ಆಸ್ತಿಗಾಗಿ ದೊಡ್ಡಪ್ಪನ ಕೊಲೆ
ಶಹಾಬಾದ್: ಮದುವೆ ಮಾಡಿ ಅವಳ ಆಸ್ತಿಯನ್ನು ಉಳಿಸಿಕೊಳ್ಳುವ ಸಲುವಾಗಿ ದೊಡ್ಡಪ್ಪನನ್ನೇ ಕೊಲೆ ಮಾಡಿದ ಘಟನೆ ಚಿತ್ತಾಪುರ ತಾಲೂಕಿನ ನಾಲವಾರ ವಲಯದ ಹುಳಂಡಗೇರಾದಲ್ಲಿ ನಡೆದಿದೆ.
ಗ್ರಾಮದಲ್ಲಿ ಕೊಲೆಯಾದ ನಿಂಗಪ್ಪ ಸಾಬಣ್ಣ ನಾಯಕೊಡಿ(60) ತನ್ನ ಸಹೋದರನ ಮಗಳಿಗೆ ತನ್ನ ಸಮೀಪದ ಬಂಧುಗಳಲ್ಲಿ ಮದುವೆ ಮಾಡಿ, ಅವಳ ಪಾಲಿನ 8 ಎಕರೆ ಜಮೀನು ತನಗೆ ಉಳಿಯುವುದು ಎಂದು ಆಲೋಚಿಸಿದ್ದ ಎನ್ನಲಾಗಿದೆ.
ಸಣ್ಣ ಪುಟ್ಟ ಘರ್ಷಣೆ: ಕೊಲೆಯಾದ ನಿಂಗಪ್ಪನ ಇನ್ನೊಬ್ಬ ದಾಯಾದಿ ಮಗ ಆರೋಪಿ ಸಾಬಣ್ಣಾ ತಂ.ಕಾಶಿಪತಿ ನಾಯಕೊಡಿ ತನ್ನ ದೊಡ್ಡಪ್ಪನ ಮಗಳಿಗೆ ತಮ್ಮ ಬಂಧುಗಳಲ್ಲಿ ಮದುವೆ ಮಾಡಿ ಕೊಟ್ಟರೆ, ಅವರ ಪಾಲಿನ ಜಮೀನು ತನಗೆ ಉಳಿಯುತ್ತದೆ ಎಂದು ಲೆಕ್ಕಾಚಾರ ಹಾಕಿದ್ದ. ಈ ಲೆಕ್ಕಾಚಾರ ಹಲವು ದಿನಗಳಿಂದ ಎರಡು ಕಡೆಯಿಂದ ನಡೆದಿತ್ತು. ಮದುವೆ ಮಾಡಿ ಆಸ್ತಿ ಲಪಟಾಯಿಸುವ ಕುರಿತು ದಾಯಾದಿಗಳಲ್ಲಿ ಹಲವು ದಿನಗಳಿಂದ ಸಣ್ಣ ಪುಟ್ಟ ಘರ್ಷಣೆ, ಮನಸ್ತಾಪ ನಡೆದಿತ್ತು ಎನ್ನಲಾಗಿದೆ.
ರಾತ್ರಿ 2ರ ಸುಮಾರಿಗೆ: ತನ್ನ ದೊಡ್ಡಪ್ಪನಾದ ನಿಂಗಪ್ಪನೇ ಇಲ್ಲದೆ ಹೋದರೆ ತಮ್ಮ ಆಸೆ ಕೈಗೂಡುವುದು ಎಂದು ನಿರ್ಧರಿಸಿದ ಸಾಬಣ್ಣ ಬುಧವಾರ ರಾತ್ರಿ 2ಕ್ಕೆ ಸುಮಾರಿಗೆ ಸಮಯ ಸಾಧಿಸಿ, ಬೇಸಿಗೆಯ ನಿಮಿತ್ತ ರಾತ್ರಿ ತನ್ನ ಮನೆ ಮೇಲೆ ಮಲಗಿದ್ದ ನಿಂಗಪ್ಪನನ್ನು ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆಯಾದ ನಿಂಗಪ್ಪನ ಮಗ ಮಾಳಪ್ಪ ನಾಯಕೊಡಿ ನೀಡಿದ ದೂರಿನನ್ವಯ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಾಬಣ್ಣ ತಲೆಮರೆಸಿಕೊಂಡಿದ್ದಾನೆ. ಆತನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಮಹೇಶ ಮೇಘಣ್ಣನವರ್, ಚಿತ್ತಾಪುರ ಪಿಐ ಶಂಕರಗೌಡ ಪಾಟೀಲ ಭೇಟಿ ನೀಡಿದ್ದಾರೆ. ಗ್ರಾಮದಲ್ಲಿ ಕೊಲೆ ನಡೆದಿದ್ದರಿಂದ ಗ್ರಾಮಸ್ಥರಲ್ಲಿ ಆತಂಕದ ಛಾಯೆ ಮೂಡಿತ್ತು.
ಟಂಟಂ ಪಲ್ಟಿ: ಐವರಿಗೆ ಗಾಯ
ಗುಲ್ಬರ್ಗ: ತಾಲೂಕಿನ ನದಿ ಸಿನ್ನೂರ ಬಳಿಯ ರಸ್ತೆತಡೆ ಗೋಡೆಗೆ ಡಿಕ್ಕಿಯಾದ ಟಂಟಂ ಪಲ್ಟಿಹೊಡೆದು, ಐವರು ಗಂಭೀರ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.ಜಿಲ್ಲೆಯ ಆಳಂದ ತಾಲೂಕಿನ ಧರ್ಮಪುರ ವಾಡಿ ಗ್ರಾಮದಿಂದ ಕಾಮಲೆ ಔಷಧ ಸೇವನೆಗಾಗಿ ಜೇವರ್ಗಿ ತಾಲೂಕಿನ ಕರನೂರ ಗ್ರಾಮಕ್ಕೆ ಟಂಟಂನಲ್ಲಿ ಹೋಗಿ ಔಷಧಿ ಸೇವಿಸಿ ಊರಿಗೆ ವಾಪಸ್ ಆಗುವಾಗ ನದಿಸಿನ್ನೂರ ಬಳಿ ಸಂಭವಿಸಿದ ಅಪಘಾತದಲ್ಲಿ ಅನಿಲಕುಮಾರ್ ಮಲ್ಲಪ್ಪ ಜಮಾದಾರ್, ಕಲ್ಯಾಣಿ ಶಿವಶರಣಪ್ಪ ಜಮಾದಾರ್, ಸಾರುಬಾಯಿ ಜಮಾದಾರ್, ಲಕ್ಷ್ಮೀಬಾಯಿ ಜಮಾದಾರ್, ಪಾಂಡುರಂಗ ಜಮಾದಾರ್, ಎಂಬುವರು ಗಾಯಗೊಂಡಿದ್ದು, ಇವರೆಲ್ಲರನ್ನೂ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಜಾರಿಯಲ್ಲಿದೆ.
ಹೆಣ್ಣು ಹಸುಗೂಸು ಪತ್ತೆ
ಗುಲ್ಬರ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ ಫೆ.15ರಂದು ಒಂದು ದಿನದ ಹೆಣ್ಣು ಮಗು ದಾಖಲಾಗಿದೆ. ಗುಲ್ಬರ್ಗ ತಾಲೂಕಿನ ಗೊಬ್ಬೂರ(ಬಿ) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಫೆ.14ರಂದು ಬಿಟ್ಟು ಹೋಗಿರುವ ಈ ಮಗುವನ್ನು ಅಮೂಲ್ಯ ಶಿಶುಗೃಹದಲ್ಲಿ ದಾಖಲಿಸಲಾಗಿದೆ. ಗೋದಿ ಮೈಬಣ್ಣ ಹೊಂದಿರುವ ಈ ಮಗುವು ಆರೋಗ್ಯವಾಗಿದೆ. ಮಗುವಿನ ಪಾಲಕರು, ಪೋಷಕರು ಇದ್ದಲ್ಲಿ 60 ದಿನದೊಳಗಾಗಿ ಅವಶ್ಯ ದಾಖಲೆಗಳನ್ನು ಪ್ರಸ್ತುತಪಡಿಸಿ ಪಡೆದುಕೊಂಡು ಹೋಗುವಂತೆ ಶಿಶುಗೃಹದ ಅಧೀಕ್ಷಕರು ಕೋರಿದ್ದಾರೆ.
ಕೊಲೆ ಮಾಡಿ ಮಹಿಳೆ ಶವ ಸುಟ್ಟರು!
ಗುಲ್ಬರ್ಗ: ಜಿಲ್ಲೆಯ ಆಳಂದ ತಾಲೂಕಿನ ಮದರಾ(ಬಿ) ತಾಂಡಾದ ಹಳ್ಳದ ಸೇತುವೆ ಬಳಿ ಕೊಲೆಯಾದ ಮಹಿಳೆಯ ಶವ ಸುಟ್ಟು ಸಾಕ್ಷಿ ನಾಶಕ್ಕೆ ಯತ್ನಿಸಿರುವ ಪ್ರಕರಣ ರೇವೂರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಮಹಿಳೆಯನ್ನು ಕೊಲೆಮಾಡಿ ಶವವನ್ನು ಸುಟ್ಟು ಹಾಕಲು ಯತ್ನಿಸಲಾಗಿದೆ. ಮಹಿಳೆ ಅಪರಿಚಿತಳಾಗಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ಅಮಿತಸಿಂಗ್, ಡಿಎಸ್ಪಿ ಝಂಡೇಕಾರ ಸಿಬ್ಬಂದಿ ಭೇಟಿನೀಡಿ ಪರಿಶೀಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮತದಾನ ಜಾಗೃತಿ ರ್ಯಾಲಿಯ ಎಬಿವಿಪಿ ಮನವಿಗೆ ಜಿಲ್ಲಾಡಳಿತ ತಿರಸ್ಕಾರ
ಗುಲ್ಬರ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ, ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲು ಪರವಾನಗಿ ನೀಡುವಂತೆ ಇಲ್ಲಿನ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಮಾಡಿದ್ದ ಮನವಿಯನ್ನು ಜಿಲ್ಲಾ ಸಹಾಯಕ ಚುನಾವಣಾಧಿಕಾರಿಗಳೂ ಆಗಿರುವ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸಾರಾಸಾಗಾಟಾಗಿ ತಿರಸ್ಕರಿಸಿದ್ದಾರೆ.
ಈ ಕುರಿತಂತೆ ಎಬಿವಿಪಿ ನಗರ ಕಾರ್ಯದರ್ಶಿ ಅರುಣ ಅವರಿಗೆ ಪತ್ರ ಬರೆದಿರುವ ಜಿಲ್ಲಾಡಳಿತ ಈಗಾಗಲೇ ಚುನಾವಣಾ ಆಯೋಗ, ಜಿಲ್ಲಾಡಳಿತಗಳೇ ಜಂಟಿಯಾಗಿ ಸ್ವೀಪ್ (ಮತದಾನ ಜಾಗೃತಿ) ಕಾರ್ಯಕ್ರಮ ನಡೆಸುತ್ತಿವೆ. ಅದು ಸಮರ್ಪಕವಾಗಿಯೂ ನಡೆಯುತ್ತಿದೆ. ಈ ಹಂತದಲ್ಲಿ ತಮ್ಮ ಅಗತ್ಯತೆ ಅಷ್ಟಾಗಿ ಕಂಡು ಬಂದಿಲ್ಲ, ಹೀಗಾಗಿ ಮಾ.28 ರಂದು ಗುಲ್ಬರ್ಗ ಪಟೇಲ್ ವೃತ್ತದಿಂದ ಮಾರ್ಕೆಟ್ವರೆಗೆ ತಾವು ನಡೆಸಲಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಪರವಾನಗಿ ನೀಡಬೇಕು ಎಂಬ ಮನವಿ ತಿರಸ್ಕರಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಸ್ವೀಪ್ ಕಾರ್ಯಕ್ರಮ ನಡೆಸಲು ಅಗತ್ಯತೆ ಕಂಡು ಬಂದಲ್ಲಿ ತಮಗೆ ತಿಳಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಎಬಿವಿಪಿ ಘಟಕಕ್ಕೆ ಬರೆದ ಪತ್ರದಲ್ಲಿ ಹೇಳಿದ್ದಾರೆ.