ಕೊಡವ ಆಡಳಿತ ಭಾಷೆಯಾಗಲಿ
ಸೋಮವಾರಪೇಟೆ: ಪ್ರಪಂಚದಲ್ಲಿಯೇ ವಿಶಿಷ್ಟ ಸಂಸ್ಕೃತಿ, ಆಚಾರ- ವಿಚಾರ, ಉಡುಗೆ- ತೊಡುಗೆ, ಸ್ವಂತ ಭಾಷೆ ಹೊಂದಿರುವ ಕೊಡವ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಜಾರಿಗೆ ತರಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಕೊಡವ ಅಧ್ಯಯನ ಪೀಠದ ಸಂಯೋಜಕ ಡಾ. ಕೋಡಿರ ಎ. ಲೋಕೇಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇಲ್ಲಿಗೆ ಸಮೀಪದ ಮಾದಾಪುರ ಪ್ರೌಢಶಾಲಾ ಮೈದಾನದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಕ್ಕಂದೂರು ಕೊಡವ ಸಮಾಜ ಮತ್ತು ಎಲ್ಲಾ ಕೊಡವ ಭಾಷಿಕ ಸಮಾಜದ ಆಶ್ರಯದಲ್ಲಿ ಆಯೋಜಿಸಲಾಗಿರುವ ಕೊಡವ ಮಾನಮ್ಮೆ ಕಾರ್ಯಕ್ರಮದ ನಡಿಕೇರಿಯಂಡ ಚಿಣ್ಣಪ್ಪ ವೇದಿಕೆಯಲ್ಲಿ 'ರಾಜ್ಯದ ಆಡಳಿತದಲ್ಲಿ ಕೊಡವ ಭಾಷೆ' ಕುರಿತು ಅವರು ವಿಷಯ ಮಂಡನೆ ಮಾಡಿದರು.
ಐಚ್ಛಿಕೆ ಭಾಷೆಯಾಗಿ ಅಳವಡಿಸಿ: 1956ರಲ್ಲಿಯೇ ಕೊಡವ ಆಡಳಿತ ಭಾಷೆಯನ್ನಾಗಿ ಮಾಡುವ ಅವಕಾಶವಿತ್ತು. ಕೊಡವ ಭಾಷೆಗೆ ಪ್ರತ್ಯೇಕ ಲಿಪಿಯಿಲ್ಲದಿದ್ದರೂ ಬೆಳವಣಿಗೆಯ ದೃಷ್ಟಿಯಿಂದ ಉಚ್ಚ್ರಾಯ ಸ್ಥಿತಿಯಲ್ಲಿದೆ. ಕೊಡವ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡುವ ದೃಷ್ಟಿಯಲ್ಲಿ ವಿದ್ಯಾಕ್ಷೇತ್ರದಲ್ಲಿ ಐಚ್ಚಿಕ ಭಾಷೆಯನ್ನಾಗಿ ಅಳವಡಿಸಬೇಕು ಎಂದು ಅವರು ಆಗ್ರಹಿಸಿದರು.
ಮಾತೃ ಭಾಷೆಯಲ್ಲಿಯೇ ಮೊದಲು ಶಿಕ್ಷಣ ನೀಡಬೇಕು. ಭಾಷೆ ಕೇವಲ ಸಂವಹನಕ್ಕೆ ಮಾತ್ರ ಸೀಮಿತವಲ್ಲ. ಅದು ಸಂಸ್ಕೃತಿಯ ಧ್ಯೋತಕ. ಭಾಷೆಗೂ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದರು.
ಕೊಡವ ಸಂಸ್ಕೃತಿಯ ಬೆಳವಣಿಗೆಯಲ್ಲಿ ಮಹಿಳೆಯರ ಜವಾಬ್ದಾರಿ ವಿಷಯದ ಬಗ್ಗೆ ವಿಚಾರ ಮಂಡಿಸಿದ ವೀರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲ ನೆಲ್ಲಚಂಡ ನೀಲಮ್ಮ ಭೀಮಯ್ಯ ಮಾತನಾಡಿ, ಕೊಡಗಿನ ಸಂಸ್ಕೃತಿಯ ಭಾಗವಾಗಿರುವ ದುಡಿಕೊಟ್ಪಾಟ್, ಐನ್ಮನೆ ಸಂಸ್ಕೃತಿ ಸೇರಿದಂತೆ ಇನ್ನಿತರ ಸಂಪ್ರದಾಯಗಳು ಮರೆಯಾಗುತ್ತಿವೆ. ಮಕ್ಕಳಿಗೆ ತಾಯಿಯೇ ಮೊದಲ ಗುರುವಾಗಿದ್ದು ಮನೆಯಿಂದಲೇ ಕೊಡವ ಸಂಸ್ಕೃತಿಯ ಬಗ್ಗೆ ಅರಿವು ಹಾಗೂ ಒಲವು ಮೂಡಿಸಬೇಕು ಎಂದರು. ಕೊಡವ ಮಹಿಳೆಯರ ಬಗ್ಗೆ ಸವಿಸ್ತಾರ ಮಾಹಿತಿಯಿರುವ ಪಟ್ಟೋಲೆಪಳಮೆ ಕೃತಿಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.
ಸ್ವತಂತ್ರ ಭಾಷೆ: ಅಕಾಡೆಮಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಕೊಡವ ಸ್ವತಂತ್ರ ಭಾಷೆಯಾಗಿದ್ದು, ಕೊಡವರಲ್ಲಿರುವ ಹೃದಯ ವೈಶಾಲ್ಯತೆ ಸಂಸ್ಕೃತಿಯ ಹಿನ್ನಡೆಗೆ ಕಾರಣವಾಗುತ್ತಿರುವುದು ವಿಷಾದನೀಯ. ಸಂಸ್ಕೃತಿಯ ಬೆಳವಣಿಗೆಗೆ ಕೊಡವ ಭಾಷೆಯನ್ನಾಡುವ 18 ಉಪಜನಾಂಗಗಳು ಒಂದಾಗಬೇಕಾದ ಅನಿವಾರ್ಯತೆಯಿದೆ ಎಂದರು.
ಬೆಂಗಳೂರು ಕೊಡವ ಸಮಾಜ ಉಪಾಧ್ಯಕ್ಷೆ ಮುಕ್ಕಾಟಿರ ವಾಣಿ ನಾಣಯ್ಯ ಅಧ್ಯಕ್ಷತೆ ವಹಿಸಿದ್ದರು.
ಮಾನಮ್ಮೆಯ ಗೌರವಾಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಪ್ರಧಾನ ಸಂಚಾಲಕ ಮಾಳೇಟಿರ ಅಭಿಮನ್ಯು ಕುಮಾರ್, ಉತ್ಸವದ ಕೊರವುಕಾರ ಮಂಡೇಟಿರ ಪೊನ್ನಪ್ಪ, ಕೊಡವ ಅಕಾಡೆಮಿ ರಿಜಿಸ್ಟ್ರಾರ್ ಎನ್. ಶಾಂತಮ್ಮ ಇದ್ದರು.
ಐಮುಡಿಯಂಡ ಪ್ರೇಮಾ ಹಾಗೂ ಉಡುವೆರ ಯಶೋಧ ಪ್ರಾರ್ಥಿಸಿದರು. ಅಕಾಡೆಮಿಯಿಂದ ರಚಿಸಲ್ಪಟ್ಟ ನಾಡಗೀತೆಯನ್ನು ಉಳುವಂಗಡ ಲೋಹಿತ್ ಭೀಮಯ್ಯ ಮತ್ತು ಸಂಗಡಿಗರು ಹಾಡಿದರು. ಬಡಕಡಮ್ಮಂಡ ಕಸ್ತೂರಿ ಗೋವಿಂದಮ್ಮಯ್ಯ ಸ್ವಾಗತಿಸಿದರು. ಮುಕ್ಕಾಟಿರ ವಸಂತ್, ಬೊಟ್ಟೋಳಂಡ ಮಿಟ್ಟು ಪೂಣಚ್ಚ ನಿರೂಪಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.