ದೈಹಿಕ ಶಿಕ್ಷಕ ಗಾಡ್ಫ್ರೆಡ್ ಎಲ್ಲೀಸ್ಗೆ ಸನ್ಮಾನ
ಗೋಣಿಕೊಪ್ಪಲು: ಪಾಲಿಬೆಟ್ಟ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ 25 ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಗಾಡ್ ಫ್ರೆಡ್ ಎಲ್ಲೀಸ್ ಅವರನ್ನು ಕೊಡಗು ಯುವಜನ ಸೇವಾ ಕ್ರೀಡಾ ಇಲಾಖೆ ಹಾಗೂ ಪಾಲಿಬೆಟ್ಟ ಯಂಗ್ ಇಂಡಿಯಾ ಯೂತ್ ಕ್ಲಬ್ನ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಪಾಲಿಬೆಟ್ಟ ಸಾರ್ವಜನಿಕ ಗಣಪತಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ ಶಾಲು ಹೊದಿಸಿ ಸನ್ಮಾನಿಸಿದರು.
ಗಾಡ್ಫ್ರೆಡ್ ಅವರು ಸುಮಾರು 27 ವರ್ಷದಿಂದ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಬ್ಯಾಂಡ್ ವಾದನ ತರಬೇತಿಯಲ್ಲಿಯೂ ಪರಿಣತರಾಗಿದ್ದು ಜಿಲ್ಲೆಯ ಹಲವು ಶಾಲೆಗಳಿಗೆ ತೆರಳಿ ತರಬೇತಿ ನೀಡಿರುತ್ತಾರೆ. ಕೋಲ್ಕತ್ತಾದಲ್ಲಿ ಜರುಗಿದ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾಟದಲ್ಲಿ ರಾಜ್ಯ ಹಾಕಿ ತಂಡದ ಮುನ್ನಡೆ ಆಟಗಾರಾಗಿ ಪಾಲ್ಗೊಂಡಿದ್ದರು. ಫುಟ್ಬಾಲ್ ತರಬೇತುದಾರರಾಗಿರುವ ಗಾಡ್ಫ್ರೆಡ್ ಅವರು ತರಬೇತಿ ನೀಡಿದ ಪಾಲಿಬೆಟ್ಟ ಸರ್ಕಾರಿ ಪ್ರಾಥಮಿಕ ಶಾಲಾ ತಂಡವು ನವದೆಹಲಿಯಲ್ಲಿ 1999ರಲ್ಲಿ ಜರುಗಿದ ರಾಷ್ಟ್ರಮಟ್ಟದ ಕಾಲ್ಚೆಂಡು ಪಂದ್ಯಾಟದಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಿತ್ತು. ಕುಶಾಲನಗರದ ನೋಯೆಲ್ ಎಲ್ಲೀಸ್ ಹಾಗೂ ಜೆ.ಎಂ. ರಾಡ್ರಿಗ್ಸ್ ದಂಪತಿಯ 4ನೇ ಪುತ್ರರಾಗಿರುವ ಗಾಡ್ ಫ್ರೆಡ್ ಅವರ ಪತ್ನಿ ಇವ್ಲೀನ್ ಅವರೂ ಅರುವತ್ತೊಕ್ಕಲುವಿನ ಸರ್ವ ದೈವತ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇಬ್ಬರು ಪುತ್ರಿಯರಿದ್ದಾರೆ.
ಪಾಲಿಬೆಟ್ಟದಲ್ಲಿ ನಡೆದ ಸಮಾರಂಭದಲ್ಲಿ ಯಂಗ್ ಇಂಡಿಯಾ ಯೂತ್ ಕ್ಲಬ್ನ ಅಧ್ಯಕ್ಷ ಇಸ್ಮಾಯಿಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಾವೇರಿ, ಗ್ರಾ.ಪಂ. ಮಾಜಿ ಅಧ್ಯಕ್ಷ ವಿಜು ಸುಬ್ರಮಣಿ, ಹಾಲಿ ಅಧ್ಯಕ್ಷ ಕುಟ್ಟಂಡ ವಸಂತ, ಕ್ಲಬ್ನ ನಿರ್ದೇಶಕ ಮೋಯಿದೀನ್ ಮುಂತಾದವರು ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.