ಪಾವತಿಯಾಗದ ಬಡ್ಡಿ: ಆಕ್ರೋಶ
ಗುಲ್ಬರ್ಗ: ಉನ್ನತ ವ್ಯಾಸಾಂಗಕ್ಕಾಗಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳಿಗೆ ಸಾಲದ ಬಡ್ಡಿ ಪಾವತಿಸದೆ ನಿರ್ಲಕ್ಷ್ಯ ತೋರಿವೆ ಎಂದು ಈಶಾನ್ಯ ವಲಯ ಶಿಕ್ಷಕರ ವೇದಿಕೆ ಅಧ್ಯಕ್ಷ ಪ್ರೊ. ಎಂ.ಬಿ ಅಂಬಲಗಿ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಆಯೋಜಿಸಿದ ಶೈಕ್ಷಣಿಕ ಸಾಲ ಪಡೆದ ಪಾಲಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 2009ರಲ್ಲಿ ಈ ಆದೇಶ ಹೊರಡಿಸಿದೆ. ಆದರೆ ಬ್ಯಾಂಕುಗಳು ಈ ಆದೇಶವನ್ನು ಪಾಲಿಸದಿರುವುದರಿಂದ ಸಾವಿರಾರು ಪಾಲಕರು ಶೈಕ್ಷಣಿಕ ಸಾಲದ ಬಡ್ಡಿ ತುಂಬುವಲ್ಲಿ ತತ್ತರಿಸಿ ಹೋಗಿದ್ದಾರೆ.
ಶೈಕ್ಷಣಿಕ ಸಾಲದಿಂದ ತೊಂದರೆ ಅನುಭವಿಸುತ್ತಿರುವ ಪಾಲಕರಿಗೆ ಸಹಾಯ ಮಾಡಬೇಕೆಂದೂ ಜಿಲ್ಲಾಧಿಕಾರಿಳಿಗೆ ಮನವಿ ಮಾಡಿದರೂ, ಐದು ವರ್ಷಗಳಿಂದ ಶೈಕ್ಷಣಿಕ ಸಾಲದ ಬಡ್ಡಿ ಸಾವಿರಾರು ಕೋಟಿ ಬಿಡುಗಡೆ ಮಾಡಿದ್ದೇವೆಂದು ಕೇಂದ್ರ ಸರ್ಕಾರ ದಾಖಲಾತಿ ಹೇಳುತ್ತಿದೆ. ಇನ್ನೊಂದೆಡೆ ಸರ್ಕಾರದ ಆದೇಶ ಪಾಲಿಸದಿರುವ ಬ್ಯಾಂಕುಗಳು ವರ್ತನೆಯಿಂದ ಪಾಲಕರಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಆದೇಶದನ್ವಯ ಬ್ಯಾಂಕುಗಳು ಶೈಕ್ಷಣಿಕ ಸಾಲದ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿ ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕೆಂದು ಸಭೆಯ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದೆಂದು ಅಂಬಲಗಿ ಹೇಳಿ ಸಾಲದ ಬಡ್ಡಿ ಕುರಿತು ಪಾಲಕರೊಂದಿಗೆ ಚರ್ಚಿಸಿದರು.
ರಾಯಚೂರು, ಯಾದಗಿರಿ, ಗುಲ್ಬರ್ಗ, ಬೀದರ್, ಭಾಲ್ಕಿಯಿಂದ ಆಗಮಿಸಿದ್ದ ಪಾಲಕರು ಬ್ಯಾಂಕುಗಳ ಧೋರಣೆಯನ್ನು ಖಂಡಿಸಿದರು. ಸಭೆಯಲ್ಲಿ ನೀಲಕಂಠ ದೊಡ್ಡಮನಿ, ಎಸ್.ಎಸ್. ಪಾಟೀಲ ಹಾಗರಗಿ, ಮಹಾದೇವ ಬಡ, ಶಿವರಾಜ, ನಾಗರಾಜ ಅಂಕಲಗಿ, ಪೂರ್ಣಿಮಾ, ಶಾಂತಪ್ಪ ದುಬಲಗುಂಡಿ, ಮಾಣಿಕರೆಡ್ಡಿ, ನಿಂಗಣ್ಣ ದೊರೆ, ಹಣಮಂತಪ್ಪ ಮುಂತಾದವರು ಇದ್ದರು.