ಅಕ್ರಮ ಗಣಿಗಾರಿಕೆ ಅಡ್ಡೆಗೆ ದಾಳಿ
ಚಿಕ್ಕಬಳ್ಳಾಪುರ: ಕಳೆದ ಎರಡ್ಮೂರು ದಿನಗಳಿಂದ ಕ್ಯಾಟ್‌ಫಿಶ್ ಸಾಕಾಣಿಕೆಯ ಹೊಂಡಗಳ ಮೇಲೆ ದಾಳಿ ನಡೆಸುತ್ತಿರುವ ತಾಲೂಕು ಆಡಳಿತ ಗುರುವಾರ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಕೇಂದ್ರದ ಮೇಲೆ ದಾಳಿ ನಡೆಸಿದೆ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ಸುತ್ತಮುತ್ತಲು ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ದೂರುಗಳು ವ್ಯಾಪಕವಾಗಿ ಕೇಳಿ ಬಂದಿದ್ದು ಈ ನಡುವೆ ಗುರುವಾರ ತಹಸೀಲ್ದಾರ್ ನಟೇಶ್ ನೇತೃತ್ವದ ಅಧಿಕಾರಿಗಳ ತಂಡ ತಾಲೂಕಿನ ಗುವ್ವಲಕಾನಹಳ್ಳಿಯಲ್ಲಿ ಅಕ್ರಮವಾಗಿ ಗಣಿಗಾರಿಕೆಯನ್ನು ನಡೆಸುತ್ತಿದ್ದ ಕೇಂದ್ರದ ಮೇಲೆ ದಾಳಿ ನಡೆಸಿತು. ಅಕ್ರಮ ಗಣಿಗಾರಿಕೆಗೆ ಬಳಸುತ್ತಿದ್ದ 2 ಲಾರಿ ಮತ್ತು 2 ಕ್ರೇನ್‌ಗಳನ್ನು ವಶಪಡಿಸಿಕೊಂಡು ಇದೀಗ ಮಾಲೀಕ ನಾರಾಯಣಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.
ರಸ್ತೆ ಅಗಲೀಕರಣಕ್ಕೆ ಕ್ರಮ ಜರುಗಿಸಲು ಒತ್ತಾಯ
ಶ್ರೀನಿವಾಸಪುರ: ಪಟ್ಟಣದ ಎಂ.ಜಿ. ರಸ್ತೆ ಅಗಲೀಕರಣಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿ, 2-3 ವರ್ಷಗಳಾಗಿವೆ. ಆದೆರ, ಯೋಜನೆ ಕೈಗೆತ್ತುಕೊಳ್ಳದೆ ಇರುವುದರಿಂದ ಪಟ್ಟಣದಲ್ಲಿ ನಾಗರೀಕರು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಎಂ.ಜಿ. ರಸ್ತೆಯಲ್ಲಿ ಬಸ್ ನಿಲ್ದಾಣದಿಂದ ಹಿಡಿದು ಸಂಗೀತ ಚಿತ್ರಮಂದಿರವರೆಗೂ ಕಿರಿದಾದ ರಸ್ತೆ ಕಿರಿಕಿರಿಯಾಗಿದೆ. ದಟ್ಟ ಜನಸಂದಣಿ ಮತ್ತು ವಾಹನಗಳ ಸಂಚಾರದಿಂದ ಸಕಾಲಕ್ಕೆ ಸ್ಥಳಗಳಿಗೆ ತೆರಳಲು ಅಸಾಧ್ಯವಾಗುತ್ತಿದೆ. ಎಂ.ಜಿ. ರಸ್ತೆಯಲ್ಲಿ ತಳ್ಳುವ ಗಾಡಿಗಳ ವ್ಯಾಪಾರಸ್ಥರ ಕಾಟ ಜಾಸ್ತಿಯಾಗಿದೆ. ಚಿಲ್ಲರೆ ಅಂಗಡಿಗಳ ಮುಂದೆ ಇರುವ ಪುಟ್‌ಪಾತ್‌ಗಳನ್ನು ಅಂಗಡಿಗಳವರು ಅತಿಕ್ರಮಿಸಿದ್ದಾರೆ. ವ್ಯಾಪಾರಕ್ಕೆ ಸಂಬಂಧಿಸಿದ ವಸ್ತುಗಳ ಗಂಟುಮೂಟೆಗಳಿಂದ ಸಂಚಾರ ಹಾಗೂ ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗಿದೆ. ವಯೋವೃದ್ಧರು, ಶಾಲಾ ಮಕ್ಕಳು ಸುಗಮವಾಗಿ ಸಂಚರಿಸಲಾಗದೆ ಪರಿತಪಿಸುತ್ತಾರೆ. ಪ್ರಸ್ತುತದ ಪರಿಸ್ಥಿತಿ ಅರಿತು ಸುಪ್ರೀಂ ಕೋರ್ಟ್ ಆದೇಶದಂತೆ ಎಂ.ಜಿ. ರಸ್ತೆಯನ್ನು ಅಗಲೀಕರಣಗೊಳಿಸಬೇಕಿದೆ. ಇದರಿಂದ ಪಟ್ಟಣ ಅಭಿವೃದ್ಧಿಯೂ ಆಗಲಿದೆ ನಾಗರಿಕರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ನಾಳೆ ನೇತ್ರ, ದಂತ ತಪಾಸಣಾ ಶಿಬಿರ
ಚಿಕ್ಕಬಳ್ಳಾಪುರ: ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆ.3 ರಂದು ಬೆಳಿಗ್ಗೆ 9 ಗಂಟೆಗೆ ಉಚಿತ ನೇತ್ರ ಹಾಗೂ ದಂತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಒಕ್ಕಲಿಗರ ಸಂಘ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿರುವ ಉಚಿತ ನೇತ್ರ ಹಾಗೂ ದಂತ ತಪಾಸಣಾ ಶಿಬಿರದಲ್ಲಿ ನುರಿತ ವೈದ್ಯರು ತಪಾಸಣೆ ನಡೆಸಲಿದ್ದಾರೆ. ಸಾರ್ವಜನಿಕರು ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಆರ್. ನಾರಾಯಣಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತೆ ಸರಗಳ್ಳತನ
ಕೋಲಾರ: ನಗರದ ಸಿ.ಬೈರೇಗೌಡ ಬಡಾವಣೆಯಲ್ಲಿನ ಪಾರ್ಕಿನಲ್ಲಿ ವಾಯು ವಿಹಾರದಲ್ಲಿ ನಿರತರಾಗಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳ್ಳನೊಬ್ಬ ದೋಚಿರುವ ಘಟನೆ ಆ.1ರಂದು ಗುರುವಾರ ಬೆಳಿಗ್ಗೆ ನಡೆದಿದೆ. ಸಿ. ಬೈರೇಗೌಡ ಬಡಾವಣೆಯ ನಿವಾಸಿ ವಸಂತ ಎಂಬುವರು ಬೆಳಿಗ್ಗೆ 6.30ರ ಸಮಯದಲ್ಲಿ ವಾಯು ವಿಹಾರಕ್ಕಾಗಿ ಪಾರ್ಕಿಗೆ ಬಂದಿದ್ದಾಗ ಕಳ್ಳನು ಮಹಿಳೆಯ ಕತ್ತಿನಲ್ಲಿದ್ದ ಸುಮಾರು 1.30 ಲಕ್ಷ ರು. ಬೆಲೆಯ 65 ಗ್ರಾಂ ತೂಕದ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದು ಈ ಸಂಬಂಧ ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.