ಸರ್ಕಾರೇತರ ಸಂಸ್ಥೆಯಿಂದ ಕೊಡಗಿನಲ್ಲಿ ಕಾಫಿ ಬೆಳೆಯದಂತೆ ಅಪಪ್ರಚಾರ: ಸುಬ್ಬಯ್ಯ ಆರೋಪ
ಮಡಿಕೇರಿ: ಕೊಡಗಿನಲ್ಲಿ ಹವಾಮಾನ ವೈಪರೀತ್ಯಕ್ಕೆ ಕಾಫಿಯೇ ಕಾರಣವಾಗಿದ್ದು ಹೀಗಾಗಿ ಕೊಡಗಿನಲ್ಲಿ ಕಾಫಿ ಬೆಳೆಯದಿರಿ ಎಂಬ ತಪ್ಪು ಸಂದೇಶವನ್ನು ಸರ್ಕಾರೇತರ ಸಂಸ್ಥೆಯೊಂದು ಪ್ರಚಾರ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯ, ಕೊಡಗಿನ ಕೃಷಿಕರಿಗೆ ಮಾರಕವಾಗುವ ಇಂಥ ಪ್ರಚಾರದ ಹಿಂದೆ ಅಂತಾರಾಷ್ಟ್ರೀಯ ಪಿತೂರಿಯಿದೆ ಎಂದು ದೂರಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ.ಕೆ. ಸುಬ್ಬಯ್ಯ, ಕಾಫಿ ಬೆಳೆಯಿಂದಾಗಿ ಕೊಡಗಿನಲ್ಲಿ ಪರಿಸರದ ಮೇಲೆ ಮಾರಕ ಪರಿಣಾಮ ಉಂಟಾಗುತ್ತಿದೆ ಎಂಬ ಸುದ್ದಿ ಹಬ್ಬಿಸುವ ಮೂಲಕ ಅಂತಾರಾಷ್ಟ್ರೀಯ ಪಿತೂರಿ ನಡೆಯುತ್ತಿದೆ ಎಂದು ಪರಿಸರವಾದಿಗಳ ವಿರುದ್ಧ ಕಿಡಿಕಾರಿದರು. ಫ್ರಾನ್ಸ್ ಮೂಲದ ಸರ್ಕಾರೇತರ ಸಂಸ್ಥೆಯೊಂದು ಬೆಂಗಳೂರು ಕೃಷಿ ವಿ.ವಿ.ಯ ವಿದ್ಯಾರ್ಥಿ ವಿನಿಮಯ ಯೋಜನೆಯಡಿ ಹಮ್ಮಿಕೊಂಡಿರುವ ಯೋಜನೆ ಮೂಲಕ ಕೊಡಗಿನಲ್ಲಿ 20 ವರ್ಷಗಳಿಂದ ಕಾಫಿಯಿಂದಾಗಿಯೇ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ ಎಂಬ ತಪ್ಪು ಸಂದೇಶ ರವಾನಿಸುತ್ತಿದೆ. ಪೊನ್ನಂಪೇಟೆಯಲ್ಲಿನ ಅರಣ್ಯ ಮಹಾವಿದ್ಯಾಲಯವೂ ಇಂಥ ವರದಿಗಳ ಕೇಂದ್ರ ಸ್ಥಾನವಾಗಿದ್ದು, ಕೊಡಗಿನಲ್ಲಿ ಪರಿಸರ ಬದಲಾವಣೆಯಾಗುತ್ತಿರಲು ಇಲ್ಲಿನ ಕಾಫಿ ತೋಟಗಳೇ ಕಾರಣ, ಹೀಗಾಗಿ ಕಾಫಿಯ ಉತ್ಪಾದನೆ ಕಡಮೆಗೊಳಿಸಬೇಕು ಎಂಬ ಸಂದೇಶವನ್ನು ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿದರು.
ಪೊನ್ನಂಪೇಟೆ ಅರಣ್ಯ ಕಾಲೇಜು ಮುಚ್ಚಲು ಒತ್ತಾಯ: ಕಾಫಿ ತೋಟದಿಂದಲೇ ಕೊಡಗಿನಲ್ಲಿ ಮನಮೋಹಕ ಪರಿಸರ ಸಂರಕ್ಷಣೆಯಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ ಸುಬ್ಬಯ್ಯ, ರೈತವಿರೋಧಿ ಕೇಂದ್ರದಂತೆ ಕಾರ್ಯಾಚರಿಸುತ್ತಿರುವ ಪೊನ್ನಂಪೇಟೆ ಅರಣ್ಯ ಕಾಲೇಜನ್ನು ಮುಚ್ಚಿ ಕೊಡಗಿನ ಕೃಷಿಕರಿಗೆ ಉಪಕಾರ ಮಾಡಬೇಕೆಂದು ಒತ್ತಾಯಿಸಿದರು. ಪಿತೂರಿಕೋರ ಏಜಂಟರು ಕೊಡಗಿನ ಬೆಳೆಗಾರರ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ ಎಂದೂ ಆರೋಪಿಸಿದ ಸುಬ್ಬಯ್ಯ, ಒಂದೆಡೆ ಕೇಂದ್ರ ಸರ್ಕಾರ ಕಾಫಿ ಮಂಡಳಿ ಮೂಲಕ ಕಾಫಿ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡುತ್ತಿರುವಾಗ ಮತ್ತೊಂದೆಡೆ ಸರ್ಕಾರೇತರ ಸಂಸ್ಥೆಯೊಂದು ಕಾಫಿ ಬೆಳೆಯದಿರಿ ಎನ್ನುತ್ತಿರುವುದು ಅಂತಾರಾಷ್ಟ್ರೀಯ ಪಿತೂರಿಯ ಒಂದು ಭಾಗವಾಗಿದ್ದು ಕಾಫಿಯನ್ನೇ ನಿರ್ನಾಮ ಮಾಡುವ ಹುನ್ನಾರವಿದಾಗಿದೆ ಎಂದು ಸುಬ್ಬಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಪಶ್ಚಿಮಘಟ್ಟ ಶ್ರೇಣಿ ವ್ಯಾಪ್ತಿಯಲ್ಲಿ ವಿದ್ಯುತ್, ರಸ್ತೆ, ನೀರು, ರೈಲು ಸೇರಿದಂತೆ ಜನತೆಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸುವುದರೊಂದಿಗೆ ಪರಿಸರವನ್ನೂ ಕಾಪಾಡುವ ಅತ್ಯಗತ್ಯೆಯಿದೆ ಎಂದೂ ಸುಬ್ಬಯ್ಯ ಪ್ರತಿಪಾದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.