ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಡಗು

ಕ್ರೀಡೆಯಿಂದ ಬಾಂಧವ್ಯ ವೃದ್ಧಿ: ಅಪ್ಪಚ್ಚು ರಂಜನ್

Parashurama
Updated On : 10 Mar 2013, 1:02 am

ಮಡಿಕೇರಿ: ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ  ಸಹಕಾರಿಯಾಗುವುದರ ಜತೆಗೆ ಎಲ್ಲರ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಎಂದು ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.
ಮಾದಾಪುರ ಜಂಬೂರು ಬಾಣೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಗ್ರಾಮಾಭಿವೃದ್ಧಿ ಯುವಕ ಸಂಘದ 15ನೇ ವಾರ್ಷಿಕೋತ್ಸವದ ಪ್ರಯುಕ್ತ  ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ದಿ.ಎ.ಎಂ. ಬೆಳ್ಳಿಯಪ್ಪ ಮತ್ತು ದಿ. ಕ.ಡಿ.ಸಿ. ಬಸಪ್ಪ ಸ್ಮಾರಕ 7ನೇ ವರ್ಷದ ಮುಕ್ತ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶ, ವಿದೇಶಗಳಲ್ಲಿ ಕ್ರಿಕೆಟ್, ಹಾಕಿ, ಪುಟ್ಬಾಲ್, ಅಥ್ಲೀಟ್ಸ್, ಬಾಕ್ಸಿಂಗ್ ಹೀಗೆ ನಾನಾ ಕ್ರೀಡೆಗಳು ಆಗಾಗ ನಡೆಯುತ್ತವೆ. ಇದರಿಂದ ದೇಶ- ವಿದೇಶಗಳ ವಿಶೇಷತೆಯನ್ನು ತಿಳಿದುಕೊಳ್ಳುವುದರ ಜತೆಗೆ, ಜ್ಞಾನ ವಿಕಸನಕ್ಕೆ ಅನುಕೂಲವಾಗುತ್ತದೆ. ಹಾಗೆಯೇ ಕ್ರೀಡೆಗಳಲ್ಲಿ ಹೆಚ್ಚು ಪಾಲ್ಗೊಳ್ಳಲು ಸಹಕಾರಿಯಾಗುತ್ತದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಚಿವರು ಹೇಳಿದರು.
ಸದ್ಯದಲ್ಲೇ ಕ್ರೀಡಾನೀತಿ ಜಾರಿಗೆ: ಸರ್ಕಾರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮೂಲಕ ಯುವಜನರಿಗಾಗಿ ಹಲವು ನೂತನ ಯೋಜನೆಗಳನ್ನು ಜಾರಿಗೊಳಿಸಿದೆ. ಯುವಜನರಿಗೆ ಸದಾ ಸ್ಪೂರ್ತಿಯಾದ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯುವನೀತಿ ಅನುಷ್ಠಾನಗೊಳಿಸಲಾಗಿದೆ. ಸದ್ಯದಲ್ಲೇ ಕ್ರೀಡಾನೀತಿ ಜಾರಿಗೆ ತರಲಾಗುವುದು ಎಂದ ಸಚಿವರು ಗ್ರಾಮೀಣ ಯುವಜನರು ಸರ್ಕಾರದ ನಾನಾ ಸೌಲಭ್ಯಗಳನ್ನು  ಸಮರ್ಪಕವಾಗಿ ಬಳಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವಂತಾಗಬೇಕು ಎಂದು ಸಚಿವ ಅಪ್ಪಚ್ಚು ರಂಜನ್ ಹೇಳಿದರು.
ದೇಶದ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹೆಸರಿನಲ್ಲಿ ನಾನಾ ಅಕಾಡೆಮಿಗಳು ಹಾಗೂ ಸಂಸ್ಥೆಗಳು ಇದ್ದು, ಇಂತಹ ಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸಲಹೆ ಮಾಡಿದರು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯನ್ನು 'ಯುವಜನ ಸಬಲೀಕರಣ' ಇಲಾಖೆ ಎಂದು ಹೆಸರು ಬದಲಿಸಲಾಗಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಜಿ.ಪಂ. ಸದಸ್ಯರಾದ ಟಿ.ಪಿ. ಸಂದೆಶ್ ಮಾತನಾಡಿ ಗ್ರಾಮಾಭಿವೃದ್ಧಿ ಯುವಕ ಸಂಘಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ಗ್ರಾಮಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು  ಸಲಹೆ ಮಾಡಿದರು.
ಮಾದಾಪುರದ ಸಿಂಡಿಕೆಟ ಬ್ಯಾಂಕ್ ವ್ಯವಸ್ಥಾಪಕರಾದ ಎಚ್. ಮೋಹನ್ ಮಾತನಾಡಿ ದೇಶದ ಸೇನೆಯಲ್ಲಿ ಪ್ರಥಮ ಮಹಾದಂಡ ನಾಯಕರಾಗಿ ಸೇವೆ ಸಲ್ಲಿಸಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಶಿಸ್ತು, ಶ್ರದ್ಧೆ ಮತ್ತು ರಾಷ್ಟ್ರಭಕ್ತಿ ಪ್ರತಿಯೊಬ್ಬರಿಗೂ ಮಾದರಿ ಎಂದರು.  
ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ಪ್ರೇಮ, ಉಪಾಧ್ಯಕ್ಷ ಹನೀಫ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಗ್ರಾಮಾಭಿವೃದ್ಧಿ ಯುವಕ ಸಂಘದ ಅಧ್ಯಕ್ಷ ಎನ್.ಪಿ. ಪೂಣಚ್ಚ, ಉಪಾಧ್ಯಕ್ಷ ಎಂ.ಎ. ಮಜೀದ್, ವೈದ್ಯಾಧಿಕಾರಿ ವೀರೇಂದ್ರಕುಮಾರ್, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆರ್. ರವಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಂ. ಪುಟ್ಟಣ, ಆಟೋ ಚಾಲಕರ ಸಂಘದ ಅಧ್ಯಕ್ಷ ಮನೋಜ್ ಮತ್ತಿತರರು ಇದ್ದರು. ಸಂಘದ ಕಾರ್ಯದರ್ಶಿ ಅಂಥೋನಿ ನಿರೂಪಿಸಿದರು. ಕಾರ್ಯಕ್ರಮದ ನಂತರ ಸಚಿವರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪುಟ್ಟ ಮಕ್ಕಳೊಂದಿಗೆ ಮಾತನಾಡಿದರು. ಬಳಿಕ ಕುಡಿಯುವ ನೀರು ಟ್ಯಾಂಕ್ ನಿರ್ಮಾಣ ಕಾಮಗಾರಿ ಪರಿಶೀಲನೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments