ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಡಗು

ಮಹಿಳೆ ನಡವಳಿಕೆಯಲ್ಲಿ ಸಮತೋಲನ ಅಗತ್ಯ: ನ್ಯಾ. ಹೇಮಾವತಿ

Parashurama
Updated On : 10 Mar 2013, 1:04 am

ಮಡಿಕೇರಿ: ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ಅತ್ಯಾಚಾರ, ಶೋಷಣೆಗಳನ್ನು ತಡೆಗಟ್ಟುವ ಅಗತ್ಯತೆ ಇದ್ದು, ಮಹಿಳೆ ಕೂಡ ತನ್ನ ನಡವಳಿಕೆಯಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಹೇಮಾವತಿ ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳೋದಯ ಮಹಿಳಾ ಒಕ್ಕೂಟ(ಓಡಿಪಿ)ಇವರ ಜಂಟಿ ಆಶ್ರಯದಲ್ಲಿ  ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಮತ್ತು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಮನೆ ಮತ್ತು ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಸದಾ ಎಚ್ಚರದಿಂದ ಸಮತೋಲನವನ್ನು ಕಾಯ್ದುಕೊಂಡು ವರ್ತಿಸಬೇಕು.
ಮಹಿಳೆಗೆ ಮಹಿಳೆಯೇ ವೈರಿ. ಇಂತಹ ಪ್ರಸಂಗ ಒಮ್ಮೊಮ್ಮೆ ಎದುರಾದಾಗ ಇದನ್ನು ಆದಷ್ಟು ಚಾಕಚಕ್ಯತೆಯಿಂದ ಎದುರಿಸಬೇಕೆಂದು ಸಲಹೆ ನೀಡಿದರು. ಮನೆಯಲ್ಲಿ ಮತ್ತು ಮನೆಯಿಂದ ಹೊರಗೆ ಯಾವ ರೀತಿಯ ನಡವಳಿಕೆಯಿಂದ ಇರಬೇಕು ಮತ್ತು ಹೇಗೆ ವರ್ತಿಸಬೇಕು ಎಂಬ ಬಗ್ಗೆ ಮಹಿಳೆ ಎಚ್ಚೆತ್ತುಕೊಳ್ಳಬೇಕು ಹಾಗೂ ನಡವಳಿಕೆಯಲ್ಲಿ ಸಮಾತೋಲನವನ್ನು ಇಟ್ಟುಕೊಂಡಲ್ಲಿ ಮಾತ್ರ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುವ ವಿವಿಧ ರೀತಿಯ ದೌರ್ಜನ್ಯಗಳನ್ನು ತಡೆಗಟ್ಟಬಹುದು ಎಂದು ಹೇಮಾವತಿ ತಮ್ಮ ಅನಿಸಿಕೆ  ವ್ಯಕ್ತಪಡಿಸಿದರು.
ಮಹಿಳೆಯರು ಅತಿಯಾದ ಆಸೆ ಮತ್ತು ಕೆಣಕುವ ಬುದ್ಧಿಯಿಂದ ತಮ್ಮ ಬದುಕಿಗೆ ಆಪತ್ತನ್ನು ತಂದುಕೊಳ್ಳುತ್ತಾರೆ. ಮಹಿಳಾ ದಿನಾಚರಣೆಯನ್ನು ಕೇವಲ ಮಹಿಳೆಯರೇ ಆಚರಿಸಿಕೊಳ್ಳುವ ಬದಲು ಪುರುಷರನ್ನು ಸೇರಿಸಿಕೊಳ್ಳುವ ಮೂಲಕ ಪರಸ್ಪರ ಚರ್ಚೆ ನಡೆಸುವ ಮೂಲಕ ಸಮಾಜದಲ್ಲಿ ಸಮಾನತೆಯ ಪರಿಕಲ್ಪನೆ ಮೂಡುತ್ತದೆಂದು ಹೇಮಾವತಿ ಅನಿಸಿಕೆ ವ್ಯಕ್ತಪಡಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಮಹಿಳೆಯರಲ್ಲಿ ತಲೆದೋರುವ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಬಹುದೆಂದು ಅವರು ಸಲಹೆ ನೀಡಿದರು.
ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೀತಾಲಕ್ಷ್ಮಿ ರಾಮಚಂದ್ರ ಮಾತನಾಡಿ, ವರ್ಷದ ಮುನ್ನೂರ ಅರವತ್ತೈದು ದಿನವೂ ಮಹಿಳೆಯರದ್ದೇ ಆಗಿದ್ದು, ಅದರಲ್ಲಿ ಒಂದು ದಿನವನ್ನು ನಾವಿಂದು ಮಹಿಳಾ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ. ಮಹಿಳೆಯರು ಸಮಾಜಕ್ಕೆ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ತೊಡಗುವ ಸಂಘ ಸಂಸ್ಥೆಗಳಿಗೆ ನೀಡುವ ಪ್ರಾಶಸ್ತ್ಯವನ್ನು ಮನೆ ಮಂದಿಗೂ ನೀಡಬೇಕೆಂದು ಕರೆ ನೀಡಿದರು. ಮಹಿಳೆಯರು ತಮ್ಮ ಮಕ್ಕಳಿಗೆ ಪೂಜ್ಯ ಭಾವನೆಯನ್ನು ಮೂಡಿಸಬೇಕು. ಇದರೊಂದಿಗೆ ದೈವತ್ವದ ಭಾವನೆಯು ಇರಬೇಕು. ಆಗ ಯಾರ ಮನಸ್ಸಿನಲ್ಲಿ ಕೆಟ್ಟ ಹಾಗೂ ದುಶ್ಚಟದ ಭಾವನೆಗಳು ಮೂಡುವುದಿಲ್ಲವೆಂದ ಅವರು, ಭ್ರಷ್ಟಾಚಾರದ ನಿರ್ಮೂಲನೆಯನ್ನು ಮೊಟ್ಟಮೊದಲಾಗಿ ತಮ್ಮ ಮನೆಗಳಿಂದ ಆರಂಭಿಸಬೇಕೆಂದು  ಸೀತಾಲಕ್ಷ್ಮಿ ರಾಮಚಂದ್ರ ಅನಿಸಿಕೆ ವ್ಯಕ್ತಪಡಿಸಿದರು.
ಮಡಿಕೇರಿ ಸಂತ ಮೈಕೆಲರ ಚರ್ಚ್‌ನ ಫಾದರ್ ಪ್ರಶಂತ್ ಮಾತನಾಡಿ, ದೇವರು ಎಲ್ಲರನ್ನು ಸಮಾನರನ್ನಾಗಿ ಸೃಷ್ಟಿಸಿದ್ದಾರೆ. ಅದರಲ್ಲೂ ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯಗಳನ್ನು ಧೈರ್ಯದಿಂದ ಎದುರಿಸಬೇಕು. ತಮ್ಮ ದೈನಂದಿನ ಜೀವನವನ್ನು ಛಲ ಹಾಗೂ ಸ್ಪರ್ಧಾತ್ಮಕವಾಗಿ ಎದುರಿಸಬೇಕೆಂದು ಕರೆ ನೀಡಿದರು.
ವಕೀಲೆ ಕೆ.ಡಿ. ಅಮೃತ ಕುಮಾರಿ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ನಿರಂತರವಾಗಿ ನಡೆಯುತ್ತಿರುವುದು ಖಂಡನೀಯ.
ಇದನ್ನು ಮಹಿಳೆಯರೇ ಧೈರ್ಯದಿಂದ ಎದುರಿಸಲು ಪಣ ತೊಡಬೇಕೆಂದು ಕರೆ ನೀಡಿದರಲ್ಲದೇ, ಕೆಲ ಪೋಷಕರ ಅಸಡ್ಡೆಯಿಂದ ಹೆಣ್ಣು ಮಕ್ಕಳು ಜೀವನದ ಅಂತ್ಯದವರೆಗೆ ಅನಾಥವಾಗಿ ಬೆಳೆಯುತ್ತಿರುವುದನ್ನು ನಾವು ಅಲ್ಲಲ್ಲಿ ಕಾಣುತ್ತೇವೆ. ಇವುಗಳ ಮಧ್ಯೆ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಸಾಮಾಜಿಕ ದೌರ್ಜನ್ಯ ಇತ್ಯಾದಿಗಳನ್ನು ಕಾಣುತ್ತಿದ್ದೇವೆ. ಇತ್ತೀಚೆಗೆ ದೇಶದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಮರ್ಯಾದಾ ಹತ್ಯೆ ಕರ್ನಾಟಕಕ್ಕೂ ಕಾಲಿಟ್ಟಿರುವುದು ಶೋಚನೀಯ ಎಂದರು.
ಸಮಾರಂಭದಲ್ಲಿ ಪತ್ರಕರ್ತೆ ಸವಿತಾ ರೈ, ಜಿಲ್ಲಾ ಮಹಿಳೋದಯ ಮಹಿಳಾ ಒಕ್ಕೂಟದ ಸಂಯೋಜಕಿ ಜಾಯ್ ಮೆನೇಜಸ್, ಮೈಸೂರು ಒಡಿಪಿಯ ತರಬೇತಿ ಸಂಯೋಜಕಿ ಮೋಲಿ, ನಗರಸಭಾ ಉಪಾಧ್ಯಕ್ಷೆ ವಸಂತ ಕೇಶವ  ಮತ್ತಿತರರು ಮಾತನಾಡಿದರು.
ಲೀನಾ ಲೋಬೋ ಸ್ವಾಗತಿಸಿದರು. ನ್ಯಾಯಾಲಯದ ಸಿಬ್ಬಂದಿ ಜಯಪ್ಪ ನಿರೂಪಿಸಿದರು. ವಿಜಯ ನಾರಾಯಣ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments