ಕುಶಾಲನಗರ ಪೂರ್ಣ ಬಂದ್
ಕುಶಾಲನಗರ: ನೂತನ ಕಾವೇರಿ ತಾಲೂಕು ಹೋರಾಟ ಸಮಿತಿ ಕರೆ ನೀಡಿದ ಕುಶಾಲನಗರ ಬಂದ್ಗೆ ಪೂರ್ಣ ಬೆಂಬಲ ವ್ಯಕ್ತವಾಗಿದೆ. ಪಟ್ಟಣದ ಎಲ್ಲ ಅಂಗಡಿ- ಮುಂಗಟ್ಟು ಸೇರಿದಂತೆ ಶಾಲೆ, ಕಾಲೇಜುಗಳು, ಬ್ಯಾಂಕ್ ಇನ್ನಿತರ ಸಂಸ್ಥೆಗಳು ವಹಿವಾಟು ಸ್ಥಗಿತಗೊಳಿಸಿದ್ದವು.
ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನ 12ರತನಕ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು. ಈ ಸಂದರ್ಭ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಅಂಗಡಿ ಮುಂಗಟ್ಟುಗಳು ದಿನವಿಡೀ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದವು.
ನೂತನ ಕಾವೇರಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಟಿ.ಆರ್. ಶರವಣಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮತ್ತು ಹೋರಾಟ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಬಂದ್ ಯಶಸ್ವಿಯಾಗಿದೆ.
ವಾಹನ ಸಂಚಾರಕ್ಕೆ ತಡೆ: ಬಂದ್ ವೇಳೆ ಕುಶಾಲನಗರದ ಅರಣ್ಯ ತಪಾಸಣೆ ಗೇಟ್ ಬಳಿ, ಮಡಿಕೇರಿ- ಕುಶಾಲನಗರ ರಸ್ತೆಯ ತಾವರೆಕೆರೆ ಬಳಿ ಮತ್ತು ಹಾಸನ- ಕುಶಾಲನಗರ ರಸ್ತೆಯ ಮುಳ್ಳುಸೋಗೆ ಬಳಿ ವಾಹನ ಸಂಚಾರಕ್ಕೆ ತಡೆಯೊಡ್ಡಲಾಗಿತ್ತು. ಇದರಿಂದ ನೂರಾರು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವ ಪ್ರಯಾಣಿಕರಿಗೆ ಅನನುಕೂಲ ಕಂಡುಬಂತು. ಮೈಸೂರು ಕಡೆಯಿಂದ ಬರುತ್ತಿದ್ದ ಸರ್ಕಾರಿ ಬಸ್ಗಳು ಕೊಪ್ಪದಲ್ಲಿ ಪ್ರಯಾಣಿಕರನ್ನು ಇಳಿಸಿ ಹಿಂತಿರುಗುತ್ತಿದ್ದ ದೃಶ್ಯ ಕಂಡುಬಂತು. ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಕಾಲ್ನಡಿಗೆಯಲ್ಲಿ ತೆರಳಬೇಕಾಯಿತು.
ತಾವರೆಕೆರೆ ಬಳಿ ಗೆಳೆಯರ ಬಳಗ ಸಂಚಾಲಕ ವಿ.ಎಸ್. ಆನಂದ್ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಜೋಸೆಫ್ ವಿಕ್ಟರ್ ಸೋನ್ಸ್ ಮತ್ತಿತರರ ನೇತೃತ್ವದಲ್ಲಿ ರಸ್ತೆ ತಡೆ ನಡೆಯಿತು. ಪ್ರತಿಭಟನಾಕಾರರು ಟಯರ್ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
ರಸ್ತೆ ತಡೆ: ಮುಳ್ಳುಸೋಗೆ ಬಳಿ ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ಜಯಕರ್ನಾಟಕ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ ನೇತೃತ್ವದಲ್ಲಿ ರಸ್ತೆ ತಡೆ ನಡೆಸಲಾಯಿತು. ಕೊಪ್ಪ ಅರಣ್ಯ ತಪಾಸಣೆ ಗೇಟ್ ಬಳಿ ಜಿಲ್ಲೆಯ ಗಡಿ ಭಾಗದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಯೋಗೇಶ್, ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷರಾದ ಟಿ.ಆರ್. ಶರವಣ ಕುಮಾರ್, ಎಸ್.ಕೆ. ಸತೀಶ್, ಪಿ.ಕೆ. ಜಗದೀಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಂದ್ಗೆ ಸ್ಥಳೀಯ ಹಲವು ಸಂಘಟನೆಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
ಬಿಗಿ ಬಂದೋಬಸ್ತ್: ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಪೌಲ್ ಎಸ್. ವರ್ಮಾ, ಪೊಲೀಸ್ ವೃತ್ತ ನಿರೀಕ್ಷಕ ಟಿ.ಎಲ್. ಗಣೇಶ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪಟ್ಟಣಕ್ಕೆ ಸೇರುವ ಗಡಿ ಭಾಗಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ಬದಲಿ ರಸ್ತೆಯಲ್ಲಿ ತೆರಳಲು ಕ್ರಮ ಕೈಗೊಂಡಿದ್ದು ಕಂಡುಬಂತು.
ಕಾಲೇಜಿಗೆ ನುಗ್ಗಿ ಬಂದ್ಗೆ ಒತ್ತಾಯ: ಸ್ಥಳೀಯ ಖಾಸಗಿ ಕಾಲೇಜೊಂದರಲ್ಲಿ ಪರೀಕ್ಷೆ ನಡೆಯುತ್ತಿದ್ದ ಸಂದರ್ಭ ಪ್ರತಿಭಟನಾಕಾರರು ಕಾಲೇಜಿಗೆ ನುಗ್ಗಿ ಬಂದ್ ನಡೆಸಲು ಯತ್ನಿಸಿದ್ದು, ಈ ವೇಳೆ ಕಾಲೇಜು ಮುಖ್ಯಸ್ಥರೊಂದಿಗೆ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು. ಸ್ಥಳಕ್ಕೆ ಡಿವೈಎಸ್ಪಿ ಪೌಲ್ ಎಸ್. ವರ್ಮಾ ಭೇಟಿ ನೀಡಿ ಪರಿಸ್ಥಿತಿ ಶಾಂತಗೊಳಿಸಿದರು.
ನಾಗರಿಕರ ಪರದಾಟ: ಪಟ್ಟಣದ ಎಲ್ಲ ಸಂಪರ್ಕ ರಸ್ತೆಗಳಿಗೆ ಪ್ರತಿಭಟನಾಕಾರರು ತಡೆಯೊಡ್ಡಿದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಯಿತು.
ಹಲವರು ಮದುವೆ ಸೇರಿದಂತೆ ತುರ್ತು ಕಾರ್ಯಗಳಿಗೆ ತೆರಳಲು ಹಲವು ಗಂಟೆಗಳ ಕಾಲ ಕಾಯಬೇಕಾಯಿತು. ಗುಡ್ಡೆಹೊಸೂರು ಬಳಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ವಾಹನವನ್ನೇ ರಸ್ತೆಗೆ ಅಡ್ಡಲಾಗಿಟ್ಟು ವಾಹನಗಳನ್ನು ಸಿದ್ದಾಪುರ ಕಡೆಯಿಂದ ಪಿರಿಯಾಪಟ್ಟಣ ಮಾರ್ಗವಾಗಿ ತೆರಳುವಂತೆ ಸೂಚಿಸುತ್ತಿದ್ದ ದೃಶ್ಯ ಗೋಚರಿಸಿತು.
ಮಡಿಕೇರಿ ರಸ್ತೆಯಲ್ಲಿ ತಾವರೆಕೆರೆ ಬಳಿ ಗೆಳೆಯರ ಬಳಗದ ಸದಸ್ಯರು ಟಯರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.