ಸೋಮವಾರಪೇಟೆಯಲ್ಲಿ ಮಳೆ: ಉಪಮುಖ್ಯಮಂತ್ರಿ ಕಾರ್ಯಕ್ರಮ ಅಸ್ತವ್ಯಸ್ತ
ಸೋಮವಾರಪೇಟೆ: ಬಿಸಿಲಿನ ತಾಪದಿಂದ ಬೇಸತ್ತಿದ್ದ ಜನರಿಗೆ ಶನಿವಾರ ಸಂಜೆ ಸುರಿದ ಮಳೆ ತಂಪೆರೆಯಿತು. ಕೆಲವು ಕಡೆ ಜನರು ಮಳೆಯಿಂದಾಗಿ ಪರದಾಡುವಂತಾಯಿತು.
ಸೋಮವಾರಪೇಟೆಯಲ್ಲಿ ಸಾರಿಗೆ ಸಚಿವ ಆರ್.ಅಶೋಕ್ ಶಂಕುಸ್ಥಾಪನೆ ನೆರವೇರಿಸಬೇಕಾಗಿದ್ದ ಹೈಟೆಕ್ ಬಸ್ ನಿಲ್ದಾಣದ ಶಂಕುಸ್ಥಾಪನಾ ಕಾರ್ಯಕ್ರಮ ಅಸ್ತವ್ಯಸ್ತಗೊಂಡಿತು. ಮಾದಾಪುರದಲ್ಲಿ ನಡೆದ ಕೊಡವ ಮಾನಮ್ಮೆ ಸಾಂಸ್ಕೃತಿಕ ಉತ್ಸವದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿದ್ದ ಸಚಿವ ಆರ್.ಆಶೋಕ್, ಸಭೆಯಲ್ಲಿ ಮಾತನಾಡುತ್ತಿದ್ದ ಸಂದರ್ಭವೇ ಮಳೆ ಸುರಿಯಲು ಪ್ರಾರಂಭವಾದ ಹಿನ್ನೆಲೆಯಲ್ಲಿ ಮಾತನ್ನು ಚುಟುಕುಗೊಳಿಸಿ ಸೋಮವಾರಪೇಟೆಯ ಕಾರ್ಯಕ್ರಮಕ್ಕೆ ತೆರಳಿದರು.
ಸೋಮವಾರಪೇಟೆಯಲ್ಲೂ ಧಾರಾಕಾರ ಮಳೆ ಸುರಿಯಲು ಆರಂಭವಾಗಿ ಅತಿಥಿಗಳಿಗೆ ವೇದಿಕೆ ಹತ್ತಲು ಸಾಧ್ಯವಾಗಲಿಲ್ಲ. ಬಸ್ ನಿಲ್ದಾಣ ಅವರಣದಲ್ಲೇ ರು. 1.20 ಕೋಟಿ ವೆಚ್ಚದ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ತೆರಳಿದರು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಶಿವಪ್ಪ ಇದ್ದರು. ತಾಲೂಕಿನ ಹಲವು ಕಡೆ ಮಳೆ ಸುರಿದಿದ್ದು, ವಾತಾವರಣ ತಂಪಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.