ಸರ್ಕಾರಿ ಬಸ್ನಲ್ಲಿ ಪೆಟ್ರೋಲ್ ಬಾಂಬ್ ಪತ್ತೆ!
ಸೋಮವಾರಪೇಟೆ: ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸರ್ಕಾರಿ ಬಸ್ನ ಸೀಟ್ ಅಡಿಯಲ್ಲಿ ಸಜೀವ ಪೆಟ್ರೋಲ್ ಬಾಂಬ್ ಬುಧವಾರ ಸಂಜೆ ಪತ್ತೆಯಾಗಿದೆ. ಮಡಿಕೇರಿ ಘಟಕಕ್ಕೆ ಸೇರಿದ (ಹರಿಹರ-ಶಿವಮೊಗ್ಗ-ಸೋಮವಾರಪೇಟೆ-ಮಡಿಕೇರಿಗೆ ತೆರಳುವ ಹಾಗೂ ಟಪಾಲು ಹೊತ್ತು ತರುವ) ಸರ್ಕಾರಿ ಬಸ್ ಬುಧವಾರ ಸಂಜೆ ಮಡಿಕೇರಿಯತ್ತ ತೆರಳಲು ಸೋಮವಾರಪೇಟೆಯ ಬಸ್ ನಿಲ್ದಾಣಕ್ಕೆ ಆಗಮಿಸಿದೆ. ಬಸ್ಗೆ ಈ ಹಿಂದಿನ ಬಸ್ ನಿಲ್ದಾಣದಲ್ಲಿ ಅಥವಾ ಬಸ್ ಆಗಮಿಸುವ ಮಾರ್ಗ ಮಧ್ಯೆ ಹತ್ತಿರುವ ದುಷ್ಕರ್ಮಿಗಳು ಈ ಪೆಟ್ರೋಲ್ ಬಾಂಬ್ ಇರಿಸಿರಬಹುದು ಅಥವಾ ಸೋಮವಾರಪೇಟೆ ಬಸ್ ನಿಲ್ದಾಣದಲ್ಲಿಯೇ ಹತ್ತಿ ಈ ಬಾಕ್ಸ್ ಇರಿಸಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸೋಮವಾರಪೇಟೆಯ ಸರ್ಕಾರಿ ಬಸ್ ನಿಲ್ದಾಣಕ್ಕೆ ಸಂಜೆ 4 ಗಂಟೆಗೆ ಆಗಮಿಸಿದ ಬಸ್ನಲ್ಲಿ ಸುಮಾರು 15 ಮಂದಿ ಇದ್ದರು. ಬಸ್ನಲ್ಲಿದ್ದ ಬಾಕ್ಸ್ನ ಒಳಗಿನಿಂದ ಕಲ್ಲು ಬಂಡೆಗಳನ್ನು ಸ್ಫೋಟಿಸಲು ಬಳಸುವ ಬತ್ತಿ ಜೋಡಿಸಿ ಬೆಂಕಿ ಹಚ್ಚಲಾಗಿದ್ದು, ಈ ಸಂದರ್ಭದಲ್ಲಿ ಐಗೂರು ಗ್ರಾಮಕ್ಕೆ ತೆರಳಲು ಬಸ್ ಹತ್ತಿದ ಯುವಕನಿಗೆ ಅಗರಬತ್ತಿ ಪರಿಮಳ ಬಂದಿದೆ. ನಂತರ ನಿರ್ವಾಹಕನಿಗೆ ತಿಳಿಸಿದ ಮೇಲೆ ಪರಿಶೀಲನೆ ನಡೆಸಿದಾಗ ಬತ್ತಿಯಲ್ಲಿ ಬೆಂಕಿಯಿದ್ದುದು ಕಂಡುಬಂದಿದೆ. ತಕ್ಷಣ ಬೆಂಕಿ ನಂದಿಸಿ ಬಾಕ್ಸ್ನ್ನು ಬಸ್ನಿಂದ ಹೊರತೆಗೆಯಲಾಗಿದೆ.
ಸ್ಫೋಟಿಸುವ ಉದ್ದೇಶ: ಮೊದಲು ಅಗರಬತ್ತಿಯ ಬುಡಕ್ಕೆ ಸ್ಫೋಟಕದ ಬತ್ತಿಯನ್ನು ಕಟ್ಟಿ ಅಗರಬತ್ತಿಗೆ ಬೆಂಕಿ ಹಚ್ಚಿದ್ದಾರೆ. ಬತ್ತಿ ಉರಿಯುತ್ತಾ ಸ್ಫೋಟಕ ಬತ್ತಿಯ ಬಳಿಗೆ ಬಂದಾಗ ಅದು ಉರಿದು ಪೆಟ್ರೋಲ್ ಬಾಂಬ್ ಸ್ಫೋಟಗೊಳ್ಳುವಂತೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.