಾಲೋನಿಯಲ್ಲಿ ಭೀತಿಯ ವಾತಾವರಣವನ್ನಂತೂ ಹುಟ್ಟು ಹಾಕಿದೆ. ಪೊಲೀಸರು ಘಟನೆಯ ನಂತರ ಬೆರಳಚ್ಚು, ಶ್ವಾನದಳದ ಪರಿಶೀಲನೆ ಮಾಡಿದ್ದಾರಾದಾರೂ ತಕ್ಷಣಕ್ಕೆ ಅಪರಾಧಿಗಳ ಯಾವುದೇ ಸುಳಿವು ದೊರಕಿಲ್ಲ.
ನಿಮ್ರಾ ಮಂಜಿಲ್ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿ ಸೈಯ್ಯದ್ ಜಾವೇದ್ ನುಮಾನ್ ಎಂಬುವರಿಗೆ ಸೇರಿದ್ದ ಮನೆ. ಈ ಮನೆಯ ಕಾವಲುಗಾರ ಎಂಎಸ್ಕೆ ಮಿಲ್ ನಿವಾಸಿ ಅಬ್ದುಲ್ ನಬಿ ಅಲ್ಲಾವುದ್ದೀನ್ ಸಾಬ್ (55)  ದರೋಡೆಕೋರರಿಂದ ಕೊಲೆಯಾಗಿದ್ದಾರೆ. ಉದ್ಯಮಿ ಸೈಯ್ಯದ್ ನುಮಾನ್ ದೆಹಲಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿತ್ತು. ನುಮಾನ್ ಈಗ ಗುಲ್ಬರ್ಗಕ್ಕೆ ಆಗಮಿಸಿದ್ದಾರೆ. ಪ್ರಕರಣದ ಬಗ್ಗೆ ಅವರೂ ತಮ್ಮ ಗುರುತು ಪರಿಚಯದವರ ಬಳಿ ಚರ್ಚಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement