ಗೋಣಿಕೊಪ್ಪಲು ಪರಿಸರದಲ್ಲಿ ಹೂಮಳೆ
ಗೋಣಿಕೊಪ್ಪಲು: ಗೋಣಿಕೊಪ್ಪಲು ನಗರ ಒಳಗೊಂಡಂತೆ ಸುತ್ತಮುತ್ತಲ ಪ್ರದೇಶದಲ್ಲಿ ಶನಿವಾರ ಸಂಜೆ ಮಳೆ ಸುರಿದಿದೆ. ಕೆಲವೆಡೆ ಅರ್ಧ ಇಂಚು ಮಳೆ ದಾಖಲಾಗಿದೆ. ದಕ್ಷಿಣ ಕೊಡಗಿನ ಎಲ್ಲೆಡೆ ಕಾಫಿ ಕೊಯ್ಲು ಬಿರುಸಿನಿಂದ ನಡೆಯುತ್ತಿದ್ದು, ಈಗಾಗಲೇ ಕೊಯ್ಲು ಮುಗಿಸಿರುವ ಕೆಲವು ಬೆಳೆಗಾರರು ಕಾಫಿ ತೋಟಗಳಿಗೆ ತುಂತುರು ನೀರಾವರಿ ಕೈಗೊಂಡಿದ್ದಾರೆ. ದಕ್ಷಿಣ ಕೊಡಗಿನಲ್ಲಿ ಅಧಿಕವಾಗಿ ರೋಬಸ್ಟಾ ಕಾಫಿ ಉತ್ಪಾದಿಸಲಾಗುತ್ತಿದ್ದು, ಇದೀಗ ಮಳೆಯಾಗಿರುವುದರಿಂದ ಹಾಗೂ ತುಂತುರು ನೀರಾವರಿಯಿಂದಾಗಿ ಅಲ್ಲಲ್ಲಿ ಕಾಫಿ ಹೂವುಗಳು ಕಾಣಿಸಿಕೊಂಡಿವೆ. ಕಾಫಿ ಕೊಯ್ಲಿನ ಸಂದರ್ಭ ಮಳೆಯಾದರೆ ಅದನ್ನು ಹೂ ಮಳೆ ಎಂದು ಬೆಳೆಗಾರರು ಕರೆಯುತ್ತಾರೆ. ಕಾಫಿ ಕೊಯ್ಲು ಸಂದರ್ಭ ಪೂರಕ ಮಳೆಯಾಗಿ ಹೂ ಬಿಟ್ಟಲ್ಲಿ ಉತ್ತಮ ಫಸಲು ನಿರೀಕ್ಷಿಸಬಹುದಾಗಿದೆ. ಕಾರ್ಮಿಕರ ಸಮಸ್ಯೆಯಿಂದಾಗಿ ಕೆಲವೆಡೆ ಕಾಫಿ ಕೊಯ್ಲು ವಿಳಂಬವಾಗುತ್ತಿದ್ದು, ಮಳೆಯಿಂದಾಗಿ ಇನ್ನೂ ನಿಧಾನವಾಗುವ ಸಾಧ್ಯತೆ ಇದೆ. ಹೂ ಕಚ್ಚಿಕೊಳ್ಳುವ ಸಂದರ್ಭ ಕಾಫಿ ಕೊಯ್ಲು ಮಾಡುವಂತಿಲ್ಲ.
ಮೋಡ ಕವಿದ ವಾತಾವರಣ: ದಕ್ಷಿಣ ಕೊಡಗಿನ ಎಲ್ಲೆಡೆ ಮೋಡ ಕವಿದ ವಾತಾವರಣವಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯನ್ನು ಬೆಳೆಗಾರರು ಹೊಂದಿದ್ದಾರೆ. ಸುಮಾರು 1 ಅಥವಾ 2 ಇಂಚು ಮಳೆ ದಾಖಲಾದರೆ ತೋಟಕ್ಕೆ ತುಂತುರು ನೀರಾವರಿಗಾಗಿ ವಿದ್ಯುತ್ ವೆಚ್ಚ ಮತ್ತು ಕಾರ್ಮಿಕರ ಬಳಕೆಯಲ್ಲಿ ಮಿತವ್ಯಯ ಸಾಧಿಸಬಹುದಾಗಿದೆ. ಒಟ್ಟಿನಲ್ಲಿ ಬೇಸಗೆಯಲ್ಲಿ ಬೀಳುವ ಹೂ ಮಳೆ ರೈತರಿಗೆ, ಪ್ರಾಣಿ ಪಕ್ಷಿಗಳಿಗೆ ನೆಮ್ಮದಿದಾಯಕ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.