ಯುವ ದಂಪತಿ ಆತ್ಮಹತ್ಯೆ
ಗುಲ್ಬರ್ಗ: ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪತ್ನಿ ತಾನು ಸಾವನ್ನಪ್ಪಿದ್ದಲ್ಲದೆ ಬೆಂಕಿ ಹಚ್ಚಿಕೊಂಡು ಪತಿಯನ್ನು ಅಪ್ಪಿಕೊಂಡಿದ್ದರಿಂದ ಆತನೂ ಮೃತಪಟ್ಟ ಘಟನೆ ಮಂಗಳವಾರ ಇಲ್ಲಿನ ರಾಮನಗರ ಬಡಾವಣೆಯಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಸಾವನ್ನಪ್ಪಿರುವ ದಂಪತಿಯನ್ನು ಬಸವರಾಜ ಮಾಲಗಾರ(32) ಹಾಗೂ ಆತನ ಪತ್ನಿ ಲನಮಾಲಾ ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದಷ್ಟೇ ಈ ದಂಪತಿಯ ಮದುವೆಯಾಗಿತ್ತು.
ಹಳ್ಳಿಖೇಡ(ಬಿ) ಮೂಲದ ವನಮಾಲಾ ಇಲ್ಲಿನ ರಾಮನಗರದ ಪತಿಯ ಮನೆಯಲ್ಲಿದ್ದಳು. ಅತ್ತೆ- ಮಾವನ ಜೊತೆ ಹೊಂದಿಕೊಂಡು ಇರುವುದು ವನಮಾಲಾಗೆ ಆಗಿರಲಿಲ್ಲ. ಇದರಿಂದ ಆಗಾಗ ಮನೆಯಲ್ಲಿ ಜಗಳವಾಗುತ್ತಿದ್ದವು.
ಈ ಸಮಸ್ಯೆಯಿಂದ ಹೊರಬರಲು ಬಸವರಾಜ ಪತ್ನಿಯೊಂದಿಗೆ ಬೇರೆ ಮನೆ ಮಾಡಿದ್ದ. ಆಗಾಗ ಪಾಲಕರ ಮನೆಗೆ ಹೋಗಿ ಬರುತ್ತಿದ್ದ. ಪಾಲಕರನ್ನು ಆಗಾಗ ಭೇಟಿಯಾಗುವುದನ್ನೂ ಸಹಿಸದ ವನಮಾಲಾ ಪತಿಗೆ ಪಾಠ ಕಲಿಸಬೇಕು ಎಂದು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಪತ್ನಿಯ ಸಂರಕ್ಷಣೆಗೆ ಹೋದ ಪತಿ ಬಸವರಾಜ ಆಕೆಯ ಬಳಿ ಹೋಗುತ್ತಿದ್ದಂತೆಯೇ ವನಮಾಲ ಪತಿಯನ್ನು ಬಿಗಿದಪ್ಪಿಕೊಂಡಿದ್ದಾಳೆ.
ಶೇ.100ರಷ್ಟು ವನಮಾಲಾ ಸುಟ್ಟು ಹೋದರೆ, ಆಕೆಯ ಬಿಗಿ ಹಿಡಿತದಿಂದಾಗಿ ಬಸವರಾಜನ ದೇಹವು ಸಾಕಷ್ಟು ಸುಟ್ಟಿದೆ. ವನಮಾಲಾ ಸ್ಥಳದಲ್ಲೇ ಸಾವನ್ನಪ್ಪಿದರೆ, ಪತಿ ಬಸವರಾಜ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಸ್ತಿಕ್ ನಗರದಲ್ಲಿ ಮಾಂಗಲ್ಯ ಸರಗಳ್ಳತನ
ಗುಲ್ಬರ್ಗ: ಇಲ್ಲಿನ ಸ್ವಸ್ತಿಕ್ ನಗರದಲ್ಲಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ. ಆದರ್ಶ ನಗರದ ಮಂಗಲಾ ಬಸವರಾಜ ಬೇಲೂರು ಸ್ವಸ್ತಿಕ್ ನಗರದಲ್ಲಿರುವ ಸಹೋದರಿ ಮನೆಗೆ ಹೋಗುವಾಗ ಈ ಘಟನೆ ಸಂಭವಿಸಿದೆ. ಬೈಕ್ ಮೇಲೆ ಬಂದ ಸರಗಳ್ಳನೊಬ್ಬ 1.25 ಲಕ್ಷ ಮೌಲ್ಯದ 50 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಮಹಾತ್ಮಾ ಬಸವೇಶ್ವರ ನಗರ ಬಡಾವಣೆಯಲ್ಲಿ ಪ್ರಕರಣ ದಾಖಲಾಗಿದೆ.