ಕ್ರೀಡಾ ಇಲಾಖೆ ಕಾರ್ಯವೈಖರಿಗೆ ಸಚಿವರ ಗರಂ
ಕ.ಪ್ರ.ವಾರ್ತೆ ಕೋಲಾರ ಆ.1
'ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಅಧಿಕಾರಿಗಳು ಸರ್ಕಾರದ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು, ಕ್ರೀಡಾ ಇಲಾಖೆಗೆ ಸರ್ಕಾರದಿಂದ ಸಾಕಷ್ಟು ಅನುದಾನ ಸಿಗುತ್ತದೆ, ಅಭಿವೃದ್ಧಿ ಕೆಲಸಗಳನ್ನು ಮಾಡುವುದಕ್ಕೆ ಏನು ಕಷ್ಟ...'
ಹೀಗೆ ಕೋಲಾರ ಕ್ರೀಡಾಧಿಕಾರಿ ರುದ್ರಪ್ಪನವರನ್ನು ತರಾಟೆಗೆ ತೆಗೆದುಕೊಂಡವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಯು.ಟಿ.ಖಾದರ್ ಅವರು. ಕ್ಷೀರ ಭಾಗ್ಯ ಉದ್ಘಾಟನೆಯ ನಂತರ ಜಿಲ್ಲಾ ಸರ್.ಎಂ.ವಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಸಚಿವರಿಗೆ ಕ್ರೀಡಾಪಟುಗಳು, ಜಿ.ಪಂ ಅಧ್ಯಕ್ಷೆ ಚೌಡೇಶ್ವರಿ ಹಾಗೂ ಕಾಂಗ್ರೆಸ್ ಮುಖಂಡ ಜಯದೇವ್ ಸೇರಿದಂತೆ ಅನೇಕರು ಕ್ರೀಡಾ ಇಲಾಖೆಯ ಕಾರ್ಯವೈಖರಿ ಬಗ್ಗೆ ದೂರುಗಳು ನೀಡಿದರು.
ಕ್ರೀಡಾ ಇಲಾಖೆಯಿಂದ ವಿಶೇಷ ಘಟಕ ಯೋಜನೆಯ ಸವಲತ್ತುಗಳು ಫಲಾನುಭವಿಗಳಿಗೆ ಸಿಗುತ್ತಿಲ್ಲ, ಕ್ರೀಡಾ ವಸತಿ ಶಾಲೆಯಲ್ಲಿ ಮಕ್ಕಳೇ ಇಲ್ಲ, ಅಂತಾರಾಷ್ಟ್ರೀಯ ಹಿರಿಯ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲವೆಂದು ದೂರಿದಾಗ ಸಿಡಿಮಿಡಿಗೊಂಡ ಸಚಿವರು, ಇಲಾಖೆಯಲ್ಲಿನ ಅವ್ಯವಸ್ಥೆ ಸರಿಪಡಿಸದಿದ್ದರೆ ಕ್ರಮ ಜರುಗಿಸುತ್ತೇನೆಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ಹಿರಿಯ ಕ್ರೀಡಾಪಟು ಗೌಸ್ ಖಾನ್ ಎಂಬುವರು, ತಾವು ನಾಳೆ ಹಿರಿಯರ ಕ್ರೀಡಾಕೂಟಕ್ಕಾಗಿ ಶ್ರೀಲಂಕಾಗೆ ಹೋಗಬೇಕಾಗಿದೆ, ಆರ್ಥಿಕ ಸಹಾಯ ಕೋರಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲವೆಂದು ದೂರಿದರು. ಇದಕ್ಕೆ ಪ್ರತಿಕ್ರಿಯಿದ ಕ್ರೀಡಾಧಿಕಾರಿ ತಾವು ಗೌಸ್ ಖಾನ್ ಅವರ ಅರ್ಜಿಯನ್ನು ಜಿ.ಪಂ.ಗೆ ಕಳುಹಿಸಿದ್ದೇನೆ, ಕ್ರೀಡಾ ಇಲಾಖೆಯಲ್ಲಿ ಖಾಸಗಿಯಾಗಿ ಕ್ರೀಡಾಕೂಟಕ್ಕೆ ಹೋಗುವವರಿಗೆ ಆರ್ಥಿಕ ನೆರವು ನೀಡಲು ಅವಕಾಶವಿಲ್ಲವೆಂದಾಗ, ಮಧ್ಯ ಪ್ರವೇಶಿಸಿದ ಜಿ.ಪಂ ಸಿಇಒ ಝಲ್ಫಿಖಾರ್ ಉಲ್ಲಾ, ನಿಮ್ಮ ಅರ್ಜಿಯನ್ನು ಸ್ವೀಕರಿಸಿ ಕ್ರಮ ಜರುಗಿಸಲಾಗಿದೆ. ಕ್ರೀಡಾಕೂಟದಿಂದ ವಾಪಸ್ ಬಂದ ನಂತರವೂ ಹಣ ಪಡೆಯಬಹುದೆಂದು ತಿಳಿಸಿದರು.