ಕಾವೇರಿ ತಾಲೂಕಿಗೆ ಸುಂಟಿಕೊಪ್ಪ ಹೋಬಳಿ ಸೇರ್ಪಡೆಗೆ ವಿರೋಧ
ಮಡಿಕೇರಿ: ಕಾವೇರಿ ತಾಲೂಕಿಗೆ ಚೆಟ್ಟಳ್ಳಿಯನ್ನು ಒಳಗೊಂಡ ಸುಂಟಿಕೊಪ್ಪ ಹೋಬಳಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಜಿ.ಪಂ. ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಚೆಟ್ಟಳ್ಳಿಯನ್ನು ಮಡಿಕೇರಿ ತಾಲೂಕಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಣಿ ಉತ್ತಪ್ಪ, ಚೆಟ್ಟಳ್ಳಿಯನ್ನು ಮಡಿಕೇರಿ ತಾಲೂಕಿಗೆ ಸೇರಿಸುವಂತೆ ಕಳೆದ 15 ವರ್ಷಗಳಿಂದ ನಿರಂತರ ಹೋರಾಟ ನಡೆಸಿಕೊಂಡು ಬರಲಾಗಿದೆ. ಇದೀಗ ಕಾವೇರಿ ತಾಲೂಕು ರಚನೆಗೆ ಒತ್ತಡ ಹೇರಲಾಗುತ್ತಿದ್ದು, ಈ ತಾಲೂಕಿನಲ್ಲಿ ಸುಂಟಿಕೊಪ್ಪ ಹೋಬಳಿಯನ್ನು ಸೇರಿಸಿಕೊಂಡಿರುವುದಾಗಿ ತಮ್ಮ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದರು.
ಹೊಸ ಕಾವೇರಿ ತಾಲೂಕಿನಡಿ ಮಾದಾಪುರ, ಸುಂಟಿಕೊಪ್ಪ, ಕೆದಕಲ್, ಚೆಟ್ಟಳ್ಳಿ ವ್ಯಾಪ್ತಿಯನ್ನು ಸೇರ್ಪಡೆಗೊಳಿಸಿದರೆ ಈ ಭಾಗದ ಸಾರ್ವಜನಿಕರು ಸರ್ಕಾರಿ ಕೆಲಸ ಕಾರ್ಯಗಳಿಗೆ ದೂರದ ಕುಶಾಲನಗರಕ್ಕೆ ತೆರಳುವ ಸಂಕಷ್ಟ ಎದುರಾಗುತ್ತದೆ. ಯಾವುದೇ ಕಾರಣಕ್ಕೂ ಈ ಪ್ರದೇಶಗಳನ್ನು ಕಾವೇರಿ ತಾಲೂಕಿಗೆ ಸೇರಿಸಬಾರದೆಂದು ಆಗ್ರಹಿಸಿದ ಮಣಿ ಉತ್ತಪ್ಪ ಒಂದೊಮ್ಮೆ ಉಸ್ತುವಾರಿ ಸಚಿವರು ಮತ್ತು ವಿಧಾನಸಭಾಧ್ಯಕ್ಷರು ಇದಕ್ಕೆ ಸಮ್ಮತಿಸಿದರೂ ತಾವು ರಾಜಕೀಯ ರಹಿತವಾಗಿ ಇದನ್ನು ವಿರೋಧಿಸಿ ತೀವ್ರ ಹೋರಾಟ ನಡೆಸುವುದರ ಜತೆಗೇ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು. ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ಖಂಡಿಸಿದ ಇದಕ್ಕೂ ಮುಂಚಿತವಾಗಿ ಈ ವೈದ್ಯರು ಮಾನವೀಯ ದೃಷ್ಟಿಯಿಂದ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ನೀಡಲು ಮುಂದಾಗಲೆಂದು ಒತ್ತಾಯಿಸಿದರು.
ವೈದ್ಯಾಧಿಕಾರಿಗಳ ವರ್ತನೆಯ ವಿರುದ್ಧ ಜಿಪಂ ಸಭೆಯಲ್ಲಿ ವೈದ್ಯರ ಅಮಾನತ್ತಿಗೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲು ಒತ್ತಡ ಹೇರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚೆಟ್ಟಳ್ಳಿ ವಿಎಸ್ಎಸ್ಎನ್ ನಿರ್ದೇಶಕ ನೂಜಿಬೈಲು ನಾಣಯ್ಯ ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.