ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕ್ಷೀರ ಭಾಗ್ಯದ ಜೊತೆ ಆರೋಗ್ಯ ವ್ಯವಸ್ಥೆಗೆ ಚಿಂತನೆ

Srinivasa Murthy VN
Updated On : 2 Aug 2013, 1:28 am

ಕ.ಪ್ರ.ವಾರ್ತೆ ಕೋಲಾರ ಆ.1
ಬಿಪಿಎಲಲ್ವರ್ಗಕ್ಕೆ ಅನ್ನಭಾಗ್ಯ ಯೋಜನೆಯ ಜಾರಿಗೆ ನಂತರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗಾಗಿ ಕ್ಷೀರ ಭಾಗ್ಯ ಯೋಜನೆಯನ್ನು ಅನುಷ್ಠಾನಕ್ಕೆ ತಂದಿರುವ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ತಿಳಿಸಿದರು.
ನಗರದ ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಿ ಸಚಿವರು ಮಾತನಾಡುತ್ತಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇರುವುದರಿಂದ ದುರದೃಷ್ಟಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದ ಸಚಿವರು, ಮಕ್ಕಳಲ್ಲಿ ಕಂಡು ಬರುತ್ತಿರುವ ಅಪೌಷ್ಟಿಕತೆ ಹಾಗೂ ರಕ್ತ ಹೀನತೆಯನ್ನು ನಿವಾರಣೆ ಮಾಡಲು ಜಾರಿಗೆ ತಂದಿರುವ ಕ್ಷೀರ ಭಾಗ್ಯ ಯೋಜನೆಯನ್ನು ಯಶಸ್ವಿಗೊಳಿಸಲು ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಮಕ್ಕಳ ಪೋಷಕರು ಸಹಕಾರ ನೀಡಬೇಕೆಂದು ಹೇಳಿದರು.
ಅನ್ನಭಾಗ್ಯ ಯೋಜನೆ ಈಗಾಗಲೇ ಜಾರಿಗೆ ತರಲಾಗಿದ್ದು ಯಶಸ್ವಿಯಾಗಿ ಸಾಗುತ್ತಿದೆ. ಇದೇ ರೀತಿ ಕ್ಷೀರ ಭಾಗ್ಯ ಯೋಜನೆಯು ಫಲಪ್ರದವಾಗುವುದೆಂಬ ವಿಶ್ವಾಸವಿದೆ, ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಲು ಪ್ರತಿ ತಾಲೂಕಿಗೆ ಎರಡು ತಜ್ಞ ವೈದ್ಯರ ತಂಡ ಹಾಗೂ ಚಿಕಿತ್ಸೆಗಾಗಿ ಬೇಕಾದ ಎಲ್ಲ ರೀತಿಯ ಸೌಕರ್ಯ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದ್ದು ಯೋಜನೆ ಅನುಷ್ಠಾನದಿಂದ ಮಕ್ಕಳ ಆರೋಗ್ಯ ಸಮಸ್ಯೆ ನಿವಾರಣೆ ಆಗುತ್ತದೆ ಎಂದರು.
ಸರ್ಕಾರ ಬಡವರಿಗಾಗಿ ಅನ್ನಭಾಗ್ಯ, ಮಕ್ಕಳಿಗಾಗಿ ಕ್ಷೀರ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ತನ್ನ ಕರ್ತವ್ಯವನ್ನು ಪಾಲಿಸುತ್ತಿದ್ದು, ಪೋಷಕರು ಸರ್ಕಾರ ಎಲ್ಲ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ತಮ್ಮ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಕರೆ ನೀಡಿದರು.
ಎಂಪಿಗಳು, ಎಂಎಲ್‌ಎಗಳು, ಐಎಎಸ್, ಐಪಿಎಸ್ ಅಧಿಕಾರಿಗಳು ಬಲಿಷ್ಟವಾಗುವುದರಿಂದ ದೇಶ ಬಲಿಷ್ಠವಾಗುತ್ತದೆ ಎಂದು ಭಾವಿಸುವುದರಲ್ಲಿ ಅರ್ಥವಿಲ್ಲ, ಬಡ ಮಕ್ಕಳ ಆರೋಗ್ಯ, ಶೈಕ್ಷಣಿಕವಾಗಿ ಸುಧಾರಣೆಯಾಗಿ ಈ ಮಕ್ಕಳು ಮುಂದೆ ಎಲ್ಲ ರಂಗಗಳಲ್ಲಿ ಸದೃಢರಾಗುವಂತ ವಾತಾವರಣ ನಿರ್ಮಾಣವಾದಾಗ ಮಾತ್ರ ದೇಶ ಬಲಿಷ್ಟವಾಗುತ್ತದೆ ಎಂದು ತಿಳಿಸಿದ ಸಚಿವರು, ಸರ್ಕಾರದ ಯಾವುದೇ ಜನಪರ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಹಕಾರ ಅತಿ ಮುಖ್ಯವೆಂದು ಅಭಿಪ್ರಾಯಿಸಿದರು.
ಹೆತ್ತವರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಮಯ ಮೀಸಲಿಡಬೇಕು, ಸರ್ಕಾರ ಎಲ್ಲ ಕೊಡುತ್ತಿದೆ, ಉಚಿತವಾಗಿ ಅಂಕಗಳನ್ನು ನೀಡಲಿ ಎಂದು ಆಶಿಸುವುದು ಸರಿಯಲ್ಲ, ಗೃಹಪ್ರವೇಶ, ಮದುವೆ, ಶಾಪಿಂಗ್ ಹಾಗೂ ಇನ್ನಿತರ ಕಾರ್ಯಗಳಿಗೆ ಬೆಳಿಗ್ಗೆ 9ರಿಂದಲೇ ಸಿದ್ಧವಾಗುವ ತಾಯಂದಿರು ತಮ್ಮ ಮಕ್ಕಳ ಯೋಗ ಕ್ಷೇಮ,ಭವಿಷ್ಯದ ಬಗ್ಗೆ ಕಾಳಜಿ ವಹಿಸಲು ಸಮಯ ಸಿಗುತ್ತಿಲ್ಲವೆಂದು ಹೇಳುವುದು ನೋವಿನ ಸಂಗತಿ ಎಂದರು. ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆ ಇರುವುದರಿಂದ ಅದಕ್ಕೆ ಬೇಕಾದ ಮಾತ್ರೆಗಳನ್ನು ನೀಡಲಾಗುತ್ತಿದೆ, ಶಾಲಾ ಮಕ್ಕಳಿಗೆ ಉಚಿತ ಸೈಕಲ್, ಸಮವಸ್ತ್ರ, ಮಧ್ಯಾಹ್ನದ ಬಿಸಿ ಊಟ, ಹಾಲು ಇನ್ನಿತರ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಿರುವುದರಿಂದ ತಂದೆ-ತಾಯಿಗಳು ಮಕ್ಕಳನ್ನು ಚನ್ನಾಗಿ ಓದಿಸಿ ದೇಶದ ಸಂಪತ್ತನ್ನಾಗಿ ಬೆಳಿಸಿ ಎಂದು ತಿಳಿಸಿದರು. ಶಾಲಾ ಮಕ್ಕಳಿಗೆ ಹಾಲಿನ ವ್ಯವಸ್ಥೆ ಮಾಡಿರುವುದರಿಂದ ಹೈನುಗಾರಿಕೆಯ ಅಭಿವೃದ್ಧಿ ಜೊತೆಗೆ ಗೋಸಂತತಿ ಹೆಚ್ಚಳಕ್ಕೂ ಅನುಕೂಲವಾಗಿದೆ ಎಂದು ಅಬಿಪ್ರಾಯಿಸಿದರು.
ಶಾಸಕ ಆರ್. ವರ್ತೂರ್ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು, ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಜಿ.ಪಂ ಅಧ್ಯಕ್ಷೆ ಚೌಡೇಶ್ವರಿ, ಉಪಾಧ್ಯಕ್ಷೆ ರತ್ನಮ್ಮ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮಂಜುನಾಥರೆಡ್ಡಿ, ಜಿ.ಪಂ ಸದಸ್ಯೆ ಮಂಗಮ್ಮ ಮುನಿಸ್ವಾಮಿ, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಎನ್.ಹನುಮೇಶ್, ಕೋಚಿಮುಲ್ ಅಧಿಕಾರಿ ನಾರಾಯಣಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ವೆಂಕಟೇಶಮೂರ್ತಿ,ಎಸಿ ಆಯುಷಾ ಫರ್ವೀನ್, ತಹಸೀಲ್ದಾರ್ ಸೌಮ್ಯಗೌಡ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲಲ್ಕುಮಾರ್, ಕೂಡಾ ಆಯುಕ್ತ ನಾಗರಾಜಗೌಡ, ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಸಮನ್ವಯಾಧಿಕಾರಿ ಸಿದ್ದರಂಗಯ್ಯ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಲೀಲಾವತಿ, ಬಿಇಓ ಶಿವಲಿಂಗಯ್ಯ ಇದ್ದರು.
ಜಿ.ಪಂ ಸಿಇಒ ಝುಲ್ಫಿಖಾರ್ ಉಲ್ಲಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಿಡಿಪಿಐ ಪದ್ಮನಾಭ್ ವಂದಿಸಿ, ಶಿಕ್ಷಕ ಪ್ರವೀಣ್ ನಿರೂಪಿಸಿದರು.

ಆತುರದಿಂದ ಕ್ಷೀರ ಭಾಗ್ಯ ಯೋಜನೆ ಜಾರಿ: ವರ್ತೂರ್
ಕೋಲಾರ: ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆ ಜಾರಿಗೆ ತಂದಿರುವುದು ಸಂತಸ ಉಂಟು ಮಾಡಿದೆ. ಆದರೆ ಈ ಯೋಜನೆಯನ್ನು ಆಗಸ್ಟ್ 1 ರ ಬದಲಿಗೆ ಸೆಪ್ಟೆಂಬರ್ ತಿಂಗಳಲ್ಲಿ ಅನುಷ್ಠಾನಕ್ಕೆ ತರಬೇಕಾಗಿತ್ತೆಂದು ಕೋಲಾರ ಕ್ಷೇತ್ರದ ಶಾಸಕ ಆರ್. ವರ್ತೂರ್ ಪ್ರಕಾಶ್ ಅಭಿಪ್ರಾಯಪಟ್ಟರು.
ಅವರು ನಗರದ ಸರ್ಕಾರಿ ನೂತನ ಪ್ರೌಢಶಾಲೆಯಲ್ಲಿ ಜಿಲ್ಲಾ ಆಡಳಿತದಿಂದ ಹಮ್ಮಿಕೊಂಡಿದ್ದ ಕ್ಷೀರ ಭಾಗ್ಯ ಯೋಜನೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೀರ ಭಾಗ್ಯ ಯೋಜನೆ ಶಾಲಾ ಮಕ್ಕಳ ಆರೋಗ್ಯ ದೃಷ್ಟಿಯಿಂದ ಜಾರಿಗೆ ತಂದಿರುವುದಕ್ಕೆ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ. ಆದರೆ ಆತುರದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು ಏಕೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅನೇಕ ಶಾಲೆಗಳಲ್ಲಿ ಹಾಲು ತಯಾರಿಸಲು ಪಾತ್ರೆ, ಗ್ಯಾಸ್ ಸಿಲಿಂಡರ್‌ಗಳ ವ್ಯವಸ್ಥೆ ಮಾಡಿಲ್ಲ, ಶಾಲಾ ಅಭಿವೃದ್ಧಿ ಸಮಿತಿಗಳಲ್ಲಿ ಹಣವಿಲ್ಲ, ಸರ್ಕಾರದ ಆದೇಶದ ಪ್ರತಿಯನ್ನು ಆಧರಿಸಿ ಶಾಲೆಗಳಲ್ಲಿ ಹಾಲಿನ ಪುಡಿಯನ್ನು ಹಾಲಾಗಿ ಪರಿವರ್ತನೆ ಮಾಡುವುದು ಹೇಗೆ ಸಾಧ್ಯವೆಂದು ಪ್ರಶ್ನಿಸಿದ ಅವರು, ಸೆಪ್ಟೆಂಬರ್ ತಿಂಗಳಲ್ಲಿ ಯೋಜನೆ ಜಾರಿಗೆ ಬಂದಿದ್ದರೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡು ಕ್ಷೀರ ಭಾಗ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬಹುದಾಗಿತ್ತು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ಜಿಲ್ಲೆಯಿಂದ ಬಂದಿರುವ ಅಧಿಕಾರಿಯು ಸರಿಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.
ಸಿದ್ದು ಬಗ್ಗೆ ಗುಣಗಾನ: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಡವರ ಬಗ್ಗೆ ಕಾಳಜಿ ಇರುವುದರಿಂದ ಕ್ಷೀರ ಯೋಜನೆ ಜಾರಿಗೆ ತಂದಿದ್ದಾರೆ. ಅದೇ ರೀತಿ ಭಾಗ್ಯಲಕ್ಷ್ಮೀ, ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ ಮುಂದುವರೆಸಿರುವುದು ಸೂಕ್ತವಾಗಿದೆ ಎಂದು ತಿಳಿಸಿದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮಂಜುನಾಥರೆಡ್ಡಿ ಮಾತನಾಡಿ, ಮುಖ್ಯಮಂತ್ರಿಗಳು ಹಾಲು ಉತ್ಪಾದಕರಿಗೆ 2 ರು.ಇದ್ದ ಪ್ರೋತ್ಸಾಹ ಧನವನ್ನು 4 ರು.ಗಳಿಗೆ ಹೆಚ್ಚಳ ಮಾಡಿರುವುದರಿಂದ ಕೋಚಿಮುಲ್ ವ್ಯಾಪ್ತಿಯಲ್ಲಿ 7.50 ಲಕ್ಷವಿದ್ದ ಹಾಲು ಉತ್ಪಾದನೆ 9ಲಕ್ಕೆ ಏರಿಕೆ ಕಂಡಿದೆ, ಇದರಿಂದ ಕ್ಷೀರ ಭಾಗ್ಯ ಯೋಜನೆಗೂ ಅನುಕೂಲವಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement