ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಸವಣ್ಣನ ವಿಶ್ವಮಾರ್ಗ ಅನುಸರಿಸಿ

Srinivasa Murthy VN
Updated On : 27 Mar 2014, 11:23 am

ಶಹಾಪುರ: ಅಸ್ಪೃಶ್ಯರಿಗೆಲ್ಲ ರಾಜಮಾರ್ಗವನ್ನು ಒದಗಿಸಿಕೊಟ್ಟ ಬಸವಣ್ಣನವರ ವಿಶ್ವಮಾರ್ಗವನ್ನು ಅನುಸರಿಸಬೇಕಾದ್ದು ಮಾನವರೆಲ್ಲರ ಕರ್ತವ್ಯವಾಗಿದೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ನುಡಿದರು.
  ಪಟ್ಟಣದ ಬಸವಮಾರ್ಗ ಪ್ರತಿಷ್ಠಾನದ ಅಡಿಯಲ್ಲಿ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ನಡೆದ ತಿಂಗಳ ಬಸವ ಬೆಳಕು-26ರ ಸಭೆಯಲ್ಲಿ ಶಿವಶರಣೆ ಅಕ್ಕಮಹಾದೇವಿಯ ಜಯಂತ್ಯುತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡುತ್ತ, ದೇವಾಲಯ ಸಂಸ್ಕೃತಿಯಿಂದ ಬಸವಣ್ಣನವರು ಅನುಭವ ಮಂಟಪ ಸಂಸ್ಕೃತಿ ಕಡೆಗೆ ನಮ್ಮನ್ನೆಲ್ಲ ಕರೆದೊಯ್ದರು. ಇಲ್ಲಿಗೆ ನಿಲ್ಲದೆ ಅನುಭವ ಮಂಟಪ ಸಂಸ್ಕೃತಿಯಿಂದ ಮನೆಗಳೇ ಮಠಂಗಳಯ್ಯ ಎಂದು ಕರೆಯುವ ಮೂಲಕ ಮನೆಗಳನ್ನೆಲ್ಲ ಅರಿವಿನ ಮನೆಗಳನ್ನಾಗಿ ಪರಿವರ್ತಿಸಿದರು.
  ಸಕಲ ಜೀವಾತ್ಮರಿಗೂ ಲೇಸ ಬಯಸಿದ ಮಾರ್ಗ ನಮ್ಮದೆಲ್ಲರದಾಗಬೇಕಾದರೆ ವಚನಗಳನ್ನು ನಾವುಗಳೆಲ್ಲ ಅಧ್ಯಯನ ಮಾಡಬೇಕು. ವಚನಗಳ ಅಧ್ಯಯನ ನಮ್ಮೊಳಗೆ ಆಮೂಲಾಗ್ರವಾದ ಬದಲಾವಣೆಯಾಗುತ್ತದೆ.
  ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡುತ್ತ, ಮಠಗಳೆಲ್ಲ ಸ್ಥಾವರವಾದಾಗ, ಜಂಗಮವೆಂಬುದು ಜಾತೀಕರಣಗೊಂಡಾಗ ಮನೆಗಳು ಮಠಗಳಾಗಬೇಕು. ಬಸವಾದಿ ಶರಣರನ್ನು ಒಪ್ಪಿಕೊಂಡರೆ ತಮ್ಮ ವ್ಯಕ್ತಿತ್ವ ಕುಬ್ಜಗೊಳ್ಳುತ್ತದೆ ಎಂಬ ಮಠಾಧೀಶರನ್ನು ಕೈಬಿಟ್ಟು, ಬಸವ ಮಾರ್ಗಿಯರನ್ನು ನಾವು ಅಪ್ಪಿಕೊಳ್ಳಬೇಕು. ಬಸವವಾದವನ್ನು ನಾವೆಲ್ಲ ಅರಿತು ಆಚರಿಸಬೇಕಾದ ತುರ್ತು ಸಂದರ್ಭ ಇದಾಗಿದೆ ಎಂದು ಹೇಳಿದರು.
  ನೇರ ನಿಷ್ಠುರ ನುಡಿಗಳಿಗೆ ಹೆಸರಾಗಿದ್ದ ಲಿಂಗಣ್ಣ ಸತ್ಯಂಪೇಟೆ ಬಸವಾದಿ ಶರಣರ ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮ ಭಾಗದಲ್ಲಿ ಬೆಳೆಯಲು ಬಹು ಮುಖ್ಯ ಕಾರಣರಾಗಿದ್ದಾರೆ. ತಿಂಗಳ ಬಸವ ಬೆಳಕು ಮೂಲಕ ಪ್ರತಿ ತಿಂಗಳು ಬಸವಾದಿ ಶರಣರ ವಿಚಾರಧಾರೆಯನ್ನು ಜನತೆಗೆ ತಲುಪಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯವೆಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಿದ್ದಪ್ಪ ಹೊಟ್ಟಿಯವರು ತಿಳಿಸಿದರು.
  ಇದೇ ಸಂದರ್ಭದಲ್ಲಿ ಲಿಂಗಾಯತ ಯುವ ಒಕ್ಕೂಟ ಪ್ರಕಟಿಸಿದ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಲಾಯಿತು. ಜ್ಯೋತಿ ಮಣ್ಣೂರ ಸಭೆ ಉದ್ಘಾಟಿಸಿದರು. ಡಾ.ಭೀಮರಾಯ ಲಿಂಗೇರಿ ಸ್ವಾಗತಿಸಿದರು. ಜಿಲ್ಲಾ ಲಿಂಗಾಯತ ಯುವ ಒಕ್ಕೂಟದ ಅಧ್ಯಕ್ಷ ಮಂಜುನಾಥ ಜಾಲಹಳ್ಳಿ , ದೇವಿಂದ್ರಪ್ಪ ತೋಟಿಗೆರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement