ನಾಳೆ, ನಾಡಿದ್ದು ಬೃಹತ್ ಉದ್ಯೋಗ ಮೇಳ
ಚಿಕ್ಕಬಳ್ಳಾಪುರ: ಉದ್ಯೋಗಬಯಸಿ ಅಲೆದಾಡಿ ಅಲೆದಾಡಿ ಕೊನೆಗೆ ತಮಗೆ ಸೂಕ್ತವಾದ ಕೆಲಸ ಸಿಗದೇ ಪರದಾಡುವ ನಿರುದ್ಯೋಗಿಗಳಾಗಿ ಚಿಕ್ಕಬಳ್ಳಾಪುರದಲ್ಲಿ ಆ.3 ಮತ್ತು 4 ರಂದು ಉದ್ಯೋಗ ಮೇಳ ನಡೆಯಲಿದೆ.
ಈ ಮೇಳದಲ್ಲಿ ಇನ್ಫೋಸೀಸ್, ವಿಡಿಯೋಕಾನ್, ಟಿಸಿಎಸ್, ನಾರಾಯಣ ಹೃದಯಾಲಯ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳು ಭಾಗವಹಿಸಿ ಉದ್ಯೋಗಾಕಾಂಕ್ಷಿಗಳ ಅರ್ಹತೆಗೆ ಅನುಗುಣವಾಗಿ ಸಂದರ್ಶನ ನಡೆಸಿ ಉದ್ಯೋಗವನ್ನು ನೀಡಲಿವೆ.
ಕಳೆದ ಮೂರು ವರ್ಷಗಳಿಂದಲೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ (ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಬೆಂಗಳೂರು ನಗರ ಜಿಲ್ಲೆಯ ಯಲಹಂಕ, ರಾಮನಗರ ಜಿಲ್ಲೆಯ ಸೋಲೂರು ಹೋಬಳಿ) ಉದ್ಯೋಗಾಕಾಂಕ್ಷಿಗಳಿಗಾಗಿ ಉದ್ಯೋಗ ಮೇಳವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಈ ಬಾರಿಯು ಸಹ Employment cum-Career Development Fair-2013 ಬೃಹತ್ ಉದ್ಯೋಗ ಮೇಳವು ನಗರದ ಹೊರ ವಲಯದಲ್ಲಿರುವ ಎಸ್.ಜೆ.ಸಿ.ಐ.ಟಿ ಕಾಲೇಜಿನಲ್ಲಿ ನಡೆಯಲಿದೆ. ಕಳೆದ ವರ್ಷಕ್ಕಿಂತ ಇನ್ನೂ ಹೆಚ್ಚಿಗೆ ಯಶಸ್ಸನ್ನು ಸಾಧಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು ಅಲ್ಲದೇ ಫ್ಲೆಕ್ಸ್, ಬ್ಯಾನರ್, ಕರಪತ್ರ ಸೇರಿದಂತೆ ನಾನಾ ಮಾಧ್ಯಮಗಳ ಮೂಲಕ ಉದ್ಯೋಗ ಮೇಳಕ್ಕೆ ಅದ್ಧೂರಿ ಪ್ರಚಾರವನ್ನು ಕೈಗೊಳ್ಳಲಾಗಿದೆ.ಈಗಾಗಲೇ ಉದ್ಯೋಗಾಕಾಂಕ್ಷಿಗಳ ನೋಂದಣಿ ಕಾರ್ಯ ಭರದಿಂದ ಸಾಗುತ್ತಿದೆ.
ಹಿಂದಿನ ವರ್ಷ ಜುಲೈ 14 ಮತ್ತು 15 ರಂದು ಉದ್ಯೋಗ ಮೇಳ ನಡೆದು ಸುಮಾರು 8 ಸಾವಿರ ಕ್ಕೂ ಮೇಲ್ಪಟ್ಟು ಉದ್ಯೋಗಾಕಾಂಕ್ಷಿಗಳು ಉದ್ಯೋಗವನ್ನು ಪಡೆದುಕೊಂಡಿದ್ದು ಸುಮಾರು 160 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು. ಈ ಬಾರಿಯು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗವನ್ನು ನೀಡುವ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮೇಳದ ಉದ್ಘಾಟನೆ: ಚಿಕ್ಕಬಳ್ಳಾಪುರ ನಗರದ ಹೊರ ವಲಯದಲ್ಲಿರುವ ಎಸ್.ಜೆ.ಸಿ.ಐ.ಟಿ. ಕಾಲೇಜಿನಲ್ಲಿ ಆ.3 ರಂದು ಬೆಳಿಗ್ಗೆ 9 ಗಂಟೆಗೆ ಬೃಹತ್ ಉದ್ಯೋಗ ಮೇಳದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ತಿಳಿಸಿದ್ದಾರೆ.
ಎಸೆಜೆಸಿಐಟಿ ಕಾಲೇಜಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ, ಕಿಸಾನ್ಸ್ಭಾ ಟ್ರಸ್ಟ್, ಕೆವಿಟಿಎಸ್ಡಿಸಿ, ಆಳ್ವಾಸ್ ಎಜುಕೇಷನ್ ಫೌಂಡೇಷನ್, ನಿಟ್ಟಿ ಮೀನಾಕ್ಷಿ ತಾಂತ್ರಿಕ ಸಂಸ್ಥೆ ವತಿಯಿಂದ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದ್ದು ಕೇಂದ್ರ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ ಉದ್ಯೋಗ ಮೇಳ ಉದ್ಘಾಟಿಸಲಿದ್ದಾರೆ. ಸಚಿವರಾದ ಕೆ.ಎಚ್. ಮುನಿಯಪ್ಪ, ಪರಮೇಶ್ವರ್ ನಾಯಕ್, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ವಿಧಾನಸಭೆಯ ಉಪಸಭಾಪತಿ ಎನ್.ಹೆಚ್. ಶಿವಶಂಕರರೆಡ್ಡಿ, ಶಾಸಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳು, ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತರು, ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳು ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ 3 ನೇ ಉದ್ಯೊಗ ಮೇಳ ಇದಾಗಿದ್ದು, ಈ ಬಾರಿ 250 ಕ್ಕೂ ಹೆಚ್ಚು ಕಂಪನಿಗಳು ನೋಂದಣಿ ಮಾಡಿಕೊಂಡಿವೆ. 2012 ರಲ್ಲಿ 22,270 ಜನರು ಉದ್ಯೋಗಕ್ಕೆ ನೋಂದಣಿ ಮಾಡಿಕೊಂಡಿದ್ದರೆ, ಈ ಬಾರಿ ಈ ವರೆಗೆ 24,170 ಮಂದಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಉದ್ಯೋಗಾಕಾಂಕ್ಷಿಗಳು ಈಗಲೂ ಢಿಢಿಢಿ.್ಡಜಣ್ಟ್ಜಛಟಜಟಛ.್ಛ್ಟಟ, ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಊಟಛ್ಝಟಣ್ಝಟಿಜ್ಟಿಣ್ಡಜ್ಟ್ಜಛಟಜಟಛ.್ಛ್ಟಟ ಗೆ ಬಯೋಡೆಟಾ ಕಳುಹಿಸಬಹುದು. ಈ ಬಾರಿ ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಥೆಗಳಿಗೆ ಬಣ್ಣದ ಕೋಡಿಂಗ್ ವ್ಯವಸ್ಥೆ ಲಭ್ಯವಿದ್ಧು, ಆಯ್ಕೆಗೆ ಸರಳ ಮಾರ್ಗವನ್ನು ಅನುಸರಿಸಲಾಗುವುದಲ್ಲದೇ ಪ್ರದರ್ಶನ ಫಲಕಗಳನ್ನು ಸಹ ಅಳವಡಿಸಲಾಗುತ್ತಿದೆ ಎಂದವರು ತಿಳಿಸಿದರು. ಉದ್ಯೋಗಾಕಾಂಕ್ಷಿಗಳು ಯಾವುದೇ ಭಯವಿಲ್ಲದೆ ಪಾಲ್ಗೊಂಡು ಉದ್ಯೋಗ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಅವರು ಕೋರಿದ್ದಾರೆ.