ಸಂಪಾಜೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ
ಮಡಿಕೇರಿ: ಸಂಪಾಜೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಧಾರಾಕಾರ ಮಳೆಯಾಗಿದ್ದು, ಕೃಷಿ ಫಸಲಿಗೆ ಭಾರಿ ಹಾನಿಯಾಗಿದೆ. ಗುಡುಗು ಸಿಡಿಲಿನೊಂದಿಗೆ ಶನಿವಾರ ಸಂಜೆ 1 ಗಂಟೆಗಳ ಕಾಲ ಧಾರಾಕಾರ ಮಳೆ ಬಿದ್ದಿದ್ದು, ಮಳೆಯಿಂದಾಗಿ ಗೇರು ಬೀಜ ಮತ್ತು ಅಡಕೆ ಫಸಲಿಗೆ ತೀವ್ರ ಹಾನಿಯಾಗಿದೆ. ರಬ್ಬರ್ ಕೃಷಿಗೆ ಅಗತ್ಯವಿದ್ದ ಮಳೆ ಉಳಿದ ಕೃಷಿ ಫಸಲಿಗೆ ಹಾನಿಯುಂಟು ಮಾಡಿದೆ. ಮಡಿಕೇರಿಯಲ್ಲಿ ಕೆಲಕಾಲ ತುಂತುರು ಮಳೆ ಬಿದ್ದಿದೆ.
ಸುಳ್ಯ ಸುತ್ತಮುತ್ತಗುಡುಗುಸಹಿತ ಮಳೆ
ಸುಳ್ಯ: ಸುಳ್ಯ ಹಾಗೂ ತಾಲೂಕಿನ ಅನೇಕ ಕಡೆ ಶನಿವಾರ ಸಂಜೆ ಸುಮಾರು 1 ಗಂಟೆ ಕಾಲ, ಗಾಳಿ, ಗುಡುಗು, ಸಿಡಿಲು ಸಹಿತ ಮಳೆ ಸುರಿದಿದೆ. ಎಡೆಬಿಡದೆ ಸುರಿದ ಮಳೆಗೆ ಪಟ್ಟಣದ ಹಲವೆಡೆ ಜಲಾವೃತಗೊಂಡಿವೆ. ಸಾವಿರಾರು ಅಡಕೆ ಮರ ಹಾಗೂ ಬಾಳೆ ಗಿಡಗಳು ಉರುಳಿವೆ.
ನಾಳೆ ಮತ ಎಣಿಕೆ- ಪೂರ್ವಭಾವಿ ಸಭೆ
ಕುಶಾಲನಗರ: ಪ. ಪಂ. ಚುನಾವಣೆ- 2013 ರ ಮತ ಎಣಿಕೆ ಕುರಿತ ಪೂರ್ವಭಾವಿ ಸಭೆ ಶನಿವಾರ ನಡೆಯಿತು. ಕುಶಾಲನಗರ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚುನಾವಣಾಧಿಕಾರಿ ಎಂ. ಶಿವರಾಜ್ ಹಲವು ಸಲಹೆ ಸೂಚನೆಗಳನ್ನು ಪಕ್ಷದ ಅಭ್ಯರ್ಥಿಗಳಿಗೆ ನೀಡಿದರು. ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಸೋಮವಾರಪೇಟೆ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ 11ರಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. 13 ವಾರ್ಡ್ಗಳಲ್ಲಿ 80 ಮಂದಿ ಕಣದಲ್ಲಿದ್ದು, ಸೋಮವಾರ ಫಲಿತಾಂಶ ಹೊರಬೀಳಲಿದೆ. ಮತ ಎಣಿಕೆ ಕೇಂದ್ರದೊಳಗೆ ಅಭ್ಯರ್ಥಿ, ಚುನಾವಣಾ ಏಜೆಂಟ್, ಎಣಿಕೆ ಏಜೆಂಟ್ರ ಪೈಕಿ ಒಬ್ಬರಿಗೆ ಮಾತ್ರ ಪ್ರವೇಶವಿರುತ್ತದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಗರಗಂದೂರಲ್ಲಿ ಶಿವರಾತ್ರಿ
ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ಗರಗಂದೂರು ಮಲ್ಲಿಕಾರ್ಜುನ ಮತ್ತು ಚಾಮುಂಡೇಶ್ವರಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ. ದಿನದ ಅಂಗವಾಗಿ ಸಾಂಸ್ಕೃತಿಕ ಸ್ಪರ್ಧೆ, ಸೈಕಲ್ ಸರ್ಕಸ್ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.