ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಡಗು

ವೀರ ಸೇನಾನಿ ಚಿತ್ರಕ್ಕೆ ಕ್ಷೌರಿಕನಿಂದ ನಿತ್ಯ ಪೂಜೆ

Parashurama
Updated On : 27 Jan 2013, 11:41 am

ಮಡಿಕೇರಿ: ದೇಶದ ಮಹಾನ್ ಸೇನಾನಿ, ಕೊಡಗಿನ ಹೆಮ್ಮೆಯ ಪುತ್ರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜ.28ರಂದು (ಕಾರ್ಯಪ್ಪ ಅವರ ಜನ್ಮದಿನದಂದು) ಬಹುತೇಕರಿಗೆ ನೆನಪಾದರೆ ಮಡಿಕೇರಿಯ ಕ್ಷೌರಿಕರೊಬ್ಬರಿಗೆ ಮಾತ್ರ ನಿತ್ಯ ನೆನಪಾಗುತ್ತಾರೆ.
ಹೀಗಾಗಿಯೇ ನಿತ್ಯ ಇವರು ಕಾರ್ಯಪ್ಪ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿಯೇ ನಿತ್ಯಕಾಯಕಕ್ಕೆ ತೊಡಗುತ್ತಾರೆ. ಸೈನಿಕರಿದ್ದರೆ ನಾವು ಎಂಬ ಭಾವನೆಯೊಂದಿಗೆ ಸೇನಾನಾಯಕನಿಗೆ ನಿತ್ಯ ಪ್ರಣಾಮ ಅರ್ಪಿಸುತ್ತಿರುವ ಈ ಪೂಜಾಕರ್ತನ ಸೇವೆ ಮಾದರಿಯಾದದ್ದು.
ಯಾರಿವರು?: ಮಡಿಕೇರಿಯ ಕಾಲೇಜು ರಸ್ತೆಯಲ್ಲಿರುವ ಕುಪ್ಪು ಆ್ಯಂಡ್ ಸನ್ಸ್ ಮಾಲೀಕ ಗಣೇಶ್ ಕಳೆದ 20 ವರ್ಷಗಳಿಂದ ನಿತ್ಯವೂ ಬೆಳಗ್ಗೆ ಮತ್ತು ಸಂಜೆ ಕಾರ್ಯಪ್ಪ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಮ್ಮ ಗೌರವ ನಮನವನ್ನು ಆ ಮಹಾನ್ ಸೇನಾನಿಗೆ ಸಲ್ಲಿಸುತ್ತಿದ್ದಾರೆ. ಕುಪ್ಪು ಗಣೇಶ್ ಎಂದೇ ಖ್ಯಾತರಾಗಿರುವ ಗಣೇಶ್ ಅವರ ತಂದೆ ಕುಪ್ಪುಸ್ವಾಮಿ 40 ವರ್ಷಗಳ ಕಾಲ ಮಡಿಕೇರಿಯಲ್ಲಿನ ಕಾರ್ಯಪ್ಪ ಮನೆ ರೋಷನಾರಕ್ಕೆ ತೆರಳಿ ಸೇನಾನಾಯಕನ ಮುಖ ಕ್ಷೌರ ಮಾಡುತ್ತಿದ್ದರು. ಕುಪ್ಪು ನಿಧನರಾದ ಬಳಿಕ ಅವರ ಮಗ ಗಣೇಶ್‌ನನ್ನೇ ಕ್ಷೌರಕ್ಕೆ ನೆಚ್ಚಿಕೊಂಡಿದ್ದ ಕಾರ್ಯಪ್ಪ ತಾವು ಕೊನೇ ಉಸಿರು ಇರುವವರೆಗೂ ಗಣೇಶ್ ಬಳಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದರು.
ಸಮಯ ಪಾಲನೆಯಲ್ಲಿ ಕಟ್ಟುನಿಟ್ಟು: ಅಂಥ ಮಹಾನ್ ಸೇನಾನಿಯ ಬಳಿ ಹೋಗಲು ಮೊದಲು ಹೆದರಿಕೆಯಾಗುತ್ತಿತ್ತು. ಆದರೆ, ನಂತರ ಕಾರ್ಯಪ್ಪ ಅವರ ಸರಳತೆ ತುಂಬಾ ಇಷ್ಟವಾಯಿತು ಎಂದು ಸ್ಮರಿಸಿಕೊಳ್ಳುವ ಗಣೇಶ್, ಕಾರ್ಯಪ್ಪ ಅವರ ಸಮಯಪಾಲನೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂತದ್ದಾಗಿತ್ತು. ಬೆಳಗ್ಗೆ 7 ಗಂಟೆಗೆ ಸಮಯ ನೀಡುತ್ತಿದ್ದ ಕಾರ್ಯಪ್ಪ ಸರಿಯಾಗಿ 7 ಗಂಟೆಗೇ ಕ್ಷೌರಕ್ಕೆ ಬಂದು ಕುಳಿತುಕೊಳ್ಳುತ್ತಿದ್ದರು. ಒಂದು ನಿಮಿಷ ಬೇಗವೂ ಅಲ್ಲ, ಒಂದು ನಿಮಿಷ ತಡವೂ ಅಲ್ಲ, ಇಂಥ ಸಮಯಪ್ರಜ್ಞೆ ಬೇರಾವ ವ್ಯಕ್ತಿಯಲ್ಲಿಯೂ ನೋಡಿಲ್ಲ ಎನ್ನುತ್ತಾರೆ ಗಣೇಶ್.
ಕಾರ್ಯಪ್ಪ ಅವರಿಂದ ಜೀವನದಲ್ಲಿ ತಾನು ಸಮಯಪ್ರಜ್ಞೆಯೊಂದಿಗೆ, ಶಿಸ್ತು, ಛಲದ ಮನೋಭಾವ ಕಲಿತದ್ದಾಗಿ ಹೇಳುವ ಕುಪ್ಪು ಗಣೇಶ್, ಕಾರ್ಯಪ್ಪ ನಿತ್ಯ ಸ್ಮರಣೀಯರು ಎನ್ನುವ ಅವರು, ಹೀಗಾಗಿಯೇ ನನ್ನ ಅಂಗಡಿಯಲ್ಲಿ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಭಾವಚಿತ್ರವನ್ನಿರಿಸಿ ದಿನಾ ಪೂಜೆ ಸಲ್ಲಿಸಿಯೇ ದೈನಂದಿನ ಕಾಯಕ ಆರಂಭಿಸುವೆ ಎನ್ನುತ್ತಾರೆ.
ಗ್ರಾಹಕರ ಶ್ಲಾಘನೆ: ಕುಪ್ಪು ಗಣೇಶ್ ಕ್ಷೌರದಂಗಡಿಗೆ ಬರುವ ಅನೇಕ ಗ್ರಾಹಕರೂ ಸೇನಾನಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಕುಪ್ಪು ಗಣೇಶ್ ಪ್ರೀತಿಯನ್ನು ಮನಸಾರೆ ಶ್ಲಾಘಿಸಿದ್ದಾರೆ.

-ಅನಿಲ್ ಎಚ್.ಟಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments