ಯೋಜನೆಗಳ ಗುರಿ ಸಾಧನೆಗೆ ಮಾರ್ಚ್ ಗಡುವು
ಮಡಿಕೇರಿ: ಪ್ರಧಾನಮಂತ್ರಿಯವರ 15 ಅಂಶಗಳ ಕಾರ್ಯಕ್ರಮದಡಿ ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಸಮುದಾಯದವರಿಗೆ ನಿಗದಿಪಡಿಸಿರುವ ಯೋಜನಾ ಕಾರ್ಯಕ್ರಮಗಳ ಗುರಿಯನ್ನು ಮಾರ್ಚ್ ಅಂತ್ಯದೊಳಗೆ ಪ್ರಗತಿ ಸಾಧಿಸುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿಯವರ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ, ಪೌರಾಡಳಿತ, ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳು ತರಬೇತಿ, ಶಿಷ್ಯವೇತನ, ಪ್ರೋತ್ಸಾಹಧನ ಮತ್ತಿತರ ಕಾರ್ಯಕ್ರಮಗಳನ್ನು ಅಲ್ಪಸಂಖ್ಯಾತ ಸಮುದಾಯದವರಿಗೆ ತಲುಪಿಸಬೇಕು. ಹಾಗೆಯೇ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸಹಾಯಧನ, ಪರಿಕರಗಳು ಸೇರಿದಂತೆ ನಾನಾ ಸೌಲಭ್ಯಗಳನ್ನು ವಿತರಣೆ ಮಾಡಿ ಪ್ರಸಕ್ತ ಸಾಲಿನ ಗುರಿ ಪೂರ್ಣಗೊಳಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೂಚಿಸಿದರು.
ಕಾಮಗಾರಿ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ: ವಿರಾಜಪೇಟೆ ಪಟ್ಟಣ ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗದಿಂದ ಯಾವ ಯಾವ ಕಾರ್ಯಕ್ರಮಗಳು ಮತ್ತು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂಬ ಸ್ಪಷ್ಟ ಮಾಹಿತಿ ಒದಗಿಸಬೇಕು. ಜೇನು ಕೃಷಿಗೆ ಸಂಬಂಧಿಸಿದಂತೆ ಜೇನು ಕೃಷಿ ಸಂಸ್ಥೆಗೆ ಅಲ್ಪಸಂಖ್ಯಾತರ ಸೌಲಭ್ಯದ ಬಗ್ಗೆ ಮಾಹಿತಿ ನೀಡಿ ಪ್ರಗತಿ ಸಾಧಿಸಬೇಕು ಎಂದು ಡಾ.ಎನ್. ಶಿವಶಂಕರ್ ನಿರ್ದೇಶಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯವರು ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ಕೊಡಿಸುವುದು, ಕಾನೂನು ಪದವೀಧರರಿಗೆ ಸಹಾಯಧನ, ಐಟಿಐ, ಡಿಪ್ಲೊಮಾ ತರಬೇತಿದಾರರಿಗೆ ಶಿಷ್ಯವೇತನ ಮತ್ತಿತರ ಸೌಲಭ್ಯಗಳ ಬಗ್ಗೆ, ಹಾಗೆಯೇ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಡಿ ಸ್ವಾವಲಂಬನೆ, ಅರಿವು, ಶ್ರಮಶಕ್ತಿ, ಮೈಕ್ರೋ ಕಿರುಸಾಲ, ಗಂಗಾ ಕಲ್ಯಾಣ ಮತ್ತಿತರ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಅರ್ಹರಿಗೆ ತಲುಪಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಜಿಪಂ ಉಪಕಾರ್ಯದರ್ಶಿ ಪಿ. ಪುಟ್ಟಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಬಸವ ವಸತಿ ಯೋಜನೆಯಡಿ ಅಲ್ಪಸಂಖ್ಯಾತರಿಗೆ 944ರ ಗುರಿಯಲ್ಲಿ 150 ಮನೆ ನಿರ್ಮಿಸಲಾಗಿದೆ. ಹಾಗೆಯೇ ಇಂದಿರಾ ಆವಾಸ್ ಯೋಜನೆಯಡಿ 143ರ ಗುರಿಯಲ್ಲಿ 30 ಮನೆ ನಿರ್ಮಿಸಲಾಗಿದೆ. ಉಳಿದ ಮನೆಗಳು ಪ್ರಗತಿ ಹಂತದಲ್ಲಿವೆ ಎಂದು ಅವರು ಮಾಹಿತಿ ನೀಡಿದರು.
ಅರ್ಹರಿಗೆ ವಸತಿ ಯೋಜನೆ ತಲುಪಿಸಲು ಸೂಚನೆ: ಜಿಲ್ಲೆಯಲ್ಲಿ ಕೆಲವು ಅಲ್ಪಸಂಖ್ಯಾತರಿಗೆ ಆರ್.ಟಿ.ಸಿ. ಇಲ್ಲದಿರುವುದು, ಜಾಗದ ಸಮಸ್ಯೆಯಿಂದ ವಸತಿ ಯೋಜನೆಗಳು ನಿಧಾನ ಗತಿಯಲ್ಲಿ ನಡೆಯುತ್ತಿವೆ. ನಿವೇಶನ ಹೊಂದಿರುವ ಅರ್ಹರಿಗೆ ಬಸವ ಮತ್ತು ಇಂದಿರಾ ಅವಾಸ್ ಯೋಜನೆಯಡಿ ವಸತಿ ಯೋಜನೆಯನ್ನು ತಲುಪಿಸಲು ಕಾಳಜಿವಹಿಸುವಂತೆ ತಾಪಂ ಇಒ ಮತ್ತು ಪಿಡಿಓಗಳಿಗೆ ಸೂಚಿಸಿರುವುದಾಗಿ ಪುಟ್ಟಸ್ವಾಮಿ ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ತಮ್ಮ ಇಲಾಖೆಯಲ್ಲಿ ಸಮವಸ್ತ್ರ, ಪಠ್ಯ ಪುಸ್ತಕ, ವಿದ್ಯಾರ್ಥಿ ವೇತನ, ಸೈಕಲನ್ನು ಪ್ರಸಕ್ತ ಸಾಲಿನಲ್ಲಿ ವಿತರಿಸಿ ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಬೀರ್ ಬಾಷ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಗಾರ್ಮೆಂಟ್ಸ್ ಉದ್ಯಮ, ಸಣ್ಣ ಕೈಗಾರಿಕೆಗಳ ಸ್ಥಾಪನೆ ಶಾಶ್ವತ ನೋಂದಣಿ ಪತ್ರ ನೀಡಲು ಪ್ರಸಕ್ತ ಸಾಲಿನಲ್ಲಿ 10ರ ಗುರಿಯಲ್ಲಿ 10 ಪ್ರಗತಿ ಸಾಧಿಸಲಾಗಿದೆ. ಅಲ್ಪಸಂಖ್ಯಾತರ ಕೈಗಾರಿಕಾ ಉದ್ದಿಮೆಗಳಿಗೆ ಸಹಾಯಧನ ಮಂಜೂರಾತಿ ಮಾಡಲಾಗಿದೆ ಎಂದರು.
ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಎನ್. ಶ್ರೀರಾಮ ರೆಡ್ಡಿ ಮಾತನಾಡಿ, 150 ಕಿರು ಪೊಟ್ಟಣ ಗುರಿಯಲ್ಲಿ 166 ಕಿರುಪೊಟ್ಟಣ ವಿತರಿಸಲಾಗಿದೆ. ಹಾಗೆಯೇ 1245 ಕೋಳಿ ಮರಿ ವಿತರಣೆ ಗುರಿಯಲ್ಲಿ 750 ಕೋಳಿ ಮರಿ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಎಂ. ತಿರುಮಲೇಶ ಇಲಾಖೆಯಲ್ಲಿ ರಾಷ್ಟ್ರೀಯ ಜಲಾನಯನ, ಪಶ್ಚಿಮಘಟ್ಟ ಅಭಿವೃದ್ಧಿ ಹಾಗೂ ಸಮಗ್ರ ಜಲಾನಯನ ಯೋಜನಾ ಕಾರ್ಯಕ್ರಮಗಳಿದ್ದು, ಕೃಷಿ ಹೊಂಡ, ತೊಟ್ಟಿಗುಂಡಿ ತರಬೇತಿ ಕಾರ್ಯಕ್ರಮಗಳನ್ನು ಬೇಸಿಗೆ ಅವಧಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಕೆಂಚಪ್ಪ ಎಸ್.ಜೆ.ಎಸ್.ಆರ್.ವೈ ಯೋಜನೆಯಡಿ ಸ್ವ ಉದ್ಯೋಗ ಕಲ್ಪಿಸುವಲ್ಲಿ ಶೇ.100ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಲಾಗಿದೆ. ಹಾಗೆಯೇ ಸ್ಟೆಫ್ಅಫ್ ತರಬೇತಿ ಯೋಜನೆಯಡಿ ಹೆಚ್ಚಿನ ಸಾಧನೆ ಮಾಡಲಾಗಿದೆ ಎಂದರು. 13ನೇ ಹಣಕಾಸು ಯೋಜನೆ ಮತ್ತು ಸಣ್ಣ ನೀರಾವರಿ ಯೋಜನೆಯಡಿ ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಹದೇವಸ್ವಾಮಿ ತಿಳಿಸಿದರು. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಗುರುಮೂರ್ತಿ, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ. ಜಗನ್ನಾಥ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಿವಣ್ಣ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ತಮ್ಮ ವ್ಯಾಪ್ತಿಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಗಂಗಾಧರಪ್ಪ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸುವಂತೆ ಸಲಹೆ ಮಾಡಿದರು. ನಾನಾ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.