ಕ್ಷೀರಭಾಗ್ಯದಿಂದ ಮಕ್ಕಳ ಆರೋಗ್ಯ ವೃದ್ಧಿ
ಗೌರಿಬಿದನೂರು: ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆ ಇರಬಾರದು ಎಂಬ ಕಾರಣದಿಂದ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ವಾರದ 3 ದಿನ ಹಾಲನ್ನು ವಿತರಿಸಲಾಗುತ್ತಿದೆ. ಮಹಾತ್ವಾಕಾಂಕ್ಷಿ ಈ ಕ್ಷೀರಭಾಗ್ಯ ಯೋಜನೆಯಿಂದ ಗ್ರಾಮೀಣ ಬಡಮಕ್ಕಳು ಪೌಷ್ಟಿಕ ಆಹಾರದ ಕೊರತೆ ಇಲ್ಲದಂತೆ ಆರೋಗ್ಯವಾಗಿ, ಬೌದ್ಧಿಕ ಹಾಗೂ ದೌಹಿಕವಾಗಿ ಬೆಳೆಯಲು ಸಹಾಯಕವಾಗುತ್ತದೆ ಎಂದು ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ಎಸ್‌ಎಸ್‌ಇಎ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದ ಎಲ್ಲಾ ಮಕ್ಕಳು ಮತ್ತು ತಾಯಂದಿರು ಸಂತೋಷಪಡುವ ದಿನ ಇದು ಎಂದ ಅವರು, ಈ ಯೋಜನೆ ಸಣ್ಣದೇನಲ್ಲ ಬಹುದೊಡ್ಡ ದೂರದೃಷ್ಟಿ ಮತ್ತು ಕಳಕಳಿಯ ಕಾರ್ಯಕ್ರಮ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಜಯಚಂದ್ರ, ಪಶುಸಂಗೋಪನೆ ಸಚಿವರ ಮತ್ತು ಕೆಎಂಎಫ್ ಹಾಲುಮಂಡಳಿ ಸೇರಿದಂತೆ ಎಲ್ಲರೂ ಸಂಯುಕ್ತವಾಗಿ ರೂಪಿಸಿರುವ ಯೋಜನೆ ಎಂದರು.
ದೇಶದಲ್ಲಿಯೇ ನಮ್ಮ ರಾಜ್ಯ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನ ಹೊಂದಿದ್ದು, ರಾಜ್ಯ ರೈತರಿಗೆ ನೀಡುತ್ತಿರುವ 4 ಪ್ರೋತ್ಸಾಹ ಧನದಿಂದ ಮುಂಬರುವ ದಿನಗಳಲ್ಲಿ ಪ್ರಥಮ ಸ್ಥಾನ ಗಳಿಸಲಿದೆ ಎಂದು ಹೇಳಿದರು.
ಚಿಕೋಮುಲ್‌ನ ಉಪ ವ್ಯವಸ್ಥಾಪಕ ಚಂದ್ರಮೋಹನ್ ಮಾತನಾಡಿ, 343 ಶಾಲೆಗಳಿಂದ 31,800 ಮಕ್ಕಳಿಗೆ 349 ಅಂಗನವಾಡಿ ಕೇಂದ್ರದಿಂದ 16ಸಾವಿರ ವಿದ್ಯಾರ್ಥಿಗಳಿಗೆ ಹಾಲನ್ನು ನೀಡಲಾಗುತ್ತಿದ್ದು ರೈತರೇ ಉತ್ಪಾದಿಸಿ ಹಾಲು ರೈತರ ಮಕ್ಕಳಿಗೆ ಪೌಷ್ಟಿಕ ಆಹಾರವಾಗಿ ಬಳಕೆಯಾಗುತ್ತಿರುವುದು ಸಂತೋಷದ ವಿಷಯ ಎಂದರು.
ಅಕ್ಷರದ ದಾಸೋಹದ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ತಾಲೂಕಿನಲ್ಲಿ 48,040 ಮಕ್ಕಳು ಅಕ್ಷರ ದಾಸೋಹದ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ತಹಸೀಲ್ದಾರ್ ಡಾ.ಭಾಸ್ಕರ್, ತಾಪಂ ಅಧ್ಯಕ್ಷ ನಿರಂಜನ್, ಕಾರ್ಯನಿರ್ವಹಣಾಧಿಕಾರಿ ರೆಡ್ಡಪ್ಪ, ಬಿಇಒ ಜಗದೀಶ್, ಜಿಪಂ ಸದಸ್ಯ ಚಿನ್ನಪ್ಪಯ್ಯ, ಪುರಸಭಾ ಸದಸ್ಯ ನರಸಿಂಹಮೂರ್ತಿ, ಪ್ರಾಂಶುಪಾಲ ಅಸಾದುಲ್ಲಾ ಖಾನ್ ಉಪಸ್ಥಿತರಿದ್ದರು.