ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಡಗು

ಚುನಾವಣೆ ಮತಗಟ್ಟೆ ಚಿತ್ರೀಕರಣ: ವಿಡಿಯೋಗ್ರಾಫರ್‌ಗೆ ಸುಗ್ಗಿ

Parashurama
Updated On : 23 Mar 2013, 10:46 am

ಕ.ಪ್ರ. ವಾರ್ತೆ ಮಡಿಕೇರಿಮಾ.23
ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಮತಗಟ್ಟೆಗಳಲ್ಲಿಯೂ ವಿಡಿಯೋ ಚಿತ್ರೀಕರಣ ಮಾಡುವಂತೆ ಚುನಾವಣಾ ಆಯೋಗ ಹೊರಡಿಸಿರುವ ಆದೇಶದಿಂದಾಗಿ ವೀಡಿಯೋಗ್ರಾಫರ್‌ಗಳಿಗೆ ದಿಢೀರ್ ಬೇಡಿಕೆ ಬರುವಂತೆ ಮಾಡಿದೆ. ಆದರೆ ಬೇಡಿಕೆಗೆ ತಕ್ಕಂತೆ ವಿಡಿಯೋ ಕ್ಯಾಮೆರಾಗಳು ದೊರಕುವುದು ಸಂಶಯ ಮೂಡಿಸಿದೆ.
ಸಾಮಾನ್ಯವಾಗಿ ಈವರೆಗಿನ ಚುನಾವಣೆಗಳಲ್ಲಿ ಅತೀ ಸೂಕ್ಷ್ಮ, ಸೂಕ್ಷ್ಮ ಮತಗಟ್ಟೆಗಳಲ್ಲಿ ಮಾತ್ರ ಮತದಾನದದಂದು ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲ ಮತಗಟ್ಟೆಗಳಲ್ಲಿಯೂ ವಿಡಿಯೋ ಚಿತ್ರೀಕರಣಕ್ಕೆ ಚುನಾವಣಾ ಆಯೋಗ ಆದೇಶಿಸಿರುವುದರಿಂದಾಗಿ ರಾಜ್ಯದ 50,446 ಮತಗಟ್ಟೆಗಳಲ್ಲಿಯೂ ಇಷ್ಟೇ ಸಂಖ್ಯೆಯ ವಿಡಿಯೋಗ್ರಾಫರ್‌ಗಳ ಅಗತ್ಯವಿದೆ.
50,446 ಮಂದಿ ಬೇಕಿದೆ: ಇಷ್ಟೊಂದು ವಿಡಿಯೋಗ್ರಾಫರ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸುವುದು ಆಯಾ ಜಿಲ್ಲೆಯ ಜಿಲ್ಲಾಡಳಿತಕ್ಕೆ ಸಮಸ್ಯೆಯಾಗಲಿದೆ. ಈವರೆಗೂ ಮತದಾನ ಹಂತಹಂತವಾಗಿ ಬೇರೆ ಬೇರೆ ದಿನಾಂಕಗಳಂದು ನಡೆಯುತ್ತಿದ್ದರಿಂದಾಗಿ ಬೇರೆ ಜಿಲ್ಲೆಗಳಲ್ಲಿ ಮತದಾನ ಮುಗಿದ ಬಳಿಕ ಆ ವಿಡಿಯೋಗ್ರಾಫರ್‌ಗಳನ್ನು ಮತ್ತೊಂದು ಜಿಲ್ಲೆಗೆ ನೂರಾರು ಸಂಖ್ಯೆಯಲ್ಲಿ ನಿಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಒಂದೇ ದಿನ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಏಕಕಾಲಕ್ಕೆ 50,446 ಮಂದಿ ವಿಡಿಯೋಗ್ರಾಫರ್‌ಗಳ ಅಗತ್ಯತೆ ಕಂಡುಬಂದಿದೆ. ಹೊರ ರಾಜ್ಯದಿಂದ ಡಿಯೋಗ್ರಾಫರ್‌ಗಳನ್ನು ಕರೆಸಿದರೂ ಅವರಿಗೆ ದುಬಾರಿ ಹಣ ನೀಡಬೇಕಾದ ಹಿನ್ನಲೆಯಲ್ಲಿ ಇದೂ ಕೈಗೂಡುತ್ತಿಲ್ಲ.
ಬೇಡಿಕೆ ಇದ್ದರೂ ಹಿಂದೇಟು: ವಿಡಿಯೋಗ್ರಾಫರ್‌ಗಳಿಗೆ ಈ ಮೂಲಕ ಭಾರಿ ಬೇಡಿಕೆ ಬಂದಿದೆಯಾದರೂ ವೀಡಿಯೋಗ್ರಾಫರ್‌ಗಳೇನೂ ಖುಷಿಯಾಗಿಲ್ಲ. ಯಾಕೆಂದರೆ ಮೇ ತಿಂಗಳಲ್ಲಂತೂ ಒಂದಿಲ್ಲೊಂದು ವಿವಾಹ ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಮತದಾನದ ವೀಡಿಯೋ ಚಿತ್ರೀಕರಣ ಮಾಡುವುದಕ್ಕಿಂತೂ ವಿವಾಹ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ ಮಾಡುವುದೇ ಅವರಿಗೆ ಹೆಚ್ಚು ಲಾಭದಾಯಕ. ಹಾಗಾಗಿ ವಿಡಿಯೋ ಗ್ರಾಫರ್‌ಗಳು ಮತದಾನದ ಚಿತ್ರೀತರಣಕ್ಕೆ ಹಿಂದೇಟು ಹಾಕುವ ಸಾಧ್ಯತೆಯೇ ಹೆಚ್ಚು.
 ಚುನಾವಣಾ ದಿನದ ವೀಡಿಯೋ ಚಿತ್ರೀಕರಣ ಮಾಡಿದರೆ ಜಿಲ್ಲಾಡಳಿತ ಇದಕ್ಕಾಗಿ ಹೆಚ್ಚೆಂದರೆ 1000 ದಿಂದ 1500  ವರೆಗೆ ನೀಡುತ್ತದೆ. ಮತದಾನದ ವಿಡಿಯೋ ಚಿತ್ರೀಕರಣಕ್ಕೆ ದೂರದ ಮತಗಟ್ಟೆಗಳಿಗೆ ವಿಡಿಯೋ ಗ್ರಾಫರ್‌ಗಳು ಹಿಂದಿನ ದಿನವೇ ತೆರಳಬೇಕು. ವಿಡಿಯೋ ಚಿತ್ರೀಕರಣ ಕೆಲಸ ಒಂದೇ ದಿನವಾದರೂ ಈ ಕೆಲಕ್ಕಾಗಿ 2 ದಿನ ವಿನಿಯೋಗಿಸಲೇಬೇಕಾದ ಅನಿವಾರ್ಯತೆ ಅವರಿಗಿರುತ್ತದೆ. ಇದಕ್ಕೆ ಸಿಗುವ ಹಣವೂ ಕಡಿಮೆ. ಅದೇ ವಿವಾಹ ಸಮಾರಂಭಗಳಿಗೆ ಹೋದರೆ ಅಲ್ಲಿ ಕಡಿಮೆ ಎಂದರೂ 4ರಿಂದ 5 ಸಾವಿರವರೆಗೆ ಸಿಗುತ್ತದೆ. ಹಾಗಾಗಿ ತಮಗೆ ಭಾರಿ ಬೇಡಿಕೆ ಇದ್ದರೂ ವಿಡಿಯೋಗ್ರಾಫರ್‌ಗಳು ಚುನಾವಣಾ ಆಯೋಗದ ಈ ಆದೇಶದಿಂದೇನೂ ಖುಷಿಯಾಗಿಲ್ಲ.
ಚುನಾವಣೆ ಬೇಸಿಗೆಯಲ್ಲಿ ನಡೆಯದೆ ಮಳೆಗಾಲ ಅಥವಾ ಆಷಾಢ ಮಾಸದಲ್ಲಿ ಬಂದಿದ್ದರೆ ಲಾಭವಿತ್ತು. ಆ ಸಮಯದಲ್ಲಿ ಅಷ್ಟೇನೂ ಶುಭ ಸಮಾರಂಭಗಳು ನಡೆಯದೆ ಇರುವುದರಿಂದ ಲಾಭ ಮಾಡಿಕೊಳ್ಳಬಹುದಿತ್ತು. ಆದರೆ ಮೇ ಮೊದಲ ವಾರದಲ್ಲೇ ಚುನಾವಣೆ ಬಂದಿರುವುದರಿಂದ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ ಎಂದು ವಿಡಿಯೋಗ್ರಾಫರ್‌ಗಳು ಭಾರಿ ನಿರಾಸೆಗೊಳಗಾಗಿದ್ದಾರೆ.
-ಅನಿಲ್ ಎಚ್.ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments