ಪ್ರಿಯತಮೆಯ ಕೊಂದ ಯುವಕನ ಆತ್ಮಹತ್ಯೆ ಯತ್ನ ವಿಫಲ
ವಿರಾಜಪೇಟೆ: ಪ್ರಿಯಕರನೇ ಪ್ರಿಯತಮೆಯ ಕತ್ತು ಹಿಸುಕಿ ಹತ್ಯೆ ಮಾಡಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ವಿಫಲ ಪ್ರಯತ್ನಿಸಿದ ಘಟನೆ ಕಾಕೋಟುಪರಂಬು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನಡೆದಿದೆ. ಶಾಲಿನಿ (17) ಮೃತಳು.
ಘಟನೆ ಹಿನ್ನೆಲೆ: ಮೈತಾಡಿ ಗ್ರಾಮದ ತೊತ್ತೇರ ಗಣಪತಿ ಎಂಬವರ ಪುತ್ರ ಕಿರಣ್ ದೇವಯ್ಯ (20) ಹಾಗೂ ಕಾವಾಡಿ ಗ್ರಾಮದ ಸೋಮೆಯಂಡ ಡಾನ್ ದೇವಯ್ಯ ಪುತ್ರಿ ಶಾಲಿನಿ ಪ್ರೇಮಿಗಳು. ಇವರು ವಿರಾಜಪೇಟೆಯ ಖಾಸಗಿ ಕಂಪ್ಯೂಟರ್ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದರು.
ಮಂಗಳವಾರ ಅಪರಾಹ್ನ ಇಬ್ಬರು ತರಗತಿ ಮುಗಿಸಿಕೊಂಡು ಆಟೋರಿಕ್ಷಾದಲ್ಲಿ ಕಾಕೋಟುಪರಂಬು ಬಳಿ ಇರುವ ಜಾನಕಿ ಎಂಬವವರ ತೋಟಕ್ಕೆ ತೆರಳಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಾಗ ಕುಪಿತಗೊಂಡ ಕಿರಣ್ ದೇವಯ್ಯ ಪ್ರೇಯಸಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಮೃತ ಶಾಲಿನಿಯ ದೇಹದಲ್ಲಿ ಕೈಕಾಲುಗಳಲ್ಲಿ ಸಿಗರೇಟಿನಿಂದ ಸುಟ್ಟ ಗಾಯಗಳು ಕಂಡು ಬಂದಿದೆ.
ಕಿರಣ್ ವಿಷ ಸೇವನೆ: ಆರೋಪಿ ಕಿರಣ್ ದೇವಯ್ಯ ಬುಧವಾರ ಬೆಳಗ್ಗೆ 9 ಗಂಟೆಗೆ ತಾನು ವಿಷ ಸೇವಿಸಿ ಪೊಲೀಸ್ ಠಾಣೆಗೆ ತೆರಳಿ ವಿಚಾರ ತಿಳಿಸಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಅನುಚೇತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಮಹೇಶ್ ಮೊಕದ್ದಮೆ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.