ನಿವೇಶನ ರಹಿತರಿಗೆ ಸರ್ಕಾರಿ ಭೂಮಿ ನೀಡಲು ಆಗ್ರಹ
ಮಡಿಕೇರಿ: ಕೊಡಗು ಜಿಲ್ಲೆಯ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿರುವ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ತಕ್ಷಣ ಜಿಲ್ಲಾಡಳಿತ ಗುರುತಿಸಿ ನಿವೇಶನ ರಹಿತರಾಗಿ ಕೊಡಗಿನಲ್ಲಿ ತಲಾತಲಾಂತರದಿಂದ ಬದುಕುತ್ತಿರುವ ಬಡಮಂದಿಗೆ ಮನೆ ನಿರ್ಮಿಸಲು ಅವಕಾಶ ಮಾಡಿಕೊಡಲು ಮುಂದಾಗಬೇಕೆಂದು ಅಹಿಂದ ಕಾರ್ಯಾಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯು ಒತ್ತಾಯಿಸಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಹತ್ತಾರು ಎಕರೆ ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಕೆಲವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅಲ್ಲದೆ, ತೆರೆದ ಪ್ರದೇಶದ ಜಾಗಗಳು ಸಾಕಷ್ಟು ಇದೆ. ಸರ್ವೇ ಕಾರ್ಯಕೈಗೊಂಡು ಕಂದಾಯ ಇಲಾಖೆ ಇದನ್ನು ಅಂತಿಮಗೊಳಿಸಿ ಅರ್ಹ ಬಡವರಿಗೆ, ನಿವೇಶನ ರಹಿತರಿಗೆ ಸಮಾನಾಗಿ ನಿವೇಶನ ನೀಡಿ ಮನೆ ನಿರ್ಮಿಸಲು ಮುಂದಾಗಬೇಕೆಂದು ಬೇಬಿ ಮ್ಯಾಥ್ಯು ಸಲಹೆ ನೀಡಿದರು. ಫೆ.15 ರಂದು ಮಡಿಕೇರಿಯಲ್ಲಿ ಪ್ರಗತಿಪರ ಸಂಘಟನೆಯ ನೇತೃತ್ವದಲ್ಲಿ ನಿವೇಶನರಹಿತರಿಗಾಗಿ ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ ಅಹಿಂದ ಸಂಘಟನೆಯ ಎಲ್ಲಾ ಕಾರ್ಯಕರ್ತರು, ಪಾಲ್ಗೊಳ್ಳಬೇಕೆಂದು ಬೇಬಿ ಮ್ಯಾಥ್ಯು ಮನವಿ ಮಾಡಿದ್ದಾರೆ.
ಇಂದು ಹಕ್ಕುಪತ್ರ ವಿತರಣೆ
ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ಆರ್‌ಎಂಸಿ ಸಭಾಂಗಣದಲ್ಲಿ ತಾಲೂಕಿನ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ವತಿಯಿಂದ ಅರಣ್ಯ ಹಕ್ಕು ಪತ್ರಗಳನ್ನು ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಫೆ.10ರಂದು ವಿತರಿಸಲಿದ್ದಾರೆ. ಸಚಿವ ಅಪ್ಪಚ್ಚು ರಂಜನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಪಂ, ತಾಪಂ, ಗ್ರಾಪಂ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.