ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಭಿವೃದ್ಧಿ: ಬಹಿರಂಗ ಚರ್ಚೆಗೆ ಆಹ್ವಾನ

Srinivasa Murthy VN
Updated On : 28 Mar 2014, 11:36 am

ಗುಲ್ಬರ್ಗ: ಕಳೆದ ಐದು ವರ್ಷಗಳಲ್ಲಿ ಗುಲ್ಬರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿ ಕುರಿತು ಕಾಂಗ್ರೆಸ್ ಬಹಿರಂಗ ಚರ್ಚೆಗೆ ಬರಬೇಕೆಂದು ಜಾತ್ಯತೀತ ಜನತಾ ದಳದ ಅಭ್ಯರ್ಥಿ ಡಿ.ಜಿ. ಸಾಗರ ಆಹ್ವಾನಿಸಿದ್ದಾರೆ.
 ನಗರದ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಮೀಸಲು ಕ್ಷೇತ್ರದ ಲೋಕಸಭಾ ಅಭ್ಯರ್ಥಿಯೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅಭಿವೃದ್ಧಿಯ ಹರಿಕಾರ, ಶಿಲ್ಪಿ ಎಂಬುದು ಸುಳ್ಳು. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳಾದರೂ ಏನು. ಈ ಬಗ್ಗೆ ಬಹಿರಂಗ ಚರ್ಚೆ ನಡೆಯಲಿ ಎಂದರು.
40 ವರ್ಷಗಳ ರಾಜಕಾರಣದಲ್ಲಿ ಮಾಡಿದ್ದೇನು?: ಈ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂಬ ಆರೋಪಕ್ಕೆ ಈಗಲೂ ಬದ್ಧರಾಗಿದ್ದೇವೆ. ಕೇಂದ್ರದ ಭ್ರಷ್ಟಾಚಾರದಲ್ಲಿ ಖರ್ಗೆಯವರು ಭಾಗಿಯಾಗಿದ್ದಾರೆ. ತಮ್ಮ 40 ವರ್ಷಗಳ ರಾಜಕಾರಣದಲ್ಲಿ ಏನು ಮಾಡಿದ್ದಾರೆ. ಕಂದಾಯ ಮಂತ್ರಿಗಳಾಗಿದ್ದಾಗ ಎಷ್ಟು ಜನರಿಗೆ ಜಮೀನು ನೀಡಿದ್ದಾರೆ, ಸೂರು ಒದಗಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮಾಡಿರುವ ಕೆಲಸಗಳಾದರೂ ಏನು ಎಂದು ಪ್ರಶ್ನಿಸಿದರು.
ರಿಂಗ್ ರಸ್ತೆಯ ಮೇಲೆ ನಿಂತು ನೋಡಿದರೆ, ಓಡಾಡಿದರೆ ಗುಲ್ಬರ್ಗ ನಗರದ ಗ್ರಾಮೀಣ ಪ್ರದೇಶಗಳು ಕಾಣುವುದಿಲ್ಲ. ನಗರದ ಗ್ರಾಮೀಣ ಪ್ರದೇಶಗಳಿಗೆ ಹೋದರೆ ಅಲ್ಲಿನ ಸಮಸ್ಯೆಗಳು ತಿಳಿಯುತ್ತವೆ. ಒಂದು ಬಿಲ್ಡಿಂದ್ ಕಟ್ಟಿ, ಎರಡು ರೈಲು ಓಡಿಸಿದರೆ ಅಭಿವೃದ್ಧಿ ಆಗೋಲ್ಲ. ಶೈಕ್ಷಣಿಕ, ನಿರುದ್ಯೋಗ, ಬೆಲೆ ಏರಿಕೆ, ರಸ್ತೆ ಅಭಿವೃದ್ಧಿ ಸೇರಿದಂತೆ ಮೊದಲಾದ ಮೂಲ ಸಮಸ್ಯೆಗಳು ಜ್ವಲಂತವಾಗಿವೆ ಎಂದು ಅವರು ಆರೋಪಿಸಿದರು.
ವಂಶಾಡಳಿತ ಪಕ್ಷ ಕಾಂಗ್ರೆಸ್: ಕಾಂಗ್ರಸ್ ವಂಶಾಡಳಿತ ಪಕ್ಷವಾಗಿದ್ದು, ಬೇರೆ ಪಕ್ಷದ ಕಡೆ ಬೊಟ್ಟು ಮಾಡುತ್ತದೆ. ಅದೊಂದು ಪ್ರೈವೆಟ್ ಲಿಮಿಟೆಡ್ನಂತಿದೆ. ಕಳೆದ 10 ವರ್ಷಗಳಲ್ಲಿ ಅಪ್ರಾಮಾಣಿಕತೆ, ಅದಕ್ಷತೆಯಿಂದ ಅಧಿಕಾರದ ದುರುಪಯೋಗ ಪಡೆಸಿಕೊಂಡಿದೆ ಎಂದು ದೂರಿದರು.
ಬಿಜೆಪಿ ಕೋಮುವಾದಿಯಾಗಿದ್ದು, ಅದಕ್ಕೆ ಅಧಿಕಾರ ನಡೆಸುವ ಶಕ್ತಿ ಇಲ್ಲ. ಮೋದಿ ಪ್ರಧಾನಿ ಆಗೋಲ್ಲ ಎಂದ ಅವರು, ರಾಜ್ಯದಲ್ಲಿ ಬಿಜೆಪಿ ನಡೆಸಿದ ಆಡಳಿತ ಅತ್ಯಂತ ಕೆಟ್ಟದಾಗಿತ್ತು. ಕೆಜೆಪಿ, ಬಿಎಸ್ಸಾರ್ ಕಾಂಗ್ರೆಸ್ ಪಕ್ಷಗಳು ಮತ್ತೆ ಬಿಜೆಪಿ ತೆಕ್ಕೆಗೆ ಹೋಗಿದ್ದು ಅವರ ಕನಸು ನನಸಾಗುವುದಿಲ್ಲ ಎಂದರು.
ಜೆಡಿಎಸ್ನಿಂದ ಅಭಿವೃದ್ಧಿ ಸಾಧ್ಯ: ದೇಶದಲ್ಲಿ ತೃತೀಯ ರಂಗ ರಚನೆಗೊಂಡ ನಂತರ ದೇವೇಗೌಡರು ಪ್ರಧಾನಿ ಆದಾಗ, ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದಾಗ ಹಲವಾರು ಅಬಿವೃದ್ಧಿ ಕಾರ್ಯಗಳು ನಡೆದವು. ಗ್ರಾಮೀಣ ಜನರ, ರೈತರ ಯುವಕರ ಸಮಸ್ಯೆಗಳ ನಿವಾರಣೆ, ನಿರುದ್ಯೋಗ, ಶೈಕ್ಷಣಿಕ, ರಸ್ತೆ, ಬೆಲೆ ಏರಿಕೆ ಸೇರಿದಂತೆ ಜನರ ಜ್ವಲಂತ ಸಮಸ್ಯೆಗಳನ್ನು ನಿವಾರಣೆಗೆ ಜೆಡಿಎಸ್ ಬದ್ಧವಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ ತಮಗೆ ಅವಕಾಶ ಕಲ್ಪಿಸಬೇಕೆಂದು ಅವರು ಮನವಿ ಮಾಡಿದರು. ಪಕ್ಷದ ಜಿಲ್ಲಾ ಅಧ್ಯಕ್ಷ ಬಸವರಾಜ ತಡಕಲ್ ಇದ್ದರು.

ಜನರೇ ಹೇಳ್ತಾರೆ...
ಗುಲ್ಬರ್ಗ: ಕಳೆದ ನಾಲ್ಕು ದಶಕಗಳಿಂದ ರಾಜಕೀಯದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ತಾವು ಯಾವ ಖಾತೆ ಜವಾಬ್ದಾರಿ ವಹಿಸುತ್ತಾರೋ ಅಲ್ಲಿ ಹೊಸತನ್ನು ಸಾಧಿಸಿ ಛಾಪು ಮೂಡಿಸಿದ್ದಾರೆ. ಎರಡು ರೈಲು, ನಾಲ್ಕು ಕಟ್ಟಡ ಕಟ್ಟಿ ಅಭಿವೃದ್ಧಿಯಾಯ್ತು ಅಂದವರಲ್ಲ, ಅವರು ಓಡಿಸಿದ ರೈಲುಗಳಲ್ಲಿ ಹಿಂದುಳಿದ ನೆಲದ ಜನರ ಬದುಕೇ ಓಡುತ್ತಿದೆ. ಅವರ ಕಾಲದಲ್ಲಿನ ಭವ್ಯ ಕಟ್ಟಡಗಳಲ್ಲಿ ಈ ಭಾಗದ ಜನರ ಬೇಗೆಗಳಿಗೆ ಮದ್ದು ದೊರಕುತ್ತಿದೆ. ಜೆಡಿಎಸ್ ವಿಷಯ ಅರಿಯದೆ ಟೀಕೆಗೆಂದು ಟೀಕೆ ಮಾಡುವುದನ್ನು ಬಿಡಬೇಕೆಂದು ಖರ್ಗೆ ವಿರುದ್ಧದ ಜೆಡಿಎಸ್ ಟೀಕೆಗೆ ಕಾಂಗ್ರೆಸ್ ಜಿಲ್ಲಾ ವಕ್ತಾರ ಭೀಮರೆಡ್ಡಿ ಕುರಕುಂದಾ ಪ್ರತ್ಯುತ್ತರ ನೀಡಿದ್ದಾರೆ.
ಖರ್ಗೆ ಮಾಡಿದ ಪ್ರಗತಿ ಕೆಲಸಗಳು ಕಣ್ಣಿಗೆ ಕಾಣುತ್ತಿವೆ, ಬಹಿರಂಗ ಚರ್ಚೆ ಅಗತ್ಯವೇ ಇಲ್ಲ. ಕಾರ್ಯಕರರ್ತರೇ ಜನರ ಮನೆ ಬಾಗಿಲಿಗೆ ಈ ಬಗ್ಗೆ ಚರ್ಚೆಗೆ ತೆರಳುತ್ತಿದ್ದಾರೆ. ಜೆಡಿಎಸ್ನವರು ಬಂದರೂ ಬರಲಿ, ಕಾಂಗ್ರೆಸ್ ಕಾರ್ಯಕರ್ತರೇ ಚರ್ಚೆ ಮಾಡುತ್ತೇವೆ ಎಂದು ಭೀಮರೆಡ್ಡಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement