ಕೊಡಗಿನಲ್ಲಿ 80ನೇ ಸಾಹಿತ್ಯ ಸಮ್ಮೇಳನ; ಕೊಡವ ನ್ಯಾಶನಲ್ ಕೌನ್ಸಿಲ್ ವಿರೋಧ
ಮಡಿಕೇರಿ: ಕೊಡಗಿನಲ್ಲಿ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಣಯವನ್ನು ತೀವ್ರವಾಗಿ ವಿರೋಧಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯು ಕನ್ನಡಪರ ಬುದ್ಧಿಜೀವಿಗಳು, ಸಾಹಿತಿಗಳು ಕೊಡವರ ಬೇಡಿಕೆಗಳ ಬಗ್ಗೆ ತಮ್ಮ ಬದ್ಧತೆಯ ಕುರಿತು ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿ ಫೆ.21ರಂದು ಸತ್ಯಾಗ್ರಹ ಹಮ್ಮಿಕೊಂಡಿದೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಮುಖಂಡ ಎನ್.ಯು. ನಾಚಪ್ಪ, ಹಲವಾರು ವರ್ಷಗಳಿಂದ ಕೊಡವರ ಹಕ್ಕೋತ್ತಾಯಗಳಿಗಾಗಿ ಕೊಡಗಿನಲ್ಲಿ ನಿರಂತರ ಸತ್ಯಾಗ್ರಹ, ಧರಣಿಗಳು ನಡೆಯುತ್ತಿವೆ. ಕೊಡವ ಪಾರಂಪರಿಕ ಹೆಗ್ಗುರುತುಗಳನ್ನು ಮತ್ತು ಹೆಸರುಗಳನ್ನು ಪುನರ್ ನಾಮಕರಣ ಮಾಡಬೇಕು, ಕೊಡವ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಜಾರಿಗೊಳಿಸಬೇಕು, ಪಠ್ಯ ಕ್ರಮದಲ್ಲಿ ಕೊಡವ ಭಾಷಾ ಪಠ್ಯ ಅಳವಡಿಸಬೇಕೆಂಬ ಹಕ್ಕೋತ್ತಾಯಗಳ ಬಗ್ಗೆಯೂ ಕೊಡವ ನ್ಯಾಷನಲ್ ಕೌನ್ಸಿಲ್ ನಿರಂತರವಾಗಿ ಹೋರಾಡುತ್ತಿದೆ. ಹೀಗಿರುವಾಗ ಕೊಡವರ ಬೇಡಿಕೆಗಳ ಬಗ್ಗೆ ಕನ್ನಡದ ಬುದ್ಧಿಜೀವಿಗಳು, ಸಾಹಿತಿಗಳು ಹೊಂದಿರುವ ಬದ್ಧತೆಯ ಬಗ್ಗೆ ಶ್ವೇತಪತ್ರ ಹೊರಡಿಸಲೇ ಬೇಕೆಂದು ಒತ್ತಾಯಿಸಿ ಫೆ.21ರಂದು ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಿಎನ್ಸಿ ಸತ್ಯಾಗ್ರಹ ಹಮ್ಮಿಕೊಂಡಿದೆ ಎಂದೂ ನಾಚಪ್ಪ ಹೇಳಿದರು.
ಅಂತಾರಾಷ್ಟ್ರೀಯ ಮಾತೃಭಾಷಾ ದಿನವಾಗಿರುವ ಫೆ.21ರಂದು ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ ನಾಚಪ್ಪ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಜಾಪುರವನ್ನು ವಿಜಯಪುರ ಎಂದು ಘೋಷಿಸಬೇಕೆಂಬ ನಿರ್ಣಯ ಕೈಗೊಂಡಿರುವ ರೀತಿಯಲ್ಲಿಯೇ ಕೊಡವ ನೆಲದ ಹೆಗ್ಗುರುತಿನ ಬಗ್ಗೆ ಕನ್ನಡ ಪ್ರತಿಪಾದಕರು ತಮ್ಮ ಬದ್ಧತೆ ವ್ಯಕ್ತಪಡಿಸಬೇಕೆಂದು ನಾಚಪ್ಪ ಒತ್ತಾಯಿಸಿದರು. ಕೊಡವರು ಭಿಕ್ಷೆ ಕೇಳುತ್ತಿಲ್ಲ. ಬದಲಿಗೆ, ಕೊಡವರ ಜನ್ಮಸಿದ್ಧ ಹಕ್ಕನ್ನು ಪುರಸ್ಕರಿಸಿ ಎಂದು ಕೇಳುತ್ತಿದ್ದೇವೆ. 80ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭ ಕೊಡಗಿನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಹರದಾಸ ಅಪ್ಪಚ್ಚ ಕವಿ ಹೆಸರಿನ ಕಟೌಟ್ಗಳನ್ನು ರಚಿಸಿ ಕೊಡವರ ತಲೆಗೆ ಟೋಪಿ ಹಾಕುವ ಅಗತ್ಯತೆಯಿಲ್ಲ ಎಂದು ತೀಕ್ಷ್ಮವಾಗಿ ಹೇಳಿದ ನಾಚಪ್ಪ, ನೆಲಕಳೆದುಕೊಂಡು ಅತಂತ್ರರಾಗುವ ಭೀತಿಯಲ್ಲಿರುವ ಕೊಡವರ ರಕ್ಷಣೆಗೆ ಸರ್ಕಾರ ಮತ್ತು ಕನ್ನಡ ಪ್ರತಿಪಾದಕರು ಯಾವ ರೀತಿಯ ಕಾರ್ಯಯೋಜನೆ ಹಮ್ಮಿಕೊಂಡಿದ್ದಾರೆ ಎಂಬುದನ್ನು ತಿಳಿಸುವುದು ಇಂದಿನ ಅಗತ್ಯ ಎಂದು ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮನವಿಯನ್ನೂ ಸಲ್ಲಿಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.