ನವೋದಯ ಸಿಬ್ಬಂದಿ ಬೇಡಿಕೆ ಈಡೇರಿಸಿ, ಮಕ್ಕಳ ಭವಿಷ್ಯ ರಕ್ಷಿಸಿ
ಮಡಿಕೇರಿ: ಜವಾಹರ್ ನವೋದಯ ವಿದ್ಯಾಲಯದ ಸಿಬ್ಬಂದಿಗಳ ಅನಿರ್ದಿಷ್ಟಾವಧಿ ಮುಷ್ಕರದಿಂದ ವಿದ್ಯಾರ್ಥಿಗಳ ಭವಿಷ್ಯ ಆತಂಕಕ್ಕೆ ಸಿಲುಕಿದ್ದು, ತಕ್ಷಣವೇ ಅವರ ಬೇಡಿಕೆಗಳನ್ನು ಪೂರೈಸಿ ಮಕ್ಕಳ ಭವಿಷ್ಯವನ್ನು ಕಾಪಾಡುವಂತೆ ಪೋಷಕ ಶಿಕ್ಷಕ ಪರಿಷತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ನವೋದಯ ವಿದ್ಯಾಲಯದ ಪೋಷಕ- ಶಿಕ್ಷಕ ಪರಿಷತ್ನ ಪಿ.ಎ. ದೇವಯ್ಯ, ಎ.ಕೆ. ನಾಣಯ್ಯ, ಡಿ.ಎ. ಮೋಹನ್, ಕೆ.ಸಿ. ಸುಧಿ, ಕುಸುಮ, ಕಾವೇರಮ್ಮ, ರೀನಾ ನಾಣಯ್ಯ, ರವೀಂದ್ರ ಮತ್ತಿತರ ಪೋಷಕರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಿವಶಂಕರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ನವೋದಯ ವಿದ್ಯಾಸಂಸ್ಥೆಯ 10ನೇ ತರಗತಿ ಮತ್ತು ಪಿಯುಸಿ ಪರೀಕ್ಷೆಗಳು ಮಾ.1ರಿಂದ ಆರಂಭಗೊಳ್ಳಲಿದೆ. ಈ ಹಂತದಲ್ಲಿ ವಿದ್ಯಾಲಯದ ಶಿಕ್ಷಕರು ಮತ್ತು ಸಿಬ್ಬಂದಿ ಮುಷ್ಕರದಿಂದ ಪಾಠ ಪ್ರವಚನಗಳು ಸಂಪೂರ್ಣ ಸ್ಥಗಿತಗೊಂಡು ಸಮಸ್ಯೆಯಾಗಲಿದೆ. ಹಲವಾರು ವರ್ಷಗಳಿಂದ ಈಡೇರದೆ ಉಳಿದಿರುವ ಪಿಂಚಣಿ ಮೊದಲಾದ ಬೇಡಿಕೆಗಳಿಗಾಗಿ ನಡೆಯುತ್ತಿರುವ ಮುಷ್ಕರ ಸ್ಥಗಿತಕ್ಕೆ ಪೂರಕವಾಗಿ ಇವರ ಬೇಡಿಕೆಗಳತ್ತ ಸರ್ಕಾರ ಗಮನ ಹರಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ನವೋದಯ ವಿದ್ಯಾಲಯದ ಸಹೋದರ ಸಂಸ್ಥೆಗಳಾದ ಕೆವಿಎಸ್, ಟಿಬೇಟಿಯನ್ ಸ್ಕೂಲ್ಗಳ ಸಿಬ್ಬಂದಿಗೆ ಪಿಂಚಣಿ ನೀಡಲಾಗುತ್ತಿದ್ದು, ಇದೇ ಪಿಂಚಣಿಯನ್ನು ನವೋದಯ ವಿದ್ಯಾಲಯದ ಸಿಬ್ಬಂದಿಗೆ ನಿರಾಕರಿಸಲಾಗುತ್ತಿದೆ. ಬೇಡಿಕೆ ಈಡೇರದಿದ್ದರೂ ವಾರದ ರಜೆಯೂ ಇಲ್ಲದೆ ಇಲ್ಲಿನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನವೋದಯ ವಿದ್ಯಾಲಯದ ಸಿಬ್ಬಂದಿಗಳ ಮೂಲಭೂತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಮತ್ತೆ ವಿದ್ಯಾಸಂಸ್ಥೆ ಎಂದಿನಂತೆ ಕಾರ್ಯ ನಿರ್ವಹಿಸುವಂತೆ ನೋಡಿಕೊಂಡು ಮಕ್ಕಳ ಭವಿಷ್ಯವನ್ನು ರಕ್ಷಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.