ಪ್ರಚಾರ ಇಲ್ಲದೆ ಕ್ಷೀರಭಾಗ್ಯ ಜಾರಿಗೆ ಶಾಸಕರ ಆಕ್ಷೇಪ, ಅಧಿಕಾರಿಗಳ ತರಾಟೆ
ಬಂಗಾರಪೇಟೆ: ಶಾಲಾ ಮಕ್ಕಳಿಗೆ ಹಾಲು ಕೊಡುವ ಕ್ಷೀರಭಾಗ್ಯ ಯೋಜನೆಯನ್ನು ವ್ಯಾಪಕ ಪ್ರಚಾರ ಮಾಡಿ ಸಾರ್ವಜನಿಕರಿಗೆ ತಿಳಿಯುವಂತೆ ಕಾರ್ಯಕ್ರಮ ಆಯೋಜಿಸದೆ ಕೇಲವ ನಾಲ್ಕು ಗೋಡೆಗಳ ನಡುವೆ ಹಮ್ಮಿಕೊಂಡಿದ್ದನ್ನು ಶಾಸಕ ಎಸ್.ಎನ್. ನಾರಾಯಣಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದ ಘಟನೆ ಗುರುವಾರ ನಡೆಯಿತು.
ಬಡವರಿಗೆ 1ರು.ಗೆ 30ಕೆಜಿ ಅಕ್ಕಿ ಕೊಡುವ ಯೋಜನೆ ಜಾರಿಗೆ ಬಂದ ಬೆನ್ನಲ್ಲೆ ಆಗಸ್ಟ್ 1ರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ವಾರಕ್ಕೆ ಮೂರು ದಿನ ಹಾಲು ಕೊಡುವ ಕ್ಷೀರಭಾಗ್ಯ ಯೋಜನೆಯನ್ನು ಅಕ್ಷರದಾಸೋಹ ಅಧಿಕಾರಿಗಳು ಕ್ಷೇತ್ರದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿ ಸಾರ್ವಜನಿಕ ಸಭೆಯನ್ನು ಏರ್ಪಡಿಸದೆ ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಉದ್ಘಾಟನೆಗೆ ಮುಂದಾಗಿದ್ದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸರ್ಕಾರ ಜನಪರವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದರೆ ಅದನ್ನು ಜನರಿಗೆ ತಿಳಿಸಬೇಕು ಅದು ಬಿಟ್ಟು ಬೇಕಾಬಿಟ್ಟಿಯಾಗಿ ನೆಪಕ್ಕೆ ಮಾತ್ರ ಯೋಜನೆ ಜಾರಿಗೊಳಿಸಿದರೆ ಹೇಗೆ ಎಂದು ಪ್ರಶ್ನಿಸಿದರು.
ಸರ್ಕಾರ ಯಾವುದೇ ಯೋಜನೆಗಳು ಪಾರದರ್ಶಕವಾಗಿರಬೇಕು ಅಧಿಕಾರಿಗಳು ನಿರ್ಲಕ್ಷ್ಯತನದಿಂದ ಅಥವಾ ಬೇಜವಾಬ್ದಾರಿಯಿಂದ ಅನುಷ್ಠಾನಗೊಳಿಸಬಾರದು ಇದನ್ನು ತಾವು ಎಂದಿಗೂ ಸಹಿಸುವುದಿಲ್ಲ, ಕೋಟ್ಯಂತರ ವೆಚ್ಚ ಮಾಡಿ ಯೋಜನೆ ಜಾರಿಗೆ ತಂದರೆ ಅದನ್ನು ಜನರಿಗೆ ಮುಟ್ಟಿಸದೆ ಮಾಡಿದರೆ ಉಪಯೋಗ ಏನು ಇಲ್ಲ ಇನ್ನು ಮುಂದೆ ಮತ್ತೆ ಇಂತಹ ಘಟನೆ ಮರುಕಳಿಸದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಖಡಕ್ ಆಗಿ ಎಚ್ಚರಿಸಿದರು. ಮಕ್ಕಳಿಗೆ ಹಾಲು ಕೊಟ್ಟರೆ ವಿನ ಯಾವುದೇ ಭಾಷಣ ಮಾಡಲು ಮುಂದಾಗಿಲ್ಲ ಅಧಿಕಾರಿಗಳು ಭಾಷಣ ಮಾಡುವಂತೆ ಮನವಿ ಮಾಡಿದರೂ ಶಾಸಕರು ಒಪ್ಪಲಿಲ್ಲ ಕೇವಲ ಶಾಲಾ ಮಕ್ಕಳ ಮುಂದೆ ಭಾಷಣ ಮಾಡಿದರೆ ಅವರಿಗೆ ಏನು ತಿಳಿಯುತ್ತದೆ ಎಂದು ಮುನಿಸಿಕೊಂಡರು.
ಆಗಸ್ಟ್ 5ರಿಂದ ತಾವು ಗ್ರಾಮಸಭೆಗಳನ್ನು ಹಮ್ಮಿಕೊಂಡಿದ್ದು ಪ್ರತಿದಿನ ಮೂರು ಪಂಚಾಯ್ತಿಗಳಲ್ಲಿ ಸಭೆ ನಡೆಯಲಿದ್ದು ಈ ಸಭೆಗೆ ಎಲ್ಲಾ ಇಲಾಖೆ ಮುಖ್ಯಸ್ಥರೇ ಭಾಗವಹಿಸಬೇಕು ಉದಾಸಿನ ಮಾಡಿ ಸಹಾಯಕರನ್ನು ಕಳುಹಿಸಿದರೆ ಪರಿನಾಮ ನೆಟ್ಟಗಿರುವುದಿಲ್ಲ ಎಂದು ಶಾಸಕ ನಾರಾಯಣಸ್ವಾಮಿ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟರು. ಗ್ರಾಮಗಳಲ್ಲಿ ಜನರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಗ್ರಾಮಗಳಲ್ಲೇ ಸಭೆ ಮಾಡಿ ಬಗೆಹರಿಸಬೇಕು ಅವರನ್ನು ಪಟ್ಟಣಕ್ಕೆ ಅಲೆಸದಂತೆ ಮಾಡುವ ಉದ್ದೇಶವೇ ಈ ಗ್ರಾಮಸಭೆಯಾಗಿದ್ದು ಅಧಿಕಾರಿಗಳು ಸಮಯ ಪಾಲನೆ ಮಾಡಬೇಕು.
ತಾಪಂ ಅಧ್ಯಕ್ಷೆ ರೇಣುಕಾ ಬಾಲಚಂದ್ರರರು ಕ್ಷೀರಭಾಗ್ಯ ಕಾರ್ಯಕ್ರಮಕ್ಕೆ ತಡವಾಗಿ ಬಂದಿದಕ್ಕೆ ಶಾಸಕರು ನೋಡಮ್ಮ ಹಿಂದಿನ ಶಾಸಕರಂತೆ ನಾನು ಕಾರ್ಯಕ್ರಮಗಳಿಗೆ ತಡವಾಗಿ ಬರುವವನಲ್ಲ ಸಮಯಕ್ಕೆ ತಕ್ಕಂತೆ ಬರುವೆ ನಾವು ಜನರಿಗಾಗಿ ಕಾಯಬೇಕು ನಮಗಾಗಿ ಜನರು ಕಾಯಬಾರದು ನೀವು ಇನ್ನು ಮುಂದೆ ಸಮಯ ಪ್ರಜ್‌ಞೆಯನ್ನು ಬೆಳೆಸಿಕೊಂಡರೆ ಒಳ್ಳೆಯದು ಎಂದು ತಿಳುವಳಿಕೆ ನೀಡಿದರು.